ಕರ್ನಾಟಕ

ಬೆಳಗಾವಿ: ಇಂಧನ ವ್ಯಾಗನ್‌ಗೆ ಬೆಂಕಿ: ಭಾರಿ ಹಾನಿ

Pinterest LinkedIn Tumblr

fi

ಬೆಳಗಾವಿ: ತಾಲ್ಲೂಕಿನ ದೇಸೂರಿನ ರೈಲು ನಿಲ್ದಾಣದ ಪಕ್ಕದಲ್ಲಿರುವ ‘ಇನ್‌­ಲ್ಯಾಂಡ್‌ ಕಂಟೇನರ್‌ ಡಿಪೊ’ದಲ್ಲಿ ಭಾರತ್‌ ಪೆಟ್ರೋಲಿಯಂ ಕಾರ್ಪೊ­ರೇಷನ್‌ (ಬಿಪಿಸಿ) ಕಂಪೆನಿಗೆ ಸೇರಿದ್ದ ಪೆಟ್ರೋಲ್‌ ಹಾಗೂ ಡೀಸೆಲ್‌ ತುಂಬಿದ್ದ ಎರಡು ವ್ಯಾಗನ್‌ಗಳಿಗೆ ಆಕಸ್ಮಿಕವಾಗಿ ಶನಿವಾರ ಬೆಂಕಿ ಬಿದ್ದ ಪರಿಣಾಮ ಅಂದಾಜು ₨ 1 ಕೋಟಿಗಳಷ್ಟು ಹಾನಿಯಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ತಲಾ 65 ಸಾವಿರ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ತುಂಬಿದ್ದ ವ್ಯಾಗನ್‌ಗಳು ಸುಟ್ಟು ಕರಕಲಾಗಿವೆ.

ಇಂಧನ ತುಂಬಿದ್ದ ವ್ಯಾಗನ್‌­ಗಳೊಂದಿಗೆ ಸರಕು ಸಾಗಣೆ ರೈಲು ‘ಇನ್‌ಲ್ಯಾಂಡ್‌ ಕಂಟೇನರ್‌ ಡಿಪೊ’ಗೆ ಬಂದಿತ್ತು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಿಪಿಸಿಯ ಸಂಗ್ರಹಾಗಾರಕ್ಕೆ ವ್ಯಾಗನ್‌­ನಿಂದ ಇಂಧನವನ್ನು ಪೈಪ್‌ ಮೂಲಕ ಸರಬರಾಜು ಮಾಡಲಾಗುತ್ತಿತ್ತು.

ಪೆಟ್ರೋಲ್‌ ತುಂಬಿದ್ದ ಎರಡನೇ ವ್ಯಾಗನ್‌­ನಲ್ಲಿ ಏಕಾಏಕಿ ಬೆಂಕಿ ಕಾಣಿಸಿ­ಕೊಂಡಿತು. ನಂತರ ಅದರ ಹಿಂದಿನ ಡೀಸೆಲ್‌ ವ್ಯಾಗನ್‌ಗೂ ಬೆಂಕಿ ಹತ್ತಿಕೊಂಡಿತು. ತಕ್ಷಣವೇ ಬಿಪಿಸಿಯ ತುರ್ತು ನಿರ್ವಹಣಾ ಸಿಬ್ಬಂದಿ ಕಾರ್ಯಾ­ಚರಣೆ ನಡೆಸಿ ಇತರ ವ್ಯಾಗನ್‌ಗಳಿಗೆ ಬೆಂಕಿ ಹರಡಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು ಎಂದು ಮೂಲಗಳು ತಿಳಿಸಿವೆ.

ಬೆಂಕಿಯು ಮುಗಿಲೆತ್ತರಕ್ಕೆ ಹೊತ್ತಿ ಉರಿಯುತ್ತಿತ್ತು. ವ್ಯಾಗನ್‌ಗಳನ್ನು ತಕ್ಷಣ ಪ್ರತ್ಯೇಕಗೊಳಿಸಲು ಸಾಧ್ಯವಾಗಲಿಲ್ಲ. ಬೆಳಗಾವಿ ಹಾಗೂ ಖಾನಾಪುರದಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ  11.45ಕ್ಕೆ ಬೆಂಕಿ ನಂದಿಸಿದರು.

ಈ ದುರ್ಘಟನೆಯಿಂದಾಗಿ ಹುಬ್ಬಳ್ಳಿ– ಮಿರಜ್‌ ಮಾರ್ಗದ ನಡುವೆ ಸುಮಾರು ಎರಡು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

‘ಮುಂಬೈನಿಂದ ಕಂಪೆನಿಯ ತಂಡವು ಬಂದು ಘಟನೆಯ ಕುರಿತು ತನಿಖೆ ನಡೆಸಲಿದೆ’ ಎಂದು ಬಿಪಿಸಿಯ ಪ್ರಭಾರ ಉಪ ವ್ಯವಸ್ಥಾಪಕ ಮಿಲಿಂದ್‌ ರಂಗಟೆ ತಿಳಿಸಿದರು.

ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿಯು­ತ್ತಿದ್ದಂತೆ ಅದನ್ನು ವೀಕ್ಷಿಸಲು ಸುತ್ತಲಿನ ಪ್ರದೇಶಗಳಿಂದ ಜನರು ತಂಡೋಪ ತಂಡವಾಗಿ ಸ್ಥಳಕ್ಕೆ ಬಂದು ಸೇರುತ್ತಿದ್ದರು. ಜನರನ್ನು ನಿಯಂತ್ರಿಸಲು ಸಾಧ್ಯವಾ­ಗದೇ, ಬಳಿಕ ಪೊಲೀಸರು ಲಾಠಿ ಬೀಸಿ ಚದುರಿಸಿದರು.

Write A Comment