ಕರ್ನಾಟಕ

ಹೇಗಿತ್ತು ಹೇಗಾಯಿತು ಕೈಲಾಸಂ ರಂಗಮಂದಿರ

Pinterest LinkedIn Tumblr

kailasam

ನಮ್ಮ ಆಧುನಿಕ ರಂಗಮಂದಿರಗಳು ಸಾಂಪ್ರದಾಯಿಕವೂ ಅಲ್ಲ, ಆಧುನಿಕವೂ ಅಲ್ಲ ಎಂಬಂತಾಗಿದೆ. ಇಲ್ಲಿ ನಿರ್ಮಾಣವಾಗುತ್ತಿರುವ ಹೆಚ್ಚಿನ ರಂಗಮಂದಿರಗಳು ಬೃಹತ್‌ ಕಾಂಕ್ರೀಟ್‌ ಕೊಟ್ಟಿಗೆಗಳು ಎಂದರೆ ತಪ್ಪಾಗಲಾರದು. ನಾಟಕಕ್ಕೆ ಸೂಕ್ತವಾದ ಹಾಗೂ ರಂಗಸ್ನೇಹಿಯಾದ ರಂಗಮಂದಿರಗಳು ಇಲ್ಲವೇ ಇಲ್ಲ ಎಂದು ಹೇಳುತ್ತಿಲ್ಲ. ಅಲ್ಲಲ್ಲಿ ಚದುರಿದಂತೆ ಬೆರಳೆಣಿಕೆಯ ಕೆಲವು ರಂಗಮಂದಿರಗಳು ಇವೆ ನಿಜ. ಆದರೆ, ಹೆಚ್ಚಿನವು ವ್ಯರ್ಥಸ್ಥಾವರಗಳು ಮಾತ್ರ…

– ಖ್ಯಾತ ರಂಗನಿರ್ದೇಶಕ ಪ್ರಸನ್ನ ಅವರ ಈ ಮಾತು ಕೇವಲ ಭಾರತೀಯ ರಂಗಭೂಮಿಗಷ್ಟೇ ಅಲ್ಲ. ಇಂದಿನ ಸಂದರ್ಭದಲ್ಲಿ ಬೆಂಗಳೂರಿಗೂ ಅನ್ವಯಿಸುತ್ತದೆ. ಒಂದು ಕಾಲದಲ್ಲಿ ಒಂದಿಲ್ಲೊಂದು ಸಾಂಸ್ಕೃತಿಕ ಚಟುವಟಿಕೆಯಿಂದ ಗಮನ ಸೆಳೆಯುತ್ತಿದ್ದ ರಂಗಮಂದಿರಗಳು ಇಂದು ಸೂಕ್ತ ನಿರ್ವಹಣೆ ಕಳೆದುಕೊಂಡು ಬೇರೆ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿವೆ. ಟ್ಯಾಗೋರ್‌ ವೃತ್ತದಲ್ಲಿರುವ ಟಿ.ಪಿ.ಕೈಲಾಸಂ ರಂಗಮಂದಿರದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಹಿರಿಯ ರಂಗ ನಿರ್ದೇಶಕ ಕಟ್ಟೆ ರಾಮಚಂದ್ರ ಅವರು ಚಿಕ್ಕವರಿದ್ದಾಗಿನಿಂದಲೂ ಟ್ಯಾಕ್ಸಿ ಸ್ಟ್ಯಾಂಡ್‌ನ (ಈಗಿನ ಟ್ಯಾಗೋರ್‌ ವೃತ್ತ) ಸುತ್ತಮುತ್ತ ಆದಂತಹ ಬದಲಾವಣೆಗಳಿಗೆ ಸಾಕ್ಷಿಯಾಗಿದ್ದಾರೆ. ‘ಇದು ಕೇವಲ ಸ್ಥಳವಲ್ಲ, ನನ್ನ ಹಳೆಯ ನೆನಪುಗಳ ಜೀಕುವಿಕೆಯ ತಾಣ’ ಎಂದು ಖುಷಿಯಿಂದ ನೆನೆಯುತ್ತಾರೆ. ‘ರಂಗಮಂದಿರ ನಿರ್ಮಾಣಕ್ಕೂ ಮುನ್ನ ಈ ಸ್ಥಳದಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿದ್ದವು.

ತುಂಬ ಹಿಂದೆ ಈ ಸ್ಥಳದಲ್ಲಿ ಟ್ಯಾಕ್ಸಿಗಳು ನಿಲ್ಲುತ್ತಿದ್ದವು. ಹಾಗಾಗಿ, ಈ ಸ್ಥಳಕ್ಕೆ ಟ್ಯಾಕ್ಸಿ ಸ್ಟ್ಯಾಂಡ್ ಎಂಬ ಹೆಸರಿತ್ತು. ಆ ಸಂದರ್ಭದಲ್ಲಿ ಯುವಕ ಸಂಘದ ಅಣ್ಣಯ್ಯ ಸಕ್ರಿಯರಾಗಿದ್ದರು. ಅವರು ಗಾಂಧಿವಾದಿ. ಇಲ್ಲಿ ಸರ್ಕಲ್‌ ಮಾಡಿಸಿದ್ದೂ ಅವರೇ. ಈಗ ಇರುವ ರಂಗಮಂದಿರದ ಸ್ಥಳದಲ್ಲಿ ಹಿಂದೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಟ್ಯೂಷನ್‌ ನಡೆಯುತ್ತಿತ್ತು. ಈ ಜಾಗದ ಪಕ್ಕದಲ್ಲೇ ಅಣ್ಣಯ್ಯ ಅವರು ವಾಚನಾಲಯವನ್ನೂ ಕಟ್ಟಿಸಿದ್ದರು’ ಎಂದು ತಮ್ಮ ಹಳೆಯ ನೆನಪುಗಳತ್ತ ಜಾರಿದರು ಕಟ್ಟೆ.

ಅಂದಹಾಗೆ, ಆ ಸಂದರ್ಭದಲ್ಲಿ ಬೆಂಗಳೂರಿಗೆ ಯಾರೇ ಪ್ರಮುಖ ನಾಯಕರು ಬಂದರೂ ಅವರನ್ನು ಅಣ್ಣಯ್ಯ ಈ ಸ್ಥಳಕ್ಕೆ ಕರೆತಂದು ಕಾರ್ಯಕ್ರಮ ನಡೆಸುತ್ತಿದ್ದರಂತೆ. ವಿನೋಬ ಭಾವೆ ಈ ಜಾಗಕ್ಕೆ ಬಂದಿದ್ದರಂತೆ. ರಾಜಕೀಯ ಚಟುವಟಿಕೆಗಳ ಜೊತೆಗೆ ಸಂಜೆ ಸಮಯದಲ್ಲಿ ಆರ್ಕೆಸ್ಟ್ರಾಗಳು ನಡೆಯುತ್ತಿದ್ದವಂತೆ. ನಾಟಕಗಳನ್ನು ಆಡುವ ಪ್ರಯತ್ನಗಳೂ ಆಗಾಗ ನಡೆಯುತ್ತಿದ್ದವಂತೆ.

‘ಕ್ರಮೇಣವಾಗಿ ಟ್ಯಾಕ್ಸಿ ಸ್ಟ್ಯಾಂಡ್‌ ಹೋಗಿ ಅದು ಟ್ಯಾಗೋರ್‌ ಸರ್ಕಲ್‌ ಆಯ್ತು. ಆಮೇಲೆ, ರಂಗಮಂದಿರ ಬಂತು. ಈಗಿನಂತೆ ಆಗ ಹೆಚ್ಚಿನ ಜನಸಂಖ್ಯೆ ಇರಲಿಲ್ಲ. ಹಾಗಾಗಿ, ಅಲ್ಲಿ ಕವಿ ಗೋಷ್ಠಿ, ಭಾಷಣ ಕಾರ್ಯಕ್ರಮ, ರಂಗಭೂಮಿಯ ಚಟುವಟಿಕೆಗಳು ಸಾಂಗವಾಗಿ ನಡೆಯುತ್ತಿದ್ದವು. ವಿಪರ್ಯಾಸ ಅಂದರೆ,  ರಂಗಮಂದಿರ ಕಟ್ಟಿದ ನಂತರ ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ. ಈ ರಂಗಮಂದಿರಕ್ಕೆ ಟಿ.ಪಿ.ಕೈಲಾಸಂ ಎಂಬ ಹೆಸರಿದೆ ಎಂಬುದೂ ಅನೇಕರಿಗೆ ತಿಳಿದಿಲ್ಲ. ನಿರ್ವಹಣೆ ಕಳೆದುಕೊಂಡ ನಂತರ ಈ ಸ್ಥಳ ಸೋಮಾರಿ ಕಟ್ಟೆಯಾಗಿ, ತಿಂದು ಬಿಸಾಡುವ ತೊಟ್ಟಿಯಾಗಿದೆ’ ಎಂಬ ಕಳವಳ ವ್ಯಕ್ತಪಡಿಸುತ್ತಾರೆ ಅವರು.

ಸದಾ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುತ್ತಿದ್ದ ಸ್ಥಳ ಇಂದು ಜನರು ಕಾಡು ಹರಟೆ ಹೊಡೆಯುವ ಜಾಗವಾಗಿ ಮಾರ್ಪಾಟಾಗಿದೆ. ರಂಗಮಂದಿರದ ಎದುರಿನಲ್ಲಿ ದೊಡ್ಡ ಬಯಲು ಇರಬೇಕು ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಂತೆ ಎದುರಿನಲ್ಲಿ ಹಾಗೂ ಗಿಡಗಳನ್ನು ನೆಡಲಾಗಿದೆ. ‘ನಿರ್ವಹಣೆ ಕಳೆದುಕೊಂಡು ಹಾಳಾಗುತ್ತಿರುವ ಈ ಜಾಗ ರಕ್ಷಿಸಬೇಕು.

ಅದಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ಇಲ್ಲಿನ ನಿವಾಸಿಯೊಬ್ಬರು ₨೧ಲಕ್ಷ ಖರ್ಚು ಮಾಡಿ ಟ್ಯಾಗೋರ್‌ ಕಂಚಿನ ಪ್ರತಿಮೆ ಮಾಡಿಸಿದ್ದಾರೆ. ಅದನ್ನು ಆದಷ್ಟು ಬೇಗ ಪ್ರತಿಷ್ಠಾಪಿಸುವ ಉದ್ದೇಶವಿದೆ. ಮೊದಲಿನಂತೆಯೇ ಈ ಸ್ಥಳದಲ್ಲಿ ರಂಗಭೂಮಿ, ಸಂಗೀತ, ಕವಿಗೋಷ್ಠಿಯಂತಹ ಕಾರ್ಯಕ್ರಮಗಳು ನಡೆಯಬೇಕಿದೆ. 2016ರ ವೇಳೆಗೆ ಈ ರಂಗಮಂದಿರಕ್ಕೆ ಮತ್ತೆ ಜೀವ ತುಂಬುವುದು ಉದ್ದೇಶ’ ಎನ್ನುತ್ತಾರೆ ಅವರು.

ಹಸಿರಿನ ಆ ನೆನಪು
ಗಾಂಧಿ ಬಜಾರ್ ಎಂದಕೂಡಲೇ ನೆನಪಿಗೆ ಬರುವುದು ವಿದ್ಯಾರ್ಥಿ ಭವನ, ಗಾಂಧಿ ಬಜಾರಿನ ನಡುವೆ -ಒಂದು ತುದಿ ರಾಮಕೃಷ್ಣ ವೃತ್ತವಾದರೆ ಮತ್ತೊಂದು ತುದಿ ಟ್ಯಾಗೋರ್ ವೃತ್ತ. ಎಪ್ಪತ್ತರ ದಶಕದ ಹಿಂದೆ ಟ್ಯಾಕ್ಸಿ ಸ್ಟ್ಯಾಂಡ್ ಎಂದು ಕರೆಸಿಕೊಳ್ಳುತ್ತಿದ್ದ ಸ್ಥಳಕ್ಕೆ ಒಂದು ವೃತ್ತ, ಒಂದಷ್ಟು ಹಸಿರು ತುಂಬಿಕೊಂಡು ‘ಟ್ಯಾಗೋರ್ ವೃತ್ತ’ ಆಯಿತು.

ವಾದ್ಯಗೋಷ್ಠಿ, ನಾಟಕಗಳು, ಮಕ್ಕಳಿಗಾಗಿ ಸ್ಫರ್ಧೆಗಳು, ವೇಷಭೂಷಣ, ಚಿತ್ರಕಲೆ ಇತ್ಯಾದಿ ಮನರಂಜನೆಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಪಿ.ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಪಿ.ಬಿ. ಶ್ರೀನಿವಾಸ್, ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಮೊದಲಾದ ಅತಿರಥ ಮಹಾರಥರ ಕಾರ್ಯಕ್ರಮಕ್ಕೆ ದೊಡ್ಡಮಟ್ಟದಲ್ಲಿ ಜನ ಸೇರುತ್ತಿದ್ದರು.  ಕ್ರಮೇಣ ನಗರಪಾಲಿಕೆಯು ಖ್ಯಾತ ನಾಟಕಕಾರ ಟಿ.ಪಿ. ಕೈಲಾಸಂ ಅವರ ಹೆಸರಿನಲ್ಲಿ ಸಣ್ಣ ರಂಗಮಂದಿರವನ್ನು ನಿರ್ಮಿಸಿತು. ಅಂತಹ ಸ್ಥಳದಲ್ಲಿ ಈಗ ಏನು ನಡೆದಿದೆ? ಎಂಬುದನ್ನು ನೆನೆದರೆ ಮನಸ್ಸಿಗೆ ತುಂಬ ನೋವಾಗುತ್ತದೆ.
–ಮಂಜು ಕಲಾಗಂಗೋತ್ರಿ

Write A Comment