ಕರ್ನಾಟಕ

ಅಗ್ರಿಗೋಲ್ಡ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಗ್ರಾಹಕರಿಗೆ ವಂಚನೆ: ಅಧಿಕಾರಿಗಳು ನಾಪತ್ತೆ!

Pinterest LinkedIn Tumblr

durga

ಚಿತ್ರದುರ್ಗ: ಕಂಪೆನಿಗೆ ಪಾವತಿಸಿದ ಹಣವನ್ನು ವಾಪಸ್ ನೀಡದೆ ಗ್ರಾಹಕ ರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ನೂರಾರು ಗ್ರಾಹಕರು ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಅಗ್ರಿಗೋಲ್ಡ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಕಚೇರಿಯೊಳಕ್ಕೆ ಸೋಮವಾರ ನುಗ್ಗಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ 10.30ರಿಂದಲೇ ಕಂಪೆನಿಯ ಕಚೇರಿಗೆ ದಾಂಗುಡಿಯಿಟ್ಟ ಠೇವಣಿ ದಾರರು, ಅಲ್ಲಿ ಕಾರ್ಯ­ನಿರ್ವಹಿಸು ತ್ತಿದ್ದ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ‘ಕಂಪೆನಿಗೆ ಮಾಸಿಕವಾಗಿ ಪಾವತಿಸಿರುವ ಹಣವನ್ನು ಬಡ್ಡಿ ಸಮೇತ ಮರಳಿಸುವಂತೆ ಒತ್ತಾಯಿಸಿದರು’.

ಅಧಿಕಾರಿಗಳೇ ನಾಪತ್ತೆ : ವಿಷಯ ಗೊತ್ತಾಗುತ್ತಿದ್ದಂತೆ, ಕಂಪೆನಿ ಕಚೇರಿಯಲ್ಲಿದ್ದ ಪ್ರಮುಖ ಅಧಿಕಾರಿಗಳು ಬೆಳಿಗ್ಗೆಯೇ ನಾಪತ್ತೆಯಾಗಿದ್ದಾರೆ. ಉಳಿದಿದ್ದ ಅಧಿಕಾರಿಗಳು, ಗ್ರಾಹಕರ ಆರೋಪ, ಪ್ರತ್ಯಾರೋಪಗಳಿಗೆ ಪ್ರತಿಕ್ರಿಯಿಸಲಾಗದೆ ಮೌನ ವಹಿಸಿದ್ದರು. ಈ ನಡುವೆ, ಗ್ರಾಹಕರಿಂದ ಹಣ ಸಂಗ್ರಹಿಸಿ, ಕಂಪೆನಿಗೆ ಪಾವತಿಸುತ್ತಿದ್ದ ನೂರಾರು ಏಜೆಂಟರು  ಗ್ರಾಹಕರನ್ನು ಸಮಾಧಾನಪಡಿಸಲು ಮುಂದಾಗುತ್ತಿದ್ದರು.

‘ನಾವು ನಿಮ್ಮೊಂದಿಗಿದ್ದೇವೆ. ಕಂಪೆನಿಯಲ್ಲಿ ಯಾವುದೇ ರೀತಿಯ ಮೋಸವಾಗಿಲ್ಲ. ಹಣ ನೀಡುವುದರಲ್ಲಿ ಸ್ವಲ್ಪ ವ್ಯತ್ಯಾಸವಾಗಿರಬಹುದು. ಎಲ್ಲ ಕುಳಿತು ಬಗೆಹರಿಸೋಣ. ಉದ್ವೇಗಕ್ಕೊಳಗಾಗಬೇಡಿ’ ಎಂದು  ಮಹಿಳಾ ಏಜೆಂಟರು ಪರಿಪರಿಯಾಗಿ ಗ್ರಾಹಕರ ಮನವೊಲಿಸುತ್ತಿದ್ದ ದೃಶ್ಯ ಕಂಡುಬಂತು.

ಜಿಲ್ಲೆಯಾದ್ಯಂತ ಏಜೆಂಟರು: ಈ ಕಂಪೆನಿಗೆ ಜಿಲ್ಲೆಯಾದ್ಯಂತ ನೂರಾರು ಏಜೆಂಟರಿದ್ದಾರೆ. ಏಜೆಂಟರ ಮೂಲಕ ಗ್ರಾಹಕರು ವಿವಿಧ ನಮೂನೆಯಲ್ಲಿ ಹಣ ಪಾವತಿಸಿದ್ದಾರೆ.

ಅವಧಿ ಮುಗಿದ ಠೇವಣಿ ಹಣವನ್ನು ಗ್ರಾಹಕರಿಗೆ ನೀಡುವಲ್ಲಿ ಕಂಪೆನಿ ವಿಫಲವಾಗಿದೆ ಎಂಬುದು ಗ್ರಾಹಕರ ಆರೋಪ. ‘ನಾನು ರೂ 8,500 ಹಣ ಕಟ್ಟಿದ್ದೇನೆ. ಹಣ ವಾಪಸ್ ಕೇಳಿದರೆ ಒಂದು ವಾರ ಕಚೇರಿ ಬಂದ್ ಆಗುತ್ತದೆ. ನಮಗೆ ಬಡ್ಡಿ ದುಡ್ಡು ಬೇಡ. ಅಸಲು ಕೊಟ್ಟರೆ ಸಾಕು’ ಎಂದು  ಕ್ಯಾಸವರಾಹಟ್ಟಿಯ ಗ್ರಾಹಕ ಕುಮಾರ್ ಆಕ್ರೋಶ ವ್ಯಕ್ತಪಡಿಸುತ್ತಾರೆ. ಮೆದಕೇರಿಪುರದ ರಮೇಶ್ ನಾಯಕ್ ಅವರದ್ದೂ ಇದೇ ಕಥೆ.

ತಳಕಿನ ತಿಪ್ಪೇಶಿ ವರ್ಷದಿಂದ ರೂ 54 ಸಾವಿರ ಹಣ ಕಟ್ಟಿದ್ದಾರೆ. ರೂ65 ಸಾವಿರ ಮೆಚುರಿಟಿ ಹಣ ಬರಬೇಕು. ‘ಮೆಚುರಿಟಿ ಹಣ ವಾಪಸ್ ಕೇಳಿದರೆ, ಟೇಬಲ್, ಕಂಪ್ಯೂಟರ್ ತಗೊಂಡು ಹೋಗಿ ಎಂದು ಹೇಳುತ್ತಾರೆ. ಹಣಕ್ಕಾಗಿ ನೀಡಿರುವ ಚೆಕ್ ನಾಲ್ಕು ಬಾರಿ ಬೌನ್ಸ್ ಆಗಿದೆ’ ಎಂದು ಆರೋಪಿಸುತ್ತಾರೆ ಅವರು. ಇದು ವರೆಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

Write A Comment