ಕರ್ನಾಟಕ

ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಕೋರ್ಟ್‌ಗೆ ಸುಬ್ರಮಣಿಯನ್ ಸ್ವಾಮಿ ಹಾಜರು

Pinterest LinkedIn Tumblr

Swamy

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಜಯಲಲಿತಾ ಮತ್ತು ಇತರ ಮೂವರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಆರಂಭಿಸಿತು. ಪ್ರಕರಣದ ವಿಚಾರಣೆಗೆಂದೇ ಕರ್ನಾ­ಟಕ ಹೈಕೋರ್ಟ್‌ ಆಯೋಜಿಸಿ­ರುವ ವಿಶೇಷ ಏಕಸದಸ್ಯ ಪೀಠದ ನ್ಯಾಯ­ಮೂರ್ತಿ ಸಿ.ಆರ್.ಕುಮಾರ ಸ್ವಾಮಿ ಅವರು ವಿಚಾರಣೆ ಕೈಗೆತ್ತಿಕೊಂಡರು.

ಪ್ರಕರಣದ ಮೂಲ ದೂರುದಾರ ಹಾಗೂ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ನ್ಯಾಯಾ­ಲಯಕ್ಕೆ ಹಾಜರಾಗಿದ್ದರು. ‘ಈ ಪ್ರಕರಣ­ದಲ್ಲಿ ನನ್ನನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ಅವರು ನ್ಯಾಯಪೀಠಕ್ಕೆ ಮೌಖಿಕ ಮನವಿ ಮಾಡಿದರು.

‘ಪ್ರತಿವಾದಿಯಾಗಲು ನಿಮಗೆ ಯಾವ ಹಕ್ಕಿದೆ ಎಂಬುದನ್ನು ವಿವರಿಸಿ’ ಎಂದು ನ್ಯಾಯಪೀಠವು ಕೇಳಿದಾಗ, ‘ನಾನು ಈಗಾಗಲೇ  ನಾಲ್ವರೂ ಆರೋ­ಪಿ­ಗಳ ವಿರುದ್ಧ ಸುಪ್ರೀಂ ಕೋರ್ಟ್‌­ನಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ ಪ್ರತಿ­ವಾದಿಯಾಗಿ ಹಾಜರಾಗಿದ್ದೇನೆ. ಅಷ್ಟೇ ಅಲ್ಲ, ಈ ಪ್ರಕರಣದ ಮೂಲ ದೂರು­ದಾ­ರನೂ ನಾನೇ ಆಗಿದ್ದೇನೆ’ ಎಂಬ ಅಂಶ­ವನ್ನು ಸ್ವಾಮಿ ನ್ಯಾಯಪೀಠದ ಗಮನಕ್ಕೆ ತಂದರು.

‘ಈ ಕುರಿತ ಸವಿವರ ದಾಖಲೆಗಳನ್ನು ಸಲ್ಲಿಸಿ. ನಂತರ ನಿಮ್ಮ ವಾದ ಮತ್ತು ಪ್ರಾಸಿಕ್ಯೂಷನ್‌ ಪರ ಆಕ್ಷೇಪಣೆಗಳನ್ನು ಆಲಿಸಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಡಿಎಂಕೆ ಹಿರಿಯ ನಾಯಕ  ಕೆ.ಅನ್ಬಳಗನ್ ಅವರ ಪರವಾಗಿ ವಕೀಲ ಕುಮರೇಶನ್ ಹಾಜರಾಗಿ, ‘ನನ್ನ ಕಕ್ಷಿ­ದಾರ­ರನ್ನೂ ಪ್ರತಿವಾದಿಯಾಗಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಬೇಕು’ ಎಂದು ಕೋರಿದರು. ಈ ಅರ್ಜಿಯನ್ನು ಮಾನ್ಯ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಸರ್ಕಾರದ ವಿಶೇಷ ವಕೀಲರು ಬುಧವಾರದ ವರೆಗೂ ಕಾಲಾವಕಾಶ ಕೋರಿದ್ದಾರೆ.

ಆರು ಕಂಪೆನಿಗಳ ಅರ್ಜಿ: ‘ಪ್ರಕರಣ ದಲ್ಲಿ ಜಯಲಲಿತಾ ಅವರು ₨ 100 ಕೋಟಿ ದಂಡ ಕಟ್ಟಬೇಕು ಎಂಬ ವಿಚಾ ರಣಾ ನ್ಯಾಯಾಲಯದ ಆದೇಶದಿಂದ ನಮಗೆ ಅನ್ಯಾಯವಾಗಿದೆ’ ಎಂದು ಆರು ಕಂಪೆನಿ­ಗಳು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯ­ಪೀಠವು ಇದೇ ವೇಳೆ ವಿಚಾರಣೆಗೆ ಅಂಗೀಕರಿಸಿದೆ. ಜಯಲಲಿತಾ ಮತ್ತು ನಮಗೆ ಯಾವುದೇ ಸಂಬಂಧ ಇಲ್ಲ’ ಎಂದು ಇಂದೋರಾ ಕೆಮಿಕಲ್ಸ್ ಎಂಟರ್‌­ಪ್ರೈಸಸ್‌, ಸಯನೋರಾ ಬಿಸಿನೆಸ್‌ ಕಂಪೆನಿ, ರಾಮರಾಜ್‌ ಆಗ್ರೊ ಪ್ರೈವೇಟ್ ಲಿ., ಲೆಕ್ಸ್ ಪ್ರಾಪರ್ಟೀಸ್, ಮೆಡೊವಾ ಆಗ್ರೊ ಪ್ರೈವೇಟ್‌ ಲಿ. ಮತ್ತು ರಿವರ್ ವ್ಯೂ ಕಂಪೆನಿಗಳು ಈ ಅರ್ಜಿ ಸಲ್ಲಿಸಿವೆ.

ಮುಂದೂಡಿಕೆಗೆ ನಕಾರ: ಜಯಲಲಿತಾ ಪರ ವಕೀಲರು ವಿಚಾರಣೆ ಮುಂದೂ­ಡು­ವಂತೆ ಕೋರಿದ ಮನವಿಯನ್ನು ನ್ಯಾಯ­ಮೂರ್ತಿಗಳು ಸಾರಾಸಗಟಾಗಿ ತಳ್ಳಿ ಹಾಕಿದರು. 1991–96ರ ಮಧ್ಯೆ ತಮಿಳು­ನಾಡಿನ ಮುಖ್ಯಮಂತ್ರಿಯಾಗಿದ್ದ ಅವಧಿ­ಯಲ್ಲಿ ಜಯಲಲಿತಾ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಸುಬ್ರಮಣಿಯನ್ ಸ್ವಾಮಿ ನ್ಯಾಯಾ­ಲಯದಲ್ಲಿ ದೂರು ದಾಖಲಿ ಸಿದ್ದರು. ನಂತರ ಈ ಪ್ರಕರಣವನ್ನು ಬೇರೆಡೆ ವರ್ಗಾಯಿಸಬೇಕು ಎಂದು ಡಿಎಂಕೆ ಕೋರಿತ್ತು. ಈ ಕಾರಣದಿಂದ ಪ್ರಕರಣ­ವನ್ನು ಕರ್ನಾಟಕದಲ್ಲಿನ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡಿತ್ತು.

‘ಡಿಎಂಕೆಗೆ ನೈತಿಕ ಹಕ್ಕಿಲ್ಲ’
‘ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕ ಹಕ್ಕು ಡಿಎಂಕೆಗೆ ಇಲ್ಲ’ ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದರು. ಕೋರ್ಟ್‌ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ತನ್ನನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಡಿಎಂಕೆ ಮನವಿಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ನೀವು ಕೆಳ ನ್ಯಾಯಾಲಯದ ವಿಚಾರಣೆ ಹಂತದಲ್ಲಿ ಯಾಕೆ ಪ್ರಕರಣದಲ್ಲಿ ಮಧ್ಯಪ್ರವೇಶ ಬಯಸಿರಲಿಲ್ಲ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಆಗ ಅವಕಾಶ ಇರಲಿಲ್ಲ. ಆದರೆ ಈಗ ಅನಿವಾರ್ಯ ಇರುವುದರಿಂದ ಮತ್ತು ನ್ಯಾಯಕ್ಕೆ ಭಂಗ ಬರಬಾರದು ಎಂಬ ಉದ್ದೇಶದಿಂದ ಬಂದಿದ್ದೇನೆ’ ಎಂದು ಉತ್ತರಿಸಿದರು.

Write A Comment