‘ಸೂಫಿ’ ಕೇವಲ ಸಂಗೀತವಲ್ಲ; ಅದು ಒಂದು ಬದ್ಧತೆ, ಶಿಸ್ತು, ಸಂಸ್ಕೃತಿ, ಧರ್ಮ, ಪ್ರೇಮ, ಅನುರಾಗದ ಸಮ್ಮಿಲನ. ಅಲ್ಲಿ ನವಿರಾದ ತಾಯಿ ಪ್ರೀತಿಯೂ ಇದೆ. ಧರ್ಮದ ನಿಷ್ಠುರ ಅಂಕೆಯೂ ಇದೆ. ಹಿಡಿತಕ್ಕೆ ಸಿಕ್ಕರೆ ಅದು ಕೋಗಿಲೆಯ ಇಂಚರದಷ್ಟೇ ಆಪ್ಯಾಯಮಾನ– ಇದು ಖ್ಯಾತ ಸೂಫಿ ಗಾಯಕ ಮೀರ್ ಮುಖ್ತಿಯಾರ್ ಅಲಿ ಕೊಡುವ ವಿವರಣೆ.
ಬಾಚಿಕೊಂಡಷ್ಟೂ ದಕ್ಕುವ, ಹಂಚಿದಷ್ಟೂ ಹೆಚ್ಚುವ ಸುಖವಿದೆ ಇದರಲ್ಲಿ. ಇದೊಂದು ಅದ್ಭುತ ಅನುಭೂತಿ. ವಿವರಣೆಗೆ ಸಿಗುವ ಜಾಯಮಾನ ಇದಕ್ಕಿಲ್ಲ. ‘ಸೂಫಿ ನನಗೆ ಗೊತ್ತು, ನಾನು ಬಲ್ಲೆ’ ಎನ್ನುವುದೆಲ್ಲ ನಮ್ಮ ಭ್ರಮೆ ಅಷ್ಟೇ. ಅದು ತನ್ನನ್ನು ತಾನು ಯಾರಿಗೂ ಬಿಟ್ಟುಕೊಡುವುದಿಲ್ಲ. ಹಾಡುತ್ತ ಹಾಡುತ್ತ ಅದರ ಹುಡುಕಾಟದಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುತ್ತೇವೆ. ಕೇಳುಗರೂ ಕಳೆದು ಹೋಗುವಂತೆ ಮಾಡುತ್ತೇವೆ…’ ಎನ್ನುತ್ತ ಪದಗಳಿಗಾಗಿ ತಡಕಾಡುತ್ತಾರೆ ಅಲಿ.
‘ಪ್ರತಿ ಬಾರಿ ಹಾಡುವಾಗಲೂ ಒಂದೊಂದು ಹೊಸ ಅರ್ಥವನ್ನೇ ಬಿಚ್ಚಿಕೊಳ್ಳುತ್ತ ಹೋಗುವ ಸೂಫಿ ಸಂಗೀತವನ್ನು ವಿವರಿಸುವುದಾದರೂ ಹೇಗೆ? ಎಂಟು ತಲೆಮಾರುಗಳಿಂದ ಪೂರ್ವಜರು ಬರೀ ಹಾಡುತ್ತಲೇ ಬಂದಿದ್ದಾರೆ. ಈ ಹಾಡಿನ ಜಾಢ್ಯ ತಾನಾಗಿಯೇ ನಮ್ಮ ಮೈ–ಮನಸ್ಸುಗಳನ್ನು ಆವರಿಸುತ್ತ ಸಾಗಿದೆ. ಇದನ್ನು ಕಲಿಸುವ, ವಿವರಿಸುವ ಗೋಜಿಗೆ ಅವರೂ ಹೋಗಲಿಲ್ಲ. ಈಗ ಸೂಫಿ ಸಂಗೀತವನ್ನು ಪದದಲ್ಲಿ ಕಟ್ಟಿಕೊಡಲು ಹೋದರೆ ಸಾಧ್ಯವಾಗುವುದೇ?’ ಎನ್ನುತ್ತ ಸೂಫಿ ಕುರಿತ ಮತ್ತೊಂದಿಷ್ಟು ಮಾತುಗಳನ್ನು ಹರವಿದರು.
ಸತ್ತು ಬದುಕಿದ ಸಂಗೀತ…
‘ಕಣ್ಣು ಬಿಟ್ಟಾಗ ನನ್ನ ಕಿವಿಗೆ ಕಬೀರ ಮತ್ತು ಮೀರಾಬಾಯಿಯ ಸಂಗೀತ ಬೀಳುತ್ತಿತ್ತು. ಹಟ್ಟುತ್ತಲೇ ಸೂಫಿ ನಮ್ಮನ್ನು ಆವರಿಸಿಕೊಳ್ಳುತ್ತಿದ್ದ ಪರಿ ಅದು. ಕೆಲವು ವರ್ಷಗಳ ಹಿಂದೆ ನಮ್ಮ ಸಮುದಾಯದಲ್ಲಿ ಸಂಗೀತವಿಲ್ಲದ ಮನೆಗಳಿಗೆ ಹೆಣ್ಣು ಕೊಡುತ್ತಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಮನೆ–ಮನೆಗಳಲ್ಲಿ, ಗಲ್ಲಿ–ಗಲ್ಲಿಗಳಲ್ಲಿ ಸೂಫಿ ಹಾಡು ಮೊಳಗುತ್ತಿತ್ತು. ಪ್ರತಿ ಮುಂಜಾವು ಹಕ್ಕಿ–ಪಿಕ್ಕಿಗಳು, ದನ–ಕರುಗಳು ಸೂಫಿ ಕೇಳಲು ಕಾಯುತ್ತಿದ್ದವು. ಸಂಗೀತಕ್ಕೂ, ಉಪಜೀವನಕ್ಕೂ ಆಗೆಲ್ಲ ಸಂಬಂಧವೇ ಇರಲಿಲ್ಲ.
ಆದರೆ ಕಾಲ ಹೀಗೇ ಇರಬೇಕಲ್ಲ… 80ರ ದಶಕದಲ್ಲಿ ರೇಡಿಯೊ, ಟಿ.ವಿ, ವಿಡಿಯೊ ಹಾವಳಿ ಹೆಚ್ಚಿತು. ಜನ ಸೂಫಿಯನ್ನು ಮರೆತರು. ಸೂಫಿ ಹಾಡುಗಾರರಿಗೆ ಸಂಕಷ್ಟ ಎದುರಾಯಿತು. ಹಾಗಂತ ನಾನು ಸೂಫಿ ಬಿಟ್ಟು ಬೇರೆ ಯೋಚನೆ ಮಾಡಲಿಲ್ಲ. ಅದನ್ನು ಬಿಟ್ಟು ಇನ್ನೊಂದು ಬದುಕಿದೆ ಎನ್ನುವುದೂ ನನಗೆ ಗೊತ್ತಿರಲಿಲ್ಲ. ಈಗ ಸೂಫಿ ದಯಪಾಲಿಸಿದ ಬದುಕಲ್ಲೇ ಸುಖವಾಗಿದ್ದೇನೆ. ನಾಲ್ಕಾರು ಸಿನಿಮಾಗಳಿಗೂ ಹಾಡಿದ್ದೇನೆ. ಹನ್ನೊಂದು ದೇಶಗಳಿಗೆ ಹೋಗಿ ಸೂಫಿ ಹಾಡಿ ಬಂದಿದ್ದೇನೆ. ದಿನಕ್ಕೊಂದು ಊರು, ದೇಶ… ಸೂಫಿ ಹೊತ್ತು ಸುತ್ತುವುದು ನಡೆದೇ ಇದೆ.
‘ಈಗಿನ ಪೀಳಿಗೆಗೆ ಸೂಫಿಯ ಅರ್ಥ–ಆಳ ಗೊತ್ತಿಲ್ಲ. ಅವರಿಗೆ ಈ ಬಗ್ಗೆ ತಿಳಿಸಿಕೊಡಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಹಕ್ಕಿಗೆ ಹಾಡುವುದನ್ನು ಯಾರೂ ಕಲಿಸಲಿಲ್ಲ, ಮೀನಿಗೆ ಈಜುವುದನ್ನೂ… ಆದರೆ ಏನು ಮಾಡುವುದು; ಈಗ ಸೂಫಿಗೆ ಹೆಸರಾದ ಮಿರಾಸಿ ಸಮುದಾಯದ ಮಕ್ಕಳಿಗೆ ಸೂಫಿ ತರಬೇತಿ ನೀಡಬೇಕಾದ ಕಾಲ ಬಂದಿದೆ’ ಎನ್ನುವ ಬೇಸರ ಅವರದು.
‘ನಮ್ಮ ಸಂಸ್ಕೃತಿಯನ್ನು ಹಿಂದೆ ಬಿಟ್ಟು ನಾವು ಮುಂದೆ ಹೋಗುವುದಿದೆಯಲ್ಲ… ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಈಗ ನನಗದೇ ಭಯ ಕಾಡುತ್ತಿದೆ. ಸೂಫಿ ಸಂಪ್ರದಾಯ ಕಣ್ಮರೆಯಾಗದಂತೆ ನೋಡಿಕೊಳ್ಳಬೇಕಿದೆ, ಬೆಳೆಸಬೇಕಿದೆ, ಆದರೆ ಹೇಗೆ? ಸೂಫಿ ಹಾಡುಗಳ ಕಾರ್ಯಕ್ರಮ ಮಾಡುವುದರಿಂದ, ಟಿ.ವಿಯಲ್ಲಿ ಹಾಡುವುದರಿಂದ, ಸಿ.ಡಿ. ಮಾಡಿ ಹಂಚುವುದರಿಂದ ಈ ಸಂಗೀತವನ್ನು ಉಳಿಸಿಕೊಳ್ಳಬಹುದೆ ಎನ್ನುವುದು ನಮ್ಮ ಮುಂದಿರುವ ಜಿಜ್ಞಾಸೆ’ ಎನ್ನುತ್ತಾರೆ.
ಮೊದಲ ಪುಳಕ
‘ಆಗಿನ್ನೂ ನನಗೆ ಸಣ್ಣ ವಯಸ್ಸು. ಒಬ್ಬನೇ ವೇದಿಕೆ ಏರಿ ಹಾಡುವಷ್ಟು ಪ್ರಬುದ್ಧತೆ ಇರಲಿಲ್ಲ. ದೆಹಲಿಯ ಕಾರ್ಯಕ್ರಮದಲ್ಲಿ ಹಾಡಬೇಕಿತ್ತು. ಹಾಡುವ ಮೊದಲೇ ನಡುಗಿ ಹೋಗಿದ್ದೆ. ಊರಿನ ಕಟ್ಟಿಯ ಮೇಲೆ ಕೂತು ಹತ್ತಾರು ಜನರ ಮುಂದೆ ಹಾಡಿ ಭೇಷ್ ಅನಿಸಿಕೊಂಡ ನನ್ನನ್ನು ವೇದಿಕೆ ಮುಂದಿದ್ದ ಬರೋಬ್ಬರಿ ಇಪ್ಪತ್ತು ಸಾವಿರ ಜನರ ಮುಂದೆ ಹಾಡಲು ನಿಲ್ಲಿಸಿದರೆ ಹೇಗಾದೀತು…
ನನ್ನ ನಡುಕ ನೋಡಿ, ಆಯೋಜಕರು 40 ನಿಮಿಷದ ಸಂಗೀತವನ್ನು 15 ನಿಮಿಷಕ್ಕೆ ಇಳಿಸಿದರು. ಅಪ್ಪ ಹೇಳಿದ ಮಾತು ನೆನಪಾಯಿತು–ಕಣ್ಣು ಮುಚ್ಚು, ನಿನ್ನೆದುರಿಗೆ ಸುಂದರ ಕಂಠದ ಪಕ್ಷಿಗಳಿವೆ, ಮಾತೃಹೃದಯದ ಗೋವುಗಳಿವೆ ಎಂದುಕೋ ಮತ್ತು ಅವುಗಳಿಗಾಗಿ ಹಾಡು… ನಾನು ಹಾಗೆಯೇ ಮಾಡಿದೆ. ಜನರು, ವೇದಿಕೆ, ಅತಿಥಿಗಳು ಎಲ್ಲರನ್ನೂ ಮರೆತು, ಹಾಡಿದೆ, ಪಕ್ಷಿಗಳಿಗಾಗಿ, ಗೋವುಗಳಿಗಾಗಿ….
ನಾನು ಕಣ್ಣು ಬಿಟ್ಟಿದ್ದು 80 ನಿಮಿಷಗಳ ನಂತರವೇ… ಚಪ್ಪಾಳೆಯ ಸದ್ದು, ಒನ್ಸ್ ಮೋರ್ ಎನ್ನುವ ಕೂಗು… 40ನಿಮಿಷದಿಂದ 15 ನಿಮಿಷಕ್ಕೆ ಇಳಿದಿದ್ದ ಸಮಯ 80 ನಿಮಿಷ ದಾಟಿದ್ದು ಹೇಗೊ… ಯಾರಿಗೂ ಗೊತ್ತಿರಲಿಲ್ಲ!
ಅಂದಿನಿಂದ ಇಂದಿಗೆ ಸಾವಿರಾರು ಕಾರ್ಯಕ್ರಮ ಕೊಟ್ಟಿದ್ದೇನೆ. ಅದೇ ಚಪ್ಪಾಳೆ, ಅದೇ ‘ಒನ್ಸ್ ಮೋರ್’ ಎನ್ನುವ ಕೂಗು. ಹೆಸರು, ಹಣ, ಪ್ರತಿಷ್ಠೆ ಎಲ್ಲವೂ ನಗಣ್ಯ. ಸೂಫಿ ಹಾಡುವ ಆ ಸಮಯ ಮಾತ್ರ ನಿಜ್ಜಕ್ಕೂ ಆನಂದಮಯ’
* * *
ಮಿರಾಸಿ ಸಮುದಾಯದ ಕುರಿತು…
ರಾಜಸ್ತಾನದಂತಹ ಮರಳುಗಾಡಿನಲ್ಲಿ ಸಂಗೀತದ ತಂಪನ್ನು ಹರಿಸಿದವರು ಮೀರ್ ಮುಖ್ತಿಯಾರ್ ಅಲಿ. ಆಳಿವಿನ ಅಂಚಿನಲ್ಲಿರುವ ಸೂಫಿ ಸಂಗೀತದ ಕಂಪನ್ನು ಎಲ್ಲೆಡೆ ಪಸರಿಸುತ್ತಿರುವ ಅವರ ಜನ್ಮಭೂಮಿ ಭಾರತದ ಗಡಿಭಾಗದಲ್ಲಿರುವ ರಾಜಸ್ತಾನದ ಪುಗಲ್ ಎಂಬ ಪುಟ್ಟ ಹಳ್ಳಿ. ಥಾರ್ ಮರುಭೂಮಿಯಲ್ಲಿರುವ ಮಿರಾಸಿ ಎಂಬ ಅರೆ ಅಲೆಮಾರಿ ಸಮುದಾಯ ಸೂಫಿ ಸಂಗೀತ ಪರಂಪರೆಯನ್ನು ತಲ-ತಲಾಂತರಗಳಿಂದ ಸಂರಕ್ಷಿಸುತ್ತಾ ಬಂದಿದೆ. ಈ ವಂಶದ ೨೬ನೇ ತಲೆಮಾರಿನ ಕುಡಿ ಮೀರ್ ಮುಖ್ತಿಯಾರ್ ಅಲಿ (೧೯೭೨ರ ಆಗಸ್ಟ್ 1).
ಅತ್ಯಂತ ಹಿಂದುಳಿದ ಈ ಮಿರಾಸಿ ಸಮುದಾಯವು ಬರ, ಯುದ್ಧಗಳಂತಹ ಸಾಮಾಜಿಕ, ಆರ್ಥಿಕ ಸಮಸ್ಯೆಗಳ ನಡುವೆಯೂ ಸೂಫಿ ಸಂಗೀತ ಪರಂಪರೆಯ ಸಿರಿವಂತಿಕೆಯನ್ನು ಅನಾವರಣಗೊಳಿಸುತ್ತ ಬಂದಿದೆ. ಆದರೆ ಪಾಶ್ಚಾತ್ಯ ಸಂಗೀತದ ವ್ಯಾಮೋಹ ಹೆಚ್ಚುತ್ತಿರುವ ಹಾಗೂ ಸಾಂಪ್ರದಾಯಿಕ ಜಾನಪದ ಕಲೆಗಳನ್ನು ಆನಂದಿಸುವ ವ್ಯವಧಾನ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿಯೂ ಸೂಫಿ ಸಂಗೀತವನ್ನು ಜನಪ್ರಿಯಗೊಳಿಸುವ ನಿರಂತರ ಯತ್ನದಲ್ಲಿ ಮೀರ್ ಮುಖ್ತಿಯಾರ್ ಅಲಿ ನಿರತರಾಗಿದ್ದಾರೆ.
ಬೆಲ್ಜಿಯಂ ಮತ್ತು ಸ್ವೀಡನ್ ದೇಶಗಳಲ್ಲಿ ತಾವು ನೀಡಿದ ಕಾರ್ಯಕ್ರಮಗಳೀಗೆ ಅಪಾರ ಅಭಿಮಾನಿಗಳನ್ನು ಸೆಳೆದಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿ ಇವರ ಹಲವಾರು ಕಾರ್ಯಕ್ರಮಗಳು ಜನಮನಸೆಳೆದಿವೆ. ಇವರ ಕಂಠಸಿರಿಯಲ್ಲಿ ಸೂಫಿ ಸಂಗೀತವನ್ನು ಆಸ್ವಾದಿಸುವುದೇ ಒಂದು ಸೊಗಸು. ಗಾಯನದ ನಡುವೆ ನವಿರಾದ ವಿವರಣೆಗಳನ್ನು ನೀಡುವುದು ಇವರ ವಿಶೇಷ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇಂದು ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಿರುವ ‘ಮಾಹಿತಿ–ಮನರಂಜನೆ’ ಕಾರ್ಯಕ್ರಮದಲ್ಲಿ ಮೀರ್ ಮುಖ್ತಿಯಾರ್ ಅಲಿ ಸೂಫಿ ಗಾಯನ ಪ್ರಸ್ತುತಪಡಿಸಲಿದ್ದಾರೆ. ಸುಧಾ ಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ.ಹನೀಫ್ ಸೂಫಿಸಂ ಬಗ್ಗೆ ಪರಿಚಯಾತ್ಮಕ ಭಾಷಣ ಮಾಡಲಿದ್ದಾರೆ. ಸಂಜೆ 6.30.
