ಕರ್ನಾಟಕ

ನನ್ನ ಮಗಳ ಸಾವಿಗೆ ನಿತ್ಯಾನಂದ ಹಾಗೂ ರಂಜಿತ ಕಾರಣ : ಸಂಗೀತಾಳ ತಾಯಿ ಝಾನ್ಸಿರಾಣಿ ಆರೋಪ

Pinterest LinkedIn Tumblr

sa

ಬೆಂಗಳೂರು, ಜ.4: ಬಿಡದಿಯ ಧ್ಯಾನ ಪೀಠಂನಲ್ಲಿ ಸ್ವಯಂ ಸೇವಕಿಯಾಗಿದ್ದ ನನ್ನ ಮಗಳು ಸಂಗೀತಾಳ ಸಾವಿಗೆ ನಿತ್ಯಾನಂದ ಸ್ವಾಮೀಜಿ, ಶಿಷ್ಯ ಹಂಸಾನಂದ ಹಾಗೂ ರಂಜಿತ ಕಾರಣ ಎಂದು ಸಂಗೀತಾಳ ತಾಯಿ ಝಾನ್ಸಿರಾಣಿ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗಳ ಸಾವು ಹೃದಾಯಾಘಾತದಿಂದ ಸಂಭವಿಸಿದೆ ಎಂದು ನಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಆಕೆಗೆ ಯಾವುದೇ ಕಾಯಿಲೆಗಳಿರಲಿಲ್ಲ. ಸಾವು ಅಸಹಜವಾಗಿದೆ. ಸಂಗೀತಾಳ ಮೂಗು ಮತ್ತು ಬಾಯಿಯಲ್ಲಿ ರಕ್ತ ಬಂದಿತ್ತು ಎಂದು ವಿವರಿಸಿದ್ದಾರೆ.

ಸಂಗೀತಾಳ ಶವದ ಮರು ಮರಣೋತ್ತರ ಪರೀಕ್ಷೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಮತ್ತು ತನಿಖೆಯನ್ನು ಸಿಐಡಿಯಂತಹ ಸಂಸ್ಥೆಯಿಂದ ನಡೆಸಬೇಕೆಂದು ಝಾನ್ಸಿರಾಣಿ ಒತ್ತಾಯಿಸಿದ್ದಾರೆ. ಸಂಗೀತಾಳ ಸಾವಿನ ಬಗ್ಗೆ ಅನುಮಾನವಿದೆ. ಈಗಾಗಲೇ ನಾನು ದೂರು ದಾಖಲಿಸಿದ್ದೇನೆ. ಮಗಳ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. 24 ವರ್ಷದ ಸಂಗೀತಾಳಿಗೆ ಯಾವುದೇ ಕಾಯಿಲೆ ಇರಲಿಲ್ಲ. ನಮ್ಮ ವಂಶದಲ್ಲಿ ಯಾರಿಗೂ ಹೃದಯಾಘಾತವಾಗಿಲ್ಲ. ಸಂಗೀತ ಹೃದಾಯಾಘಾತದಿಂದ ಸಾವನ್ನಪ್ಪಿರುವುದು ಅನುಮಾನ ತಂದಿದೆ ಎಂದು ಹೇಳಿದರು.

ಬಿಡದಿಯ ಧ್ಯಾನಪೀಠಂನಲ್ಲಿ ಕಳೆದ 4 ವರ್ಷಗಳಿಂದ ಸಂಗೀತ ಸ್ವಯಂ ಸೇವಕಿಯಾಗಿದ್ದಳು ಕಳೆದ ಒಂದು ವರ್ಷದಿಂದೀಚೆಗೆ ನನಗೆ ಅಲ್ಲಿರಲು ಸಾಧ್ಯವಾಗುತ್ತಿಲ್ಲ. ಅಸಹನೀಯ ವಾತಾವರಣವಿದೆ ಎಂದು ಹೇಳಿ ಮನೆಗೆ ವಾಪಸ್ ಬಂದಿದ್ದಳು. ಆ ಸಂದರ್ಭದಲ್ಲಿ ನಮ್ಮ ಮನೆಗೆ ಬಂದಿದ್ದ ಹಂಸಾನಂದ ಮತ್ತು ಇನ್ನಿತರರು ನನ್ನ ಮಗಳ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಕರೆದುಕೊಂಡು ಹೋಗಿದ್ದರು. ಸಂಗೀತ ಆಶ್ರಮದ ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವನ್ನು ಕದ್ದುಕೊಂಡು ಬಂದಿದ್ದಾಳೆ. ಈ ಬಗ್ಗೆ ದೂರು ದಾಖಲಾಗಿದೆ. ಆಕೆಯ ಹೇಳಿಕೆ ಅಗತ್ಯವಿದೆ ಎಂದು ಹೇಳಿ ಬಲವಂತದಿಂದ ಕರೆದುಕೊಂಡು ಹೋಗಿದ್ದರು.

ಅನಂತರ 6 ತಿಂಗಳವರೆಗೂ ಅವಳ ಜತೆ ಮಾತನಾಡಲು, ಭೇಟಿ ಮಾಡಲು ನನಗೆ ಅವಕಾಶ ನೀಡಲಿಲ್ಲ. ಒಂದು ದಿನ ನಾನೇ ಖುದ್ದಾಗಿ ಆಶ್ರಮಕ್ಕೆ ಹೋದಾಗ ಬೆಳಗ್ಗಿನಿಂದ ಸಂಜೆಯವರೆಗೂ ಗೇಟಿನಲ್ಲೇ ಕಾಯಿಸಿ ವಾಪಸ್ ಕಳುಹಿಸಿದ್ದರು. ಇತ್ತೀಚೆಗೆ ನಿತ್ಯಾನಂದನನ್ನು ಭೇಟಿ ಮಾಡಲು ನನಗೆ ಅವಕಾಶ ಕಲ್ಪಿಸಲಾಗಿತ್ತು. ಆ ಸಂದರ್ಭದಲ್ಲಿ ನಿತ್ಯಾನಂದ ನಿನ್ನ ಮಗಳು ಮಾಡಿರುವುದು ಸರಿಯೇ? ಆಶ್ರಮದಲ್ಲಿರುವ ಪೆನ್‌ಡ್ರೈವ್, ಲ್ಯಾಪ್‌ಟಾಪ್‌ನನ್ನು ಕದ್ದುಕೊಂಡು ಹೋಗಿದ್ದಾಳೆ. ಅದರಲ್ಲಿರುವ ವೀಡಿಯೋಗಳನ್ನು ಇಟ್ಟುಕೊಂಡು ನನ್ನನ್ನು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾಳೆ. ಯಾರಿಂದಲೂ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ. ಇಡೀ ಸರ್ಕಾರವೇ ಪ್ರಯತ್ನ ಪಟ್ಟರೂ ಆಗದೇ ಇರುವ ಕೆಲಸ ನಿನ್ನ ಮಗಳಿಂದ ಸಾಧ್ಯವೇ ಎಂದು ಸವಾಲು ಹಾಕಿದ್ದರು. ನಾನು ಕೆಲವು ಪ್ರಶ್ನೆಗಳನ್ನು ಕೇಳಿದಾಗ ಉತ್ತರ ನೀಡದೆ ಆಶ್ರಮದಿಂದ ಹೊರ ತಬ್ಬಿದರು ಎಂದು ದೂರಿದರು.

ಡಿ.29ರಂದು ನನಗೆ ಕರೆ ಮಾಡಿ ನಿಮ್ಮ ಮಗಳಿಗೆ ಆರೋಗ್ಯ ಸರಿಯಿಲ್ಲ. ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ತಿಳಿಸಿದ್ದರು. ನಂತರ ಮತ್ತೊಂದು ಕರೆ ಬಂದಿದ್ದು ಮಗಳು ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದರು. ಆಸ್ಪತ್ರೆಗೆ ಹೋಗಿ ನೋಡಿದಾಗ ಮಗಳ ಮೂಗು, ಬಾಯಿಯಲ್ಲಿ ರಕ್ತ ಬರುತ್ತಿತ್ತು. ತುಟಿಯ ಬಲಭಾಗದಲ್ಲಿ ರಕ್ತದ ಕಲೆಯಿದ್ದು, ನೀಲಿ ಬಣ್ಣಕ್ಕೆ ತಿರುಗಿತ್ತು. ಮುಖ ಕಪ್ಪಾಗಿತ್ತು. ಶವಾಗಾರದಲ್ಲಿ ನನಗೆ ಶವ ತೋರಿಸಿಲ್ಲ. ಬದಲಾಗಿ ಕಾರ್‌ಪಾರ್ಕಿಂಗ್ ಸ್ಥಳದಲ್ಲಿ ಶವ ತೆಗೆದುಕೊಂಡು ಹೋಗುವಂತೆ ತಾಕೀತು ಮಾಡಿದ್ದರು ಎಂದು ಅಳಲು ತೋಡಿಕೊಂಡರು.

ಯಾವುದೇ ಅಸಹಜ ಸಾವು ಸಂಭವಿಸಿದಾಗ ಅಪರಿಚಿತರ ಸಮ್ಮುಖದಲ್ಲಿ ಪಂಚನಾಮೆ ನಡೆಸಬೇಕು. ಆದರೆ, ಸಂಗೀತಾಳ ಸಾವಿನ ಪ್ರಕರಣದಲ್ಲಿ ನಿತ್ಯಾನಂದರ ಶಿಷ್ಯರೇ ಪಂಚನಾಮೆಗೆ ಸಹಿ ಹಾಕಿದ್ದಾರೆ. ಇದೂ ಕೂಡ ಅನುಮಾನಕ್ಕೆ ಕಾರಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾನವ ಹಕ್ಕುಗಳ ಹೋರಾಟಗಾರ ಅನಿಲ್ ನಾಯಕ್, ಪೊಲೀಸರ ತನಿಖೆ ಮೇಲೆ ವಿಶ್ವಾಸವಿಲ್ಲ. ಹೀಗಾಗಿ ಸಿಐಡಿ ಅಥವಾ ಸಿಬಿಐಯಿಂದ ತನಿಖೆ ನಡೆಸುವಂತೆ ಒತ್ತಾಯಿಸಿದರು. ಮಹಿಳಾ ಆಯೋಗ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇತ್ತ ಗಮನ ಹರಿಸಬೇಕೆಂದು ಅವರು ಆಗ್ರಹಿಸಿದರು.

Write A Comment