ಕರ್ನಾಟಕ

ಅನಕ್ಷರತೆ, ಅಸ್ಪೃಶ್ಯತೆಗೆ ಬ್ರಾಹ್ಮಣರು ಕಾರಣರಲ್ಲ : ಪೇಜಾವರ ಶ್ರೀ

Pinterest LinkedIn Tumblr

pejavara

ಬೆಂಗಳೂರು, ಜ.4: ಸಮಾಜದಲ್ಲಿನ ಅಸ್ಪೃಶ್ಯತೆ ಅನಕ್ಷರತೆಗೆ ಬ್ರಾಹ್ಮಣರು ಕಾರಣರಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಇಂದಿಲ್ಲಿ ತಿಳಿಸಿದರು. ಧನ್ವಂತರಿ ಫೌಂಡೇಶನ್ ಇಂಟರ್‌ನ್ಯಾಷನಲ್ ಬ್ರಾಹ್ಮಣ ಜಾಗೃತಿ ಆಯೋಜಿಸಿದ್ದ ಬ್ರಾಹ್ಮಣ ಆತ್ಮೀಯ ಸದಸ್ಯತ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಸ್ಪೃಶ್ಯತೆ ಮತ್ತು ಅನಕ್ಷರತೆಗೆ ಬ್ರಾಹ್ಮಣರೇ ಕಾರಣ ಎಂಬ ಆರೋಪವಿದೆ. ಆದರೆ ಇದಕ್ಕೆ ದ್ರಾವಿಡರು ಮೂಲ ಕಾರಣ ಎಂದು ಹೇಳಿದರು.

ತ್ರಿಮತಸ್ಥ ಬ್ರಾಹ್ಮಣರು ತಮ್ಮ ಭಿನ್ನಾಭಿಪ್ರಾಯ ಮರೆತು ಒಗ್ಗೂಡಬೇಕು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಅನುಯಾಯಿಗಳು ಒಂದಾಗಿ ಸಮಸ್ತ ಬ್ರಾಹ್ಮಣರು ಒಗ್ಗೂಡಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಎಲ್ಲಾ ಸಮಾಜದಲ್ಲಿ ಸಂಘಟನೆಗಳಿವೆ. ಅದೇ ರೀತಿ ಬ್ರಾಹ್ಮಣ ಸಮುದಾಯವು ಸಂಘಟನೆಯ ಮೂಲಕ ಹಿಂದೂ ಧರ್ಮದ ಅಭಿವೃದ್ಧಿ ಸನಾತನ ಧರ್ಮದ ಪರಿಪಾಲನೆಗಾಗಿ ಶ್ರಮಿಸಬೇಕು ಎಂದರು.

ಮೀಸಲಾತಿ ಕೋರುವ ಬದಲು ಸ್ವಯಂ ಉದ್ಯೋಗ ಕೈಗೊಂಡು ಅನ್ಯರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಹೇಳಿದರು. ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರ ರಾವ್ ಮಾತನಾಡಿ, ಶಿಕ್ಷಣ , ಆರೋಗ್ಯ, ಆಹಾರಕ್ಕೆ ಒತ್ತು ಕೊಡಬೇಕು. ಬ್ರಾಹ್ಮಣರು ವಿಶ್ವದೆಲ್ಲೆಡೆ ನೆಲೆಸಿದ್ದು , ಸಂಘಟಿತರಾಗಲು ತಲಾ ಒಂದು ರೂ. ದೇಣಿಗೆ ನೀಡುವ ಅಭಿಯಾನ ಕೈಗೊಳ್ಳಬೇಕು. ಇದರಿಂದ ಕೋಟ್ಯಂತರ ರೂ. ಸಂಗ್ರಹವಾಗಲಿದ್ದು, ಸಮಾಜದ ಅಭಿವೃದ್ಧಿಗೆ ನೆರವಾಗಲಿದೆ ಎಂದರು. ನಲ್ಸಾರ್ ವಿವಿ ಕುಲಪತಿ ವೆಂಕಟರಾವ್ ರಾಮ್‌ಬಟ್ಲ , ಧನ್ವಂತರಿ ಫೌಂಡೇಷನ್ ಇಂಟರ್‌ನ್ಯಾಷನಲ್ ಬ್ರಾಹ್ಮಣ ಜಾಗೃತಿ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪಿ. ಕಮಲಾಕರ ಶರ್ಮ ಮತ್ತಿತರರು ಪಾಲ್ಗೊಂಡಿದ್ದರು.

Write A Comment