ಕರ್ನಾಟಕ

ನೂಡಲ್ಸ್‌ಗೆ ಇಲಿ ಪಾಷಾಣ; 10 ವರ್ಷದ ಬಾಲಕಿ ಸಾವು

Pinterest LinkedIn Tumblr

noodles

ಬೆಂಗಳೂರು: ಮ್ಯಾಗಿ ನೂಡಲ್ಸ್ ಜತೆಗೆ ನೀಡುವ ಮಸಾಲೆ ಪೌಡರ್ ಎಂದು ಭಾವಿಸಿ ಮನೆಯಲ್ಲಿದ್ದ ಇಲಿ ಪಾಷಾಣವನ್ನು ನೂಡಲ್ಸ್‌ಗೆ ಹಾಕಿ ಬೇಯಿಸಿಕೊಂಡು ತಿಂದು 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ನೂಡಲ್ಸ್ ಮಾಡಿಕೊಟ್ಟ ತಾಯಿ ಹಾಗೂ ಮತ್ತೊಬ್ಬ ಮಗಳು ಅಸ್ವಸ್ಥಗೊಂಡಿದ್ದಾರೆ.

ಬಾಬುಸಾಬ್ ಪಾಳ್ಯ ಸಮೀಪದ ಫ್ಲವರ್ ಗಾರ್ಡನ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಶಂಕರ್ ಹಾಗೂ ಗಾಂಧಿಮತಿ ದಂಪತಿ ಪುತ್ರಿ ಜೆಸ್ಸಿಕಾ ಮೃತ ಬಾಲಕಿ. ಅದೇ ನೂಡಲ್ಸ್ ತಿಂದಿದ್ದ ಗಾಂಧಿಮತಿ ಹಾಗೂ ಎರಡನೇ ಮಗಳು ಜೆನ್ನಿಫರ್ (12) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕರ್ ಟೆಂಪೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಗಾಂಧಿಮತಿ ಮನೆ ಕೆಲಸ ಮಾಡುತ್ತಿದ್ದಾರೆ.

ಶನಿವಾರ ಗಾಂಧಿಮತಿ ಮನೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದರು. ಆಗ ಜೆಸ್ಸಿಕಾ ಹಾಗೂ ಜೆನ್ನಿಫರ್ ತುಂಬಾ ಹೊಟ್ಟೆ ಹಸಿವಾಗುತ್ತಿದೆ ಎಂದಿದ್ದಾರೆ. ಹೀಗಾಗಿ ಗಾಂಧಿಮತಿ ಅವರು ಮನೆಯಲ್ಲಿದ್ದ ನೂಡಲ್ಸ್ ಪ್ಯಾಕೆಟ್ ತೆಗೆದುಕೊಂಡು ಬೇಯಿಸಿದ್ದಾರೆ.

ನೂಡಲ್ಸ್ ಮಸಾಲೆ ಪಾಕೆಟ್‌ನಂತೆ ಕಾಣುವ ಮತ್ತೊಂದು ಸಣ್ಣ ಪಾಕೆಟ್‌ನಲ್ಲಿದ್ದ ಪೌಡರ್‌ನ್ನು ಕುದಿಯುವ ನೂಡಲ್ಸ್‌ಗೆ ಹಾಕಿದ್ದರು. ಈ ಹಿಂದೆ ನೂಡಲ್ಸ್ ಮಾಡಿದಾಗ ಉಳಿದಿದ್ದ ಮಸಾಲೆ ಅಂದುಕೊಂಡಿದ್ದರು.

ನೂಡಲ್ಸ್ ಅನ್ನು ಮೂವರೂ ಸೇವಿಸಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಎಲ್ಲರಿಗೂ ವಾಂತಿಯಾಗಿದೆ. ಈ ವೇಳೆ ಪತಿ ಶಂಕರ್ ಮನೆಯಲ್ಲಿ ಇರಲಿಲ್ಲ. ಅತ್ತೆ ನೆರವಿನೊಂದಿಗೆ ಹೆಣ್ಣೂರು ಬಂಡೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದರು. ಮೂವರ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿತ್ತು. ಹೀಗಾಗಿ ಗಾಂಧಿಮತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಸೋಮವಾರ (ಡಿ.29) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇನ್ನಷ್ಟು ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಮನೆಗೆ ಮರಳಿದ್ದರು. ಆದರೆ, ಮಂಗಳವಾರ (ಡಿ.30) ನಸುಕಿನ 4 ಗಂಟೆ ಸುಮಾರಿಗೆ ಏಕಾಏಕಿ ಬಾಲಕಿ ಜೆಸ್ಸಿಕಾಗೆ ವಾಂತಿಯಾಗಲು ಆರಂಭಿಸಿ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದರು.

ಮಸಾಲೆ ಕವರ್‌ನಲ್ಲಿ ಇಲಿ ಪಾಷಾಣ ಇಟ್ಟಿದ್ದೇ ಜೀವಕ್ಕೆ ಮುಳುವಾಯ್ತು
ಮನೆಯಲ್ಲಿ ಇಲಿಗಳ ಕಾಟ ಇತ್ತು. ಹೀಗಾಗಿ ಗಾಂಧಿಮತಿ ಇಲಿಗಳಿಗೆ ವಿಷ ಇಟ್ಟಿದ್ದರು. ಇನ್ನು ಸ್ವಲ್ಪ ಪ್ರಮಾಣದಲ್ಲಿ ವಿಷ ಬಾಕಿ ಇದ್ದು ಅದನ್ನು ನೂಡಲ್ಸ್ ಕವರ್‌ನಲ್ಲಿ ಹಾಕಿ ಮತ್ತೊಮ್ಮೆ ಬಳಸಿದರಾಯ್ತು ಎಂದು ಇಟ್ಟಿದ್ದರು. ಆದರೆ, ಇಲಿ ಪಾಷಾಣ ಹಾಗೂ ಮ್ಯಾಗಿ ನೂಡಲ್ಸ್ ಪ್ಯಾಕೆಟ್ ಅಕ್ಕಪಕ್ಕದಲ್ಲಿ ಇಟ್ಟಿದ್ದು ಜೀವಕ್ಕೆ ಮುಳುವಾಗಿದೆ. ಆಸ್ಪತ್ರೆಗೆ ದಾಖಲಾಗಿ ವೈದ್ರು ತಿಳಿಸಿದಾಗಲೇ ಗಾಂಧಿಮತಿಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment