ಕರ್ನಾಟಕ

ಮನೆಗೆ ನುಗ್ಗಿ ದಾಂದಲೆ: ಮಹಿಳೆ ಆತ್ಮಹತ್ಯೆ; ಮಾಲೀಕರ ಕುಟುಂಬ ಪೊಲೀಸ್ ವಶಕ್ಕೆ

Pinterest LinkedIn Tumblr

pvec27dec14rjsuicide(1)

ಬೆಂಗಳೂರು: ನಾಯಂಡಹಳ್ಳಿ ಸಮೀ­ಪದ ತಿಗಳರ­ತೋಟದಲ್ಲಿ ಗುರುವಾರ ರಾತ್ರಿ ದೇವಿ (23) ಎಂಬುವರು ನೇಣು ಹಾಕಿ­ಕೊಂಡು ಆತ್ಮಹತ್ಯೆ ಮಾಡಿ­ಕೊಂಡಿದ್ದಾರೆ. ‘ಮನೆ ಮಾಲೀಕರು ಹಾಗೂ ನೆರೆಮನೆಯ ಮಹಿಳೆಯರು ಮನೆಗೆ ನುಗ್ಗಿ ದಾಂದಲೆ ನಡೆಸಿದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಮೃತರು ಪತ್ರ ಬರೆದಿಟ್ಟಿದ್ದಾರೆ.

ಘಟನೆ ಸಂಬಂಧ ಮೃತರ ತಾಯಿ ನಾಗಮ್ಮ ದೂರು ಕೊಟ್ಟಿದ್ದಾರೆ. ಆತ್ಮ­ಹತ್ಯೆಗೆ ಪ್ರಚೋದನೆ (ಐಪಿಸಿ 306) ನೀಡಿದ ಆರೋಪದಡಿ ಪ್ರಕರಣ ದಾಖ­ಲಿಸಿ­ಕೊಂಡು ಮನೆಯೊಡತಿ ಸುಶೀಲಮ್ಮ, ಮಕ್ಕಳಾದ ರಾಜೇಶ್ವರಿ, ಮೀನಾಕ್ಷಿ, 16 ವರ್ಷದ ಮಗ ಹಾಗೂ ನೆರೆಮನೆಯ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ­ಗಳಾದ ಮನೆ ಮಾಲೀಕ ಸುಬ್ರ­ಮಣಿ, ಅವರ ಮಗ ಮಣಿ­ಕಂಠ ಪರಾರಿ­ಯಾಗಿ­ದ್ದಾರೆ’ ಎಂದು ಚಂದ್ರಾ­ಲೇಔಟ್ ಪೊಲೀಸರು ತಿಳಿಸಿದರು.

ಮೂಲತಃ ಬಿಡದಿ ಹೋಬ­ಳಿ ವಾಜ­ರಹಳ್ಳಿಯ ದೇವಿ, 7 ವರ್ಷ­ಗಳ ಹಿಂದೆ ಕುಮಾರ್ ಅವ­ರನ್ನು ವಿವಾಹ­ವಾ­ಗಿದ್ದರು. ದಂಪತಿಗೆ 3 ವರ್ಷದ ಉಲ್ಲಾಸ್ ಎಂಬ ಮಗ­ನಿದ್ದಾನೆ. ಕುಮಾರ್ ಅವರು ಸ್ವಂತ ಲಾರಿ ಮತ್ತು ಟ್ರ್ಯಾಕ್ಟರ್‌ ಇಟ್ಟು­ಕೊಂಡಿದ್ದು, ಮರಳು ಸಾಗಾಣಿಕೆ ವ್ಯವಹಾರ ನಡೆಸು­ತ್ತಾರೆ. ಅವರಿಗೆ ಮಾತು ಬರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ವಾಜರಹಳ್ಳಿಯಲ್ಲೇ ನೆಲೆ­ಸಿದ್ದ ಈ ಕುಟುಂಬ, 10 ತಿಂಗಳ ಹಿಂದಷ್ಟೇ ಸುಬ್ರಮಣಿ ಅವರ ಮನೆಗೆ ಬಾಡಿಗೆ ಬಂದಿತ್ತು. ಈ ನಡುವೆ ಮಾಲೀಕರ ಮಗ ಮಣಿಕಂಠ, ದೇವಿ ಅವರ ಜತೆ ಹೆಚ್ಚು ಅನ್ಯೋನ್ಯವಾಗಿದ್ದ. ಇದ­ರಿಂದಾಗಿ ಮಗ ಮತ್ತು ದೇವಿ ನಡುವೆ ಅನೈತಿಕ ಸಂಬಂಧ ಇದೆ ಎಂದು ಮಣಿಕಂಠನ ಪೋಷಕರು ಅನುಮಾನಿ­ಸಲು ಆರಂಭಿಸಿದ್ದರು. ಇದೇ ವಿಚಾರ­ವಾಗಿ ಅವರು ದೇವಿ ಜತೆ ಹಲವು ಬಾರಿ ಜಗಳ ಕೂಡ ಆಡಿದ್ದರು.

ಮಾಲೀಕರ ಕುಟುಂಬ ಗುರುವಾರ ಸಂಜೆಯೂ  ನೆರೆಮನೆಯ ಇಬ್ಬರು ಮಹಿಳೆ­­ಯರ ಜತೆ ದೇವಿ ಅವರ ಮನೆಗೆ ನುಗ್ಗಿ ಗಲಾಟೆ ಮಾಡಿತ್ತು. ಈ ವೇಳೆ  ಅವರನ್ನು ಮನಬಂದಂತೆ ಥಳಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪೀಠೋಪ­ಕರಣಗಳನ್ನು ಧ್ವಂಸ ಮಾಡಿತ್ತು. ಹೊರಗೆ ಹೋಗಿದ್ದ ದೇವಿ ಅವರ ತಾಯಿ ನಾಗಮ್ಮ, ಸಂಜೆ 6.30ರ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ದೇವಿ, ತಾಯಿ ಬಳಿ ಅಳಲು ತೋಡಿಕೊಂಡು ಅತ್ತಿದ್ದರು ಎನ್ನಲಾಗಿದೆ.

ರಾತ್ರಿ 7.30ಕ್ಕೆ ನಾಗಮ್ಮ, ಮೊಮ್ಮಗ­ನನ್ನು ಕರೆದು­ಕೊಂಡು ಹಾಲು ತರಲು ಅಂಗಡಿಗೆ ಹೊರಟಿ­ದ್ದರು. ಆಗ  ಮಾಲೀಕರು ಮತ್ತೆ ಮನೆಗೆ ಬಂದು ಗಲಾಟೆ ಮಾಡ­ಬಹುದು ಎಂಬ ಆತಂಕ­ದಿಂದ ಮುಂಜಾಗ್ರತಾ ಕ್ರಮ­ವಾಗಿ ಬೀಗ ಹಾಕಿಕೊಂಡು ಹೋಗಿದ್ದರು. ಈ ವೇಳೆ ದೇವಿ ಅವರು ನೇಣು ಹಾಕಿ­ಕೊಂಡು ಆತ್ಮಹತ್ಯೆ ಮಾಡಿ­ಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

‘ನನ್ನ ವಿರುದ್ಧ ವಿನಾ ಕಾರಣ ಅನೈತಿಕ ಸಂಬಂಧದ ಆರೋಪ ಹೊರಿಸಲಾಗಿದೆ. ನನ್ನದಲ್ಲದ ತಪ್ಪಿಗೆ ಮಾಲೀಕರ ಕುಟುಂಬ ಹಾಗೂ ನೆರೆಮನೆಯ ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಈ ಸಾವಿಗೆ ಅವರೇ ಕಾರಣ’ ಎಂದು ದೇವಿ ಪತ್ರ ಬರೆದಿಟ್ಟಿದ್ದಾರೆ.

ಮತ್ತೊಂದು ಪ್ರಕರಣ
ಮೂಡಲಪಾಳ್ಯ ಸಮೀಪದ ಸಂಜೀವಿನಿನಗರ 9ನೇ ಅಡ್ಡರಸ್ತೆಯಲ್ಲಿ ಗುರುವಾರ ರಾತ್ರಿ ರಾಮ್‌ದಾಸ್ (45) ಎಂಬ ಆಟೊ ಚಾಲಕ ಬೆಂಕಿ ಹಚ್ಚಿ­ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾತ್ರಿ 8.30ರ ಸುಮಾರಿಗೆ ಪತ್ನಿ–ಮಗ ಸಂಬಂಧಿಕರ ಮನೆಗೆ ಹೋಗಿದ್ದಾಗ ಈ ಘಟನೆ ನಡೆ­ದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಚಂದ್ರಾ­ಲೇಔಟ್ ಠಾಣೆ­ಯಲ್ಲಿ ಪ್ರಕರಣ ದಾಖಲಾಗಿದೆ.

Write A Comment