ಕರ್ನಾಟಕ

ರೂ.26ಕ್ಕೆ ಜೀವಮಾನ ಉಚಿತ ಅಪಘಾತ ವಿಮೆ: ಮರೀಚಿಕೆಯಾಗಿ ಉಳಿದ ಮಹತ್ವದ ಯೋಜನೆ

Pinterest LinkedIn Tumblr

note

ಬೆಂಗಳೂರು: ‘ಬರೀ ರೂ. 26 ನೀಡಿರಿ. ಜೀವ­ಮಾನ ಪೂರ್ತಿ ರೂ. 2ಲಕ್ಷ ಉಚಿತ ಅಪಘಾತ ವಿಮೆ ಪಡೆಯಿರಿ’.
ಇದು ಯಾವುದೇ ವಿಮಾ ಕಂಪೆನಿಯ ಜಾಹೀರಾತು ಅಲ್ಲ. ಬದಲು, ಮರೀಚಿಕೆ­ಯಾಗಿ ಉಳಿದಿರುವ ರಾಜ್ಯ ಕಾರ್ಮಿಕ ಇಲಾಖೆಯ ಪ್ರಚಾರ ಪಡೆಯದ ಯೋಜನೆಯ ಘೋಷಣೆ.

‘ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ’ ಮೂಲಕ ಜಾರಿಗೆ ತಂದಿರುವ ‘ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲ­ಕರ ಅಪಘಾತ ಪರಿಹಾರ ಯೋಜನೆ’ ಎಂಬ ಹೆಸರಿನ ಈ ಯೋಜನೆ ಕುರಿತು ಬಹುತೇಕ ಚಾಲಕರಿಗೆ ಅರಿವು ಇಲ್ಲ’ ಎನ್ನುತ್ತಾರೆ ರಾಜ್ಯ ಕಾರ್ಮಿಕ ಆಯುಕ್ತ ಡಾ.ಡಿ.ಎಸ್.ವಿಶ್ವನಾಥ್.

ರಾಜ್ಯದಲ್ಲಿ ಚಾಲನಾ ಪರವಾನಗಿ ಪಡೆದ ಖಾಸಗಿ ವಾಣಿಜ್ಯ ವಾಹನ­ಗಳಾದ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌, ಲಾರಿ ಮತ್ತು ಬಸ್‌ ಚಾಲಕರು ಈ ಯೋಜನೆ ಲಾಭ ಪಡೆಯಬಹುದು. ಆದರೆ ಇದು ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳ ವಾಹನ ಚಾಲಕರಿಗೆ ಅನ್ವಯಿಸುವುದಿಲ್ಲ. ಈ ವಿಮಾ ಯೋಜನೆ ಸಂಪೂರ್ಣ­ವಾಗಿ ಉಚಿತವಾಗಿದೆ. ಆದರೆ ಮಂಡಳಿ ನಿಗದಿ ಪಡಿಸಿದ ಅರ್ಜಿ ನಮೂನೆಗೆ ರೂ.1 ಮತ್ತು ನೋಂದಣಿ ಶುಲ್ಕವೆಂದು ರೂ. 25 ಚಾಲಕರು ಪಾವತಿಸಬೇಕು.

20ರಿಂದ 70ರ ವಯೋಮಾನದ­ಲ್ಲಿ­ರುವ ಚಾಲಕರು ಅರ್ಜಿ ಸಲ್ಲಿಸಬಹುದಾ­ಗಿದೆ. ಈ ಯೋಜನೆಯಲ್ಲಿ ನೋಂದಾ­ಯಿತ ಚಾಲಕರು ಕರ್ತವ್ಯದ ಮೇಲೆ ಇಲ್ಲದಿದ್ದಾಗ ಅಪಘಾತಕ್ಕೆ ಒಳಗಾದರು ಕೂಡ ಪರಿಹಾರ ದೊರೆಯಲಿದೆ. ನೋಂದಾಯಿತ ಚಾಲಕ ಅಪಘಾತ­ದಲ್ಲಿ ಮೃತಪಟ್ಟರೆ ಆತ­ನಿಂದ  ನಾಮ ನಿರ್ದೇಶನ­ಗೊಂಡವರಿಗೆ ರೂ.2ಲಕ್ಷ ಪರಿ­ಹಾರ ಸಿಗಲಿದೆ. ಒಂದೊಮ್ಮೆ, ಗಾಯ­ಗೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳ­ಗಾದರೆ ಚಾಲಕನಿಗೆ ರೂ.2ಲಕ್ಷ ಪರಿಹಾರ ದೊರೆಯಲಿದೆ.  ಗಂಭೀರ­ವಾಗಿ ಗಾಯ­ಗೊಂಡು ಆಸ್ಪತ್ರೆಯಲ್ಲಿ 15 ದಿನ­ಕ್ಕಿಂತಲೂ ಹೆಚ್ಚು ದಿನ ದಾಖ­ಲಾದರೆ ಒಳ­ರೋಗಿ ಚಿಕಿತ್ಸಾ ವೆಚ್ಚವೆಂದು ಗರಿಷ್ಠ ರೂ.1ಲಕ್ಷದವರೆಗೆ ಪರಿಹಾರ ಪಡೆಯಬಹುದಾಗಿದೆ.

ಶೀಘ್ರದಲ್ಲಿಯೇ ಆನ್‌ಲೈನ್‌ ನೋಂದಣಿ: ‘ಸದ್ಯ, ಚಾಲಕರು ಕಾರ್ಮಿಕ ಮತ್ತು ಸಾರಿಗೆ ಇಲಾಖೆಯ ಕಚೇರಿ ತೆರಳಿ ನೋಂದಣಿ ಮಾಡಿಕೊಳ್ಳ­ಬೇಕು. ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭಿಸಲು ಈಗಾಗಲೇ ತಂತ್ರಾಂಶ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲಿಯೇ ಆನ್‌ಲೈನ್‌ ನೋಂದಣಿ ಸೇವೆ ಚಾಲಕ­ರಿಗೆ ಲಭ್ಯವಾಗಲಿದೆ’ ಎನ್ನುತ್ತಾರೆ ವಿಶ್ವನಾಥ್.
ಚಾಲಕರು ಹೆಚ್ಚಿನ ಮಾಹಿತಿಗಾಗಿ 080–26631583/584 ಸಂಖ್ಯೆಗೆ ಸಂಪರ್ಕಿಸಬಹುದು.

ದಾಖಲೆಗಳೇನು ಬೇಕು?
ಚಾಲ್ತಿಯಲ್ಲಿರುವ ವಾಣಿಜ್ಯ ವಾಹನ ಚಾಲನಾ ಪರವಾನಗಿ ಪತ್ರ (ಎಲ್ಲೊ ಬ್ಯಾಡ್ಜ್ ಡ್ರೈವಿಂಗ್‌ ಲೈಸೆನ್ಸ್‌ ), ವಿಳಾಸ ದೃಢಿಕರಿಸುವ ದಾಖಲೆ, ಪಾಸ್‌ಪೋರ್ಟ್‌ ಅಳತೆಯ ಒಂದು ಬಣ್ಣದ ಭಾವಚಿತ್ರ ಇವಿಷ್ಟು ಸಾಕು. ಬ್ಯಾಂಕ್‌ ಪಾಸ್‌ ಪುಸ್ತಕದ ನಕಲು ಪ್ರತಿಯೊಂದನ್ನು ತೆಗೆದುಕೊಂಡು ಹೋದರೆ ಅನುಕೂಲ.

ನೋಂದಣಿ ಎಲ್ಲೆಲ್ಲಿ?
ಬನ್ನೇರುಘಟ್ಟ ರಸ್ತೆಯಲ್ಲಿ ಕಾರ್ಮಿಕ ಭವನದಲ್ಲಿರುವ ಮಂಡಳಿಯ ಕಚೇರಿ, ಎಲ್ಲ ಜಿಲ್ಲೆಗಳ ಕಾರ್ಮಿಕ ಅಧಿಕಾರಿ­ಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರ ಕಚೇರಿ­ಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳಲ್ಲಿ ಇರುವ ನೋಂದಣಿ ಕೇಂದ್ರಗಳಲ್ಲಿ ಚಾಲಕರು ಹೆಸರು ನೋಂದಾಯಿಸಬಹುದು.

Write A Comment