ಕರ್ನಾಟಕ

ಶಂಕಿತ ಸರಗಳ್ಳರ ಭಾವಚಿತ್ರ ಬಿಡುಗಡೆ: ಸುಳಿವು ನೀಡುವಂತೆ ಪೊಲೀಸರ ಮನವಿ

Pinterest LinkedIn Tumblr

shajkjhk

ಬೆಂಗಳೂರು: ವಿಶೇಷ ತಂಡಗಳನ್ನು ರಚಿಸಿಕೊಂಡು ಸರಗಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗದ
(ಸಿಸಿಬಿ) ಪೊಲೀ­ಸರು, ಇದೀಗ ಸಿ.ಸಿ ಕ್ಯಾಮೆರಾ­ದಲ್ಲಿ ದಾಖಲಾಗಿರುವ ದೃಶ್ಯಗಳನ್ನು ಆಧರಿಸಿ ಇಬ್ಬರು ಶಂಕಿತರ ಭಾವಚಿತ್ರವನ್ನು ಬಹಿರಂಗಪಡಿಸಿದ್ದಾರೆ.

ಡಿ.23ರಂದು ಬೈಕ್‌ನಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಕೆಲವೇ ತಾಸುಗಳಲ್ಲಿ ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ ಮತ್ತು ಬನಶಂಕರಿಯಲ್ಲಿ ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚಿದ್ದರು. ಆ ದೃಶ್ಯ­ಗಳು ಕಟ್ಟಡವೊಂದರ ಸಿ.ಸಿ.­ಕ್ಯಾಮೆರಾ­ದಲ್ಲಿ ದಾಖಲಾಗಿದ್ದವು. ಆ ದೃಶ್ಯ ಹಾಗೂ ಸರ ಕಳೆದುಕೊಂಡವರು ಕೊಟ್ಟ ಮಾಹಿತಿ ಆಧರಿಸಿ ಪೊಲೀಸರು ಇಬ್ಬರು ಶಂಕಿತರ ಭಾವಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಚಿತ್ರದಲ್ಲಿರುವ ವ್ಯಕ್ತಿಗಳನ್ನು ಕಂಡ ಕೂಡಲೇ  94808 00926 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸುವಂತೆ ಸಿಸಿಬಿ
ಡಿಸಿಪಿ ಅಭಿಷೇಕ್ ಗೋಯಲ್ ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಮುಂದುವರಿದ ಕೃತ್ಯ: ಎರಡು ದಿನ­ಗಳಿಂದ 18 ಕಡೆ ಸರ ದೋಚಿದ್ದ ದುಷ್ಕರ್ಮಿಗಳು, ಶುಕ್ರವಾರವೂ ತಮ್ಮ ಕೃತ್ಯವನ್ನು ಮುಂದುವರಿಸಿದರು. ಸಂಬಂಧಿಕರ ಮನೆಗೆ ಹೋಗಿ ವಾಪಾ­­­ಸಾಗುತ್ತಿದ್ದ ಡಿ.ವಿ.ಸಾಕಮ್ಮ ಎಂಬುವರಿಂದ ದುಷ್ಕರ್ಮಿಗಳು, 99 ಗ್ರಾಂನ ಚಿನ್ನದ ಸರ ದೋಚಿರುವ ಘಟನೆ ಕೆ.ಆರ್‌.ಪುರ ಸಮೀಪದ ಲಕ್ಷ್ಮೀಪುರ ಲೇಔಟ್‌ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ರಾಜಾಜಿನಗರದ ಐದನೇ ಹಂತ­ದಲ್ಲಿ ನಡೆದ ಮತ್ತೊಂದು ಪ್ರಕರಣ­ದಲ್ಲಿ ದುಷ್ಕರ್ಮಿಗಳು ಜ್ಯೋತಿ ಎಂಬು­ವ­ರಿಂದ ಚಿನ್ನದ ಸರ ದೋಚಲು ಯತ್ನಿಸಿದ್ದಾರೆ. ಅಗ್ರಹಾರ ದಾಸರಹಳ್ಳಿ ನಿವಾಸಿ­ಯಾದ ಜ್ಯೋತಿ, ಬೆಳಿಗ್ಗೆ 10.30ಕ್ಕೆ ಕೆಲಸಕ್ಕೆ ನಡೆದು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಸರ ಕಿತ್ತುಕೊಂಡಿ­ದ್ದಾರೆ. ಕೂಡಲೇ ಜ್ಯೋತಿ ಅವರು ಸರ ಹಿಡಿದುಕೊಂಡಿದ್ದರಿಂದ ಅದು ಕಳ್ಳನ ಪಾಲಾಗಿಲ್ಲ. ಈ ಸಂಬಂಧ ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕದ್ದ ಕೂಡಲೇ ಸಿಕ್ಕಿಬಿದ್ದ: ರಾಜಾಜಿನಗರ ಕೈಗಾರಿಕಾ ಪ್ರದೇಶ­ದಲ್ಲಿ ಗುರುವಾರ ರಾತ್ರಿ ಚಂದ್ರಕಲಾ (30) ಎಂಬುವರಿಂದ 15 ಗ್ರಾಂ ಚಿನ್ನದ ಸರ ದೋಚಿದ್ದ ಮುನಿರಾಜು (25) ಎಂಬಾತನನ್ನು ಗಸ್ತಿನಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ. ಸಂಬಂಧಿಕರ ಮನೆಗೆ ಹೋಗಿದ್ದ ಚಂದ್ರಕಲಾ, ರಾತ್ರಿ 9.45ರ ಸುಮಾ­ರಿಗೆ ಮನೆಗೆ ಹಿಂದಿರುಗುತ್ತಿದ್ದರು. ಆಗ ಅವ­ರನ್ನು ಹಿಂಬಾಲಿಸಿ ಬಂದ ಮುನಿರಾಜು, ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ. ಚಂದ್ರಕಲಾ ಅವರ ಚೀರಾಟ ಕೇಳಿದ ಗಸ್ತಿನಲ್ಲಿದ್ದ ಪೊಲೀಸರು, ಕೂಡಲೇ ಆರೋಪಿಯನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಮುನಿರಾಜು ಅಪರಾಧ ಹಿನ್ನೆಲೆವುಳ್ಳ ವ್ಯಕ್ತಿಯಾಗಿದ್ದು, ದರೋಡೆ ಯತ್ನ ಆರೋಪದಡಿ ಜೈಲಿಗೆ ಹೋಗಿದ್ದ. ತಿಂಗಳ ಹಿಂದೆ ಬಿಡುಗಡೆಯಾದ ಈತ, ಪುನಃ ಕೃತ್ಯಗಳನ್ನು ಮುಂದುವರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಗಿರವಿ ಇಟ್ಟುಕೊಂಡರೆ ಗೂಂಡಾ ಕಾಯ್ದೆ
ಕಳವು ಆಭರಣಗಳನ್ನು ಖರೀದಿಸುವ ಗಿರವಿ ಅಂಗಡಿಗಳ ಮಾಲೀಕರ ವಿರುದ್ಧ ಗೂಂಡಾ ಹಾಗೂ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
‘ಕೆಲ ವರ್ತಕರು ಕಳವು ಮಾಲನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನೇ ವೃತ್ತಿ ಮಾಡಿಕೊಂಡಿ­ದ್ದಾರೆ. ಹೀಗಾಗಿ ಸರಗಳ್ಳರು ಮತ್ತು  ಅಪರಾಧ ಹಿನ್ನೆಲೆವುಳ್ಳ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿರುವ ವರ್ತಕರ ಪಟ್ಟಿ ತಯಾರಿಸಲಾಗುತ್ತಿದೆ. ಅಂಥ ವರ್ತಕರ ವಿರುದ್ಧ ಗೂಂಡಾ ಮತ್ತು ಕೋಕಾ ಕಾಯ್ದೆ­ಯನ್ನು ಪ್ರಯೋಗಿ­ಸಲು ನಿರ್ಧ­ರಿಸ­ಲಾಗಿದೆ’ ಎಂದು ಹಿರಿಯ ಅಧಿಕಾರಿ­ಗಳು ತಿಳಿಸಿದರು.

Write A Comment