ಕರ್ನಾಟಕ

ನೆಡುತೋಪಿನಲ್ಲಿ ನರಕಯಾತನೆ!; ರಾಜ್ಯ ಸರ್ಕಾರದ ಯಾವುದೇ ‘ಭಾಗ್ಯ’ ಇವರಿಗಿಲ್ಲ

Pinterest LinkedIn Tumblr

nedutopu

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ತೀರ್ಥ­ಹಳ್ಳಿ, ಶಿವಮೊಗ್ಗ, ಸಾಗರ, ಹೊಸನಗರ ತಾಲ್ಲೂಕುಗಳ ನೆಡುತೋಪುಗಳಲ್ಲಿ ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ವಾಸಿಸುತ್ತಿರುವ 250ಕ್ಕೂ ಹೆಚ್ಚು ಕುಟುಂಬಗಳು ಮೂಲ­ ಸೌಲಭ್ಯಗಳಿಲ್ಲದೆ ನರಳುತ್ತಿವೆ.

ಇವರಲ್ಲಿ ಬಹುತೇಕ ಕುಟುಂಬಗಳಿಗೆ ಪಡಿ­ತರ ಚೀಟಿ ಇಲ್ಲ. ಮತ­ದಾರರ ಚೀಟಿ ಇಲ್ಲ. ಹೀಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಭಾಗ್ಯಲಕ್ಷ್ಮಿ ಮುಂತಾದ ಯಾವುದೇ ಯೋಜನೆಗಳ ಲಾಭವೂ ಲಭ್ಯವಾಗುತ್ತಿಲ್ಲ.

ಈ ನೆಡುತೋಪುಗಳಲ್ಲಿ 200ಕ್ಕೂ ಹೆಚ್ಚು ಮಕ್ಕಳು ಕೆಲಸ ಮಾಡು­ತ್ತಾರೆ. ಸಣ್ಣ ಸಣ್ಣ ಜೋಪಡಿಗಳೇ ಇವರ ವಾಸ ಸ್ಥಳ. ಮಳೆ, ಚಳಿ, ಬಿಸಿಲು­ಗಳಿಂದ ರಕ್ಷಣೆಯೂ ಇಲ್ಲ. ಆರೋಗ್ಯ ಹದಗೆಟ್ಟರೆ ಔಷಧದ ಭಾಗ್ಯ ಕೂಡ ಇಲ್ಲ.

ಅಕೇಶಿಯಾ ಮತ್ತು ನೀಲಗಿರಿ ಮರಗಳನ್ನು ಕಡಿಯುವುದಕ್ಕಾಗಿಯೇ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಿಂದ 60 ವರ್ಷ­ಗಳ ಹಿಂದೆ ಇಲ್ಲಿಗೆ ಬಂದ ಇರುಳಿಗ ಮತ್ತು ಸೋಲಿಗ ಕುಟುಂಬಗಳು ಯಾವುದೇ ಸೌಲಭ್ಯ­ಗಳಿಲ್ಲದೆ ಬದುಕುತ್ತಿವೆ.

ಹುಂಚಕಟ್ಟೆ, ಬಿಜೋಳಿ, ಕುಡಚ, ಸಿಗಂದೂರು ಬಳಿಯ ಅರಿಗೆ, ಚಾರ್ಡಿ ಮುಂತಾದ ನೆಡುತೋಪುಗಳಲ್ಲಿ ಇವರು ವಾಸ ಮಾಡುತ್ತಾರೆ. ಒಂದು ಟನ್‌ ಮರ­ವನ್ನು ಕತ್ತರಿಸಿದರೆ ರೂ150 ಕೂಲಿ ಸಿಗುತ್ತದೆ. ಆದರೆ ನೆಡುತೋಪಿನಲ್ಲಿ ಮರಗಳನ್ನು ತೂಕ ಮಾಡುವ ವ್ಯವಸ್ಥೆ ಇಲ್ಲ. ಪೇಪರ್‌ ಮಿಲ್‌ನಲ್ಲಿ ಮಾತ್ರ ತೂಕ ಮಾಡಲಾಗುತ್ತದೆ. ಭದ್ರಾವತಿ ಮತ್ತು ದಾಂಡೇಲಿಯಲ್ಲಿ ಇರುವ ಪೇಪರ್‌ ಮಿಲ್‌ಗಳಿಗೆ ಇವರು ಹೋಗುವುದಿಲ್ಲ. ನೆಡು­ತೋಪು­ಗಳನ್ನು ಗುತ್ತಿಗೆ ಪಡೆದವರು ಮರ­ಗಳನ್ನು ಲಾರಿಗಳಲ್ಲಿ ಸಾಗಿಸುತ್ತಾರೆ. ಒಂದು ಲಾರಿಯಲ್ಲಿ ಎಷ್ಟು ಟನ್‌ ಮರ ಹಾಕಲಾಗು­ತ್ತದೆ ಎನ್ನುವುದೂ ಗೊತ್ತಿಲ್ಲ. ಪೇಪರ್‌ ಮಿಲ್‌ಗಳಲ್ಲಿ ಮರ ಇಳಿಸಿಬಂದ ಮಾಲಿಕರು ಇವರಿಗೆ ಕೂಲಿ ನೀಡುತ್ತಾರೆ.

‘ನಮಗೇನು ಗೊತ್ತಾಗುತ್ತೆ ಸ್ವಾಮಿ. ನೀವು ಕತ್ತರಿಸಿದ ಮರ ಇಷ್ಟೆ ಎಂದು ಹೇಳಿ ಅವರು ಒಂದಿಷ್ಟು ಹಣ ಕೊಡುತ್ತಾರೆ ಅಷ್ಟೆ. ಅದನ್ನೇ ನಾವೆಲ್ಲ ಹಂಚಿಕೊಳ್ಳುತ್ತೇವೆ’ ಎಂದು ಬಿಲ್ಲು ಒಡೆಯರ ಕೊಪ್ಪಲಿನ ರಾಜಪ್ಪ ಹೇಳುತ್ತಾರೆ.

‘ಇವರು ಭಾರತದ ಪ್ರಜೆಗಳೇ ಅಲ್ಲ. ಇವರು ಇಲ್ಲಿನ ನಾಗರಿಕರು ಎನ್ನಲು ಅವರ ಬಳಿ ಯಾವುದೇ ಪುರಾವೆಗಳೂ ಇಲ್ಲ. ಸಂಪೂರ್ಣ­ವಾಗಿ ಇವರನ್ನು ಜೀತ­ದಾಳುಗಳಂತೆ ನಡೆಸಿ­ಕೊಳ್ಳ­ಲಾಗುತ್ತಿದೆ’ ಎಂದು ಜನ ಸಂಗ್ರಾಮ ಪರಿಷತ್‌ನ ಪ್ರಸನ್ನ ಹೇಳುತ್ತಾರೆ.

ಸತತ ಸಾಲ: ‘ಒಂದು ಕಡೆ ಮರ ಕಡಿ­ಯು­ವುದು ಮುಗಿದ ನಂತರ ಇನ್ನೊಂದು ಕ್ಯಾಂಪಿಗೆ ಹೋಗುತ್ತೇವೆ. ಆಗ ನಮ್ಮ ಮಾಲಿ­ಕರೂ ಬದಲಾಗು­ತ್ತಾರೆ. ಆದರೆ ನಮ್ಮ ಸಾಲ ಮಾತ್ರ ಎಂದಿಗೂ ತೀರುವುದೇ ಇಲ್ಲ. ಮಾಲಿ­ಕರು ಬದಲಾದರೆ ಸಾಲವೂ ಹಳೆಯ ಮಾಲಿಕರಿಂದ ಹೊಸ ಮಾಲಿಕರಿಗೆ ವರ್ಗಾ­ವಣೆ­ಯಾಗುತ್ತದೆ’ ಎಂದು ಮಹದೇವಮ್ಮ ಹೇಳುತ್ತಾರೆ.

ಇಲ್ಲಿನ ಬಹುತೇಕ ಮಕ್ಕಳಿಗೆ ಕಜ್ಜಿ ಮುಂತಾದ ಚರ್ಮ ರೋಗಗಳಿವೆ. ಪ್ರತಿ ಕುಟುಂಬಕ್ಕೂ ಕನಿಷ್ಠ ಐದ­ರಿಂದ ಆರು ಮಕ್ಕಳಿದ್ದಾರೆ. ಇವರು ವಾಸಿ­ಸುವ ಜೋಪಡಿಯಲ್ಲಿಯೇ ಮಕ್ಕಳು ಹುಟ್ಟುತ್ತವೆ.

‘ಯಾರಾದರೂ ಸತ್ತರೆ ಅವರನ್ನು ಕ್ಯಾಂಪ್‌ನಲ್ಲಿಯೆ ಮಣ್ಣು ಮಾಡುತ್ತೇವೆ’ ಎಂದು ಸರಸ್ವತಿ ಹೇಳಿದರು.

‘ಜಾತಿ ಪ್ರಮಾಣ ಪತ್ರಗಳನ್ನು ಕೇಳಿದರೆ ಶಾಲಾ ದಾಖಲಾತಿ ಪತ್ರ ತರುವಂತೆ ತಹಶೀಲ್ದಾರ್‌ ಹೇಳುತ್ತಾರೆ. ನಾನೂ ಶಾಲೆಗೆ ಹೋಗಿಲ್ಲ. ನಮ್ಮ ಮಕ್ಕ­ಳಲ್ಲಿ ಯಾರೂ ಶಾಲೆಗೆ ಹೋಗಿಲ್ಲ. ದಾಖಲಾತಿ ಪತ್ರ ತರು­ವುದು ಎಲ್ಲಿಂದ’ ಎನ್ನುವುದು ವೆಂಕಟೇಶ್‌ ಅವರ ಸಮಸ್ಯೆ.
ಇಲ್ಲಿನ ಆದಿವಾಸಿಗಳ ಪರಿಸ್ಥಿತಿಯ ಬಗ್ಗೆ ಕರ್ನಾಟಕ ಆದಿವಾಸಿ ಜನ ಸೇವಾ ಸಂಘ, ನೇಟಿವ್‌ ಸಂಸ್ಥೆ, ಬರ್ಡ್ಸ ಸಂಸ್ಥೆ ಹಾಗೂ ಮಾನವ ಹಕ್ಕು ಕಾರ್ಯ­ಕರ್ತರು ಸಮೀಕ್ಷೆ ನಡೆಸಿ ಮನವಿಯೊಂ­ದನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ­ದ್ದಾರೆ. ಆದರೆ ಈವರೆಗೆ ಯಾವುದೇ ಬದಲಾವಣೆಯಾಗಿಲ್ಲ.

ನೆಡುತೋಪುಗಳಲ್ಲಿ ಜೀತದಾಳು­ಗಳಂತೆ ಇರುವ ಈ ಕುಟುಂಬಗಳಿಗೆ ಮತ­ದಾರರ ಚೀಟಿ, ಪಡಿತರ ಚೀಟಿ ನೀಡಿ, ಸೂಕ್ತ ಆರೋಗ್ಯದ ಸೌಲಭ್ಯ ಒದಗಿ­ಸಬೇಕು. ಅವರಿಗೆ ಜಮೀನು­ನೀಡಿ ಪುನರ್‌ವಸತಿ ಮಾಡ­ಬೇಕು ಎನ್ನುವುದು ಪ್ರಸನ್ನ ಅವರ ಒತ್ತಾಯ.
ಶಿವಮೊಗ್ಗ ಜಿಲ್ಲಾಧಿಕಾರಿ ವಿ.ಪಿ.­ಇಕ್ಕೇರಿ ರಜೆಯ ಮೇಲಿರುವುದರಿಂದ ಈ ಬಗ್ಗೆ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

‘ಆದಿವಾಸಿಗಳ ಸಮಸ್ಯೆ ಬಗ್ಗೆ ಕೆಲವರು ಮನವಿ ಸಲ್ಲಿಸಿದ್ದು ನಿಜ. ಆಗ ಕೆಲವರನ್ನು ಪುನರ್‌ವಸತಿ ಶಿಬಿರಕ್ಕೆ ಕಳುಹಿಸಲಾಗಿತ್ತು. ಕೆಲವೇ ದಿನಗಳಲ್ಲಿ ಅವರೆಲ್ಲಾ ಪರಾರಿಯಾದರು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ನೂರೂ, ಐನೂರು ಒಂದೆ!
ಇಲ್ಲಿನ ಮಕ್ಕಳು ಮತ್ತು ಮಹಿಳೆ­ಯರಿಗೆ ನೂರು ಮತ್ತು ಐನೂರು ರೂಪಾಯಿ ನೋಟು ತೋರಿಸಿದರೆ ವ್ಯತ್ಯಾಸವೇ ಗೊತ್ತಾಗುವುದಿಲ್ಲ.
ಅನ್ನಭಾಗ್ಯದ ಭಾಗ್ಯ ಇಲ್ಲ
ಬಹುತೇಕ ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲದೇ ಇರುವು­ದರಿಂದ ಅನ್ನಭಾಗ್ಯ ಯೋಜನೆಯ ಲಾಭ ಇವರಿಗೆ ದೊರಕುವುದಿಲ್ಲ. ಆದರೆ ಇವರಿಗೆ ನೆಡುತೋಪು ಮಾಲಿಕರು ಒಂದು ಕೆ.ಜಿ. ಅಕ್ಕಿ ನುಚ್ಚಿಗೆ ರೂ 25ರ ದರದಲ್ಲಿ ನೀಡುತ್ತಾರೆ. ಅದನ್ನು ಕೂಲಿಯಲ್ಲಿ ಮುರಿದುಕೊಳ್ಳುತ್ತಾರೆ.

Write A Comment