ಬೆಂಗಳೂರು: ಮಠಗಳ ಮೇಲೆ ನಿಯಂತ್ರಣ ಸಾಧಿಸಲು ವಿಧಾನಸಭೆಯಲ್ಲಿ ಮಂಡಿಸಿರುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಮಸೂದೆ – 2014’ಕ್ಕೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಅದನ್ನು ಮುಂದಿನ ಅಧಿವೇಶನದಲ್ಲಿ ಹಿಂಪಡೆಯುವ ಸಾಧ್ಯತೆ ಇದೆ.
ಎಚ್.ಕೆ.ಪಾಟೀಲ, ಎಸ್.ಆರ್. ಪಾಟೀಲ, ಆರ್.ವಿ. ದೇಶಪಾಂಡೆ, ಎಚ್.ಎಸ್.ಮಹದೇವ ಪ್ರಸಾದ್, ಸತೀಶ್ ಜಾರಕಿಹೊಳಿ ಸೇರಿದಂತೆ ಸಂಪುಟದ ಬಹುತೇಕ ಸಚಿವರು ಈ ಮಸೂದೆಗೆ ಆಕ್ಷೇಪ ಎತ್ತಿ, ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ಗೊತ್ತಾಗಿದೆ.
‘ಯಾರ ಗಮನಕ್ಕೆ ತಂದು ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು? ಇಂತಹ ಸೂಕ್ಷ್ಮ ಮಸೂದೆಯನ್ನು ಮಂಡಿಸುವುದಕ್ಕೂ ಮುನ್ನ ಸಚಿವ ಸಂಪುಟದಲ್ಲಿ ಚರ್ಚಿಸಬೇಕಿತ್ತು. ಅಂತಹ ಯಾವ ಪ್ರಯತ್ನವನ್ನೂ ಮಾಡದೆ ದಿಢೀರ್ ಎಂದು ಮಂಡಿಸಿ, ಎಲ್ಲ ಸಮುದಾಯಗಳ ಮಠಗಳನ್ನು ಎದುರು ಹಾಕಿಕೊಳ್ಳುವಂತೆ ಮಾಡಿರುವುದು ಸರಿಯಲ್ಲ’ ಎಂದು ಸಚಿವರುಗಳು ಅಸಮಾಧಾನ ಹೊರ ಹಾಕಿದರು ಎನ್ನಲಾಗಿದೆ.
‘ಮಠಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಆ ಕಾರಣದಿಂದ ಈ ಮಸೂದೆ ಮಂಡಿಸುತ್ತಿದ್ದು, ಅದು ಬಿಜೆಪಿ– ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕೂಸು ಎಂಬುದನ್ನು ಜನರಿಗೆ ತಿಳಿಸಿ, ನಂತರ ಮಂಡನೆ ಬಗ್ಗೆ ತೀರ್ಮಾನ ಮಾಡಬೇಕಿತ್ತು. ಅಂತಹ ಯಾವ ಕಸರತ್ತನ್ನೂ ಮಾಡದೆ ಏಕಾಏಕಿ ಈ ರೀತಿಯ ತೀರ್ಮಾನ ಮಾಡಿದ್ದು ಸರಿಯಲ್ಲ’ ಎಂದೂ ಕೆಲ ಸಚಿವರು ಅಭಿಪ್ರಾಯಪಟ್ಟರು ಎನ್ನಲಾಗಿದೆ.
ಒಂದು ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ‘ಇದೊಂದು ತಪ್ಪು ನಿರ್ಧಾರ. ಈ ವಿವಾದ ಏಕೆ ಬೇಕಿತ್ತು’ ಎಂದು ಜಯಚಂದ್ರ ಅವರನ್ನು ಪ್ರಶ್ನಿಸಿದರು ಎನ್ನಲಾಗಿದೆ. ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ವಾಪಸ್ ಪಡೆಯಬೇಕು ಎಂದು ಬಹುತೇಕ ಸಚಿವರು ಒತ್ತಾಯಿಸಿದಾಗ ಮುಖ್ಯಮಂತ್ರಿ ಕೂಡ ಸಮ್ಮತಿ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
‘ಗೊಂದಲ ಬೇಡ. ಸಮಾಜಕ್ಕೆ ತಪ್ಪು ಸಂದೇಶ ಹೋಗಿದ್ದು, ಅದನ್ನು ಸರಿಪಡಿಸುವ ಕೆಲಸ ಸರ್ಕಾರದಿಂದ ಆಗಬೇಕು. ಈ ಕಾರಣಕ್ಕೆ ಮಸೂದೆ ಹಿಂದೆ ಪಡೆಯುವ ತೀರ್ಮಾನ ಪ್ರಕಟಿಸಬೇಕು’ ಎಂದು ಸಚಿವರು ಆಗ್ರಹಪಡಿಸಿದರು ಎನ್ನಲಾಗಿದೆ.
ಮಠಾಧೀಶರಿಗೆ ಮುಖ್ಯಮಂತ್ರಿ ಅಭಯ
‘ಸುಪ್ರೀಂಕೋರ್ಟ್ ನಿರ್ದೇಶನದಂತೆ ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆದರೆ, ಇದರಿಂದ ಮಠಗಳ ಆಡಳಿತದಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸುತ್ತಿದೆ ಎಂಬ ಆಂತಕ ಬೇಡ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.
ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಠಗಳಲ್ಲಿ ಉತ್ತರಾಧಿಕಾರಿ ನೇಮಕ ವಿಳಂಬ, ಗೊಂದಲ ಉಂಟಾದಾಗ ಈ ವಿಧೇಯಕ ಬಳಕೆಯಾಗಲಿದೆ. ತಿದ್ದುಪಡಿ ಮಸೂದೆಯ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಮಠಾಧೀಶರು ಆತಂಕಪಡುವುದು ಬೇಡ’ ಎಂದು ಮನವಿ ಮಾಡಿದರು.
‘ಹೊಣೆ ಹೊರುತ್ತೇನೆ’
‘ಸಂಪುಟ ಸಭೆಯಲ್ಲಿ ಎಲ್ಲ ಸಚಿವರಿಗೂ ನೈಜ ಘಟನೆಯನ್ನು ವಿವರಿಸಲಾಯಿತು. ಬಹುತೇಕರಿಗೆ ಈ ವಿಷಯ ಗೊತ್ತಿರಲಿಲ್ಲ. ನ್ಯಾಯಾಲಯಗಳ ಮಧ್ಯಪ್ರವೇಶದಿಂದ ಆಗಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಆದರೂ ಈ ಮಸೂದೆ ಬೇಡ ಎನ್ನುವ ಅಭಿಪ್ರಾಯ ಬಂತು. ಆದರೆ, ಕಾನೂನು ಸಚಿವನಾಗಿ ನಾನು ಹಾಗೆ ಹೇಳಲು ಬರುವುದಿಲ್ಲ.
ಜನವರಿ 13ರಂದು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಅಭಿಪ್ರಾಯ ತಿಳಿಸದಿದ್ದರೆ ಧಾರ್ಮಿಕ ದತ್ತಿ ಕಾಯ್ದೆಯೇ ರದ್ದಾಗುವ ಅಪಾಯ ಇದೆ. ಆಗ 35 ಸಾವಿರ ಮುಜರಾಯಿ ದೇವಸ್ಥಾನಗಳಿಗೆ ವಾರಸುದಾರರು ಯಾರಾಗುತ್ತಾರೆ? ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರ ವಾದ ಮಾಡುವ ವಕೀಲರ ಸಲಹೆಯಂತೆ ಈ ಮಸೂದೆ ಮಂಡಿಸಲಾಯಿತು.
ಇದರ ಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ. ಇದರಲ್ಲಿ ದುರುದ್ದೇಶ ಇರಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಆಗಬಹುದಾದ ಮುಜು–ಗರದಿಂದ ತಪ್ಪಿಸಿಕೊಳ್ಳಬೇಕಾಗಿತ್ತು. ಈ ಸಂಬಂಧ ಸಂಪುಟದಲ್ಲಿ ವಿರೋಧ ವ್ಯಕ್ತವಾದ ಕಾರಣ ಪುನಃ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ. ಮಸೂದೆಯನ್ನು ನಾವು ರೂಪಿಸಿದ್ದಲ್ಲ, ಹಿಂದಿನ ಸರ್ಕಾರಗಳು ರೂಪಿಸಿದ್ದು ಎಂದು ಮಠಗಳಿಗೆ ಇ–ಮೇಲ್ ಮೂಲಕ ತಿಳಿಸಲಾಗಿದೆ.’
-ಜಯಚಂದ್ರ
ಮಠ ನಿಯಂತ್ರಣ ಮಸೂದೆ ವಾಪಸ್‌ಗೆ ಮಠಾಧೀಶರ ಒತ್ತಾಯ
ಬೆಂಗಳೂರು: ಮಠಗಳ ಅಸ್ತಿತ್ವ, ಭಕ್ತರು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಆಘಾತ ಉಂಟು ಮಾಡಿರುವ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ತೋಂಟದಾರ್ಯ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.
ಧಾರ್ಮಿಕ ಕ್ಷೇತ್ರಗಳ ಮೇಲೆ ನಿಯಂತ್ರಣ ಹೇರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಜ್ಞಾನಯೋಗಾಶ್ರಮದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ. ಉದ್ದೇಶಿತ ಮಸೂದೆಗೆ ಬಳ್ಳಾರಿಯ ಮಠಾಧೀಶರ ಧರ್ಮ ಪರಿಷತ್ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದೆ.
