ಮನೋರಂಜನೆ

ಸಪೂರ ದೇಹ, ತಿದ್ದಿ ತೀಡಿದ ಮೈಮಾಟದ ಮರಾಠಿ ಚೆಂದುಳ್ಳಿ ಚೆಲುವೆಯ ನಗರ ನಂಟು

Pinterest LinkedIn Tumblr

DEETH-llll

ಸಪೂರ ದೇಹ, ತಿದ್ದಿ ತೀಡಿದಂಥ ಮೈಮಾಟದ ದೀತ್ ಸೇಥಿ ಮಾದಕ ಉಡುಗೆ ತೊಟ್ಟು, ಕುಡಿ ನೋಟ ಬೀರುತ್ತಾ ವೈಯ್ಯಾರದೊಂದಿಗೆ ಒಮ್ಮೆ ಹೆಜ್ಜೆ ಹಾಕಿದರೆ ಸಭಾಂಗಣದಲ್ಲಿ ವಿದ್ಯುತ್ ಸಂಚಾರ. ಬೆಂಗಳೂರಿನ ಫ್ಯಾಷನ್ ಷೋಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಈ ಚೆಂದುಳ್ಳಿ ಚೆಲುವೆ ರೂಪದರ್ಶಿಯಾಗುವ ಅವಕಾಶ ತೊರೆದು, ಪರದೆಯ ಹಿಂದೆ ನಿಂತು ರೂಪದರ್ಶಿಗಳ ಹೆಜ್ಜೆಗಳನ್ನು ತಿದ್ದುವ  ಕೋರಿಯೋಗ್ರಫಿ ಕೆಲಸವನ್ನು ಆಯ್ದುಕೊಂಡಿದ್ದಾರೆ.

ಯಶಸ್ವಿ ರೂಪದರ್ಶಿಯಾಗುವ ಅರ್ಹತೆಗಳಿದ್ದರೂ ದೀತ್ ಮಾತ್ರ ಫ್ಯಾಷನ್ ಷೋಗಳ ಕೋರಿಯೋಗ್ರಫಿಯನ್ನು ಪ್ರಮುಖ ವೃತ್ತಿಯನ್ನಾಗಿ ಸ್ವೀಕರಿಸಿರುವುದು ಸೋಜಿಗದ ಸಂಗತಿ. ತೆರೆಯ ಹಿಂದೆ ನಿಂತು ರೂಪದರ್ಶಿಗಳನ್ನು ತಿದ್ದಿ, ತೀಡುವ ಕೋರಿಯೋಗ್ರಾಫರ್‌ಗಳು ಯಾರ ಕಣ್ಣಿಗೂ ಬೀಳುವುದೇ ಇಲ್ಲ. ಫ್ಯಾಶನ್ ಷೋ ಕೊನೆಯಲ್ಲಿ ರೂಪದರ್ಶಿಗಳ ಜೊತೆ ಒಮ್ಮೆ ಮಾತ್ರ ಬಂದು ಹೋಗುವುದು ವಾಡಿಕೆ. ಹೀಗಾಗಿ ಹೊರ ಜಗತ್ತಿಗೆ ಇವರು ಅಪರಿಚಿತರಾಗಿಯೇ ಉಳಿಯುತ್ತಾರೆ. ಈ ಎಲ್ಲ ಸತ್ಯ ಗೊತ್ತಿದ್ದರೂ ‘ಇದೇ ನನ್ನ ಪಾಲಿಗಿರಲಿ’ ಎಂದು ಖುಷಿಯಿಂದ ಒಪ್ಪಿ, ಅಪ್ಪಿಕೊಂಡಿದ್ದಾರೆ ಈಕೆ. ಆದರೆ, ಅವಕಾಶ ಸಿಕ್ಕಾಗಲೆಲ್ಲ ಹವ್ಯಾಸಕ್ಕಾಗಿ ಕೆಲವು ಷೋಗಳಲ್ಲಿ ದೀತ್ ಹೆಜ್ಜೆ ಹಾಕುವುದೂ ಉಂಟು.

ನಾಲ್ಕು ವರ್ಷಗಳಿಂದ ಪಾಠ
ಫ್ಯಾಷನ್ ಷೋನಲ್ಲಿ ಭಾಗವಹಿಸುವ ಯುವಕ–ಯುವತಿಯರಿಗೆ ನಾಲ್ಕು ವರ್ಷಗಳಿಂದ ನಗರದಲ್ಲಿ ರ್‍್ಯಾಂಪ್ ವಾಕ್ ತರಬೇತಿ ನೀಡುತ್ತಿರುವ ದೀತ್ ಸೇಥಿ ಮೂಲತಃ ಮಹಾರಾಷ್ಟ್ರದ ಕಿತ್ತಳೆ ನಗರಿ ನಾಗ್ಪುರದವರು. ಕಿತ್ತಳೆಯಂತೆ ಹೊಳೆಯುವ ಮೈಕಾಂತಿ ಹೊಂದಿರುವ ಅವರಿಗೆ ಇನ್ನೂ ೨೨ ವರ್ಷ. ಅದಾಗಲೇ ಈ ಚಿಗರೆ ಕಂಗಳ ಈ ಚೆಲುವೆ ದೇಶ, ವಿದೇಶಗಳಲ್ಲಿ ಸುಮಾರು ೨೫ ಫ್ಯಾಷನ್ ಷೋಗಳಿಗೆ ಕೋರಿಯೋಗ್ರಫಿ ಮಾಡಿದ್ದಾರೆ.

ವಸ್ತ್ರವಿನ್ಯಾಸಕ ಕೌಶಲ್ ವಿಷ್ಣು ಜತೆ ವಿನೂತನ ಶ್ಯೆಲಿಯ ವಸ್ತ್ರವಿನ್ಯಾಸ, ಆಕರ್ಷಕ ಉಡುಪುಗಳ ಆಯ್ಕೆಗೂ ಈಕೆ ನೆರವು ನೀಡುತ್ತಾರೆ.  ಬ್ಯೂಟಿ ಪೆಜೆಂಟ್, ಡಿಸ್ಯೆನರ್ ಷೋಗಳಿಗೆ ಅತ್ಯುತ್ತಮ ತರಬೇತಿ ನೀಡಿದ್ದಕ್ಕೆ ಮಂಗಳೂರು ಫ್ಯಾಷನ್ ಇಂಡಸ್ಟ್ರಿ ‘ಯುವ ಸಾಧಕರ ಪ್ರಶಸ್ತಿ’ ನೀಡಿ ಗೌರವಿಸಿದೆ.

ಬಾಲ್ಯದ ಬಯಕೆ
ಬಾಲ್ಯದಲ್ಲಿ ಸುಖಾ ಸುಮ್ಮನೆ ಆಯ್ದುಕೊಂಡ ಈ ಪ್ರವೃತ್ತಿ ಮುಂದೊಂದು ದಿನ ಅನ್ನ ನೀಡುವ ವೃತ್ತಿಯಾಗಬಹುದು ಎಂದು ಅವರು ಕನಸು, ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲವಂತೆ. ‘ರ್‍್ಯಾಂಪ್ ವಾಕ್‌ಗೆ ತರಬೇತಿ ನೀಡುವ ಜತೆಗೆ ಇಂಪಾದ ಹಿನ್ನೆಲೆ ಸಂಗೀತ ಹಾಗೂ ಆಕರ್ಷಕ ವಸ್ತ್ರ ವಿನ್ಯಾಸದ ಆಯ್ಕೆಯ ಅರಿವಿರಬೇಕು. ವೇದಿಕೆಯಲ್ಲಿ ರೂಪದರ್ಶಿಗಳು ತಮ್ಮನ್ನು ತಾವು ಹೇಗೆ ಬಿಂಬಿಸಿಕೊಳ್ಳಬೇಕು ಎನ್ನುವ ಸೂಕ್ಷ್ಮಗಳನ್ನು ಕೊರಿಯೋಗ್ರಾಫರ್ ಅರಿತಿರಬೇಕು. ವಿಭಿನ್ನ ವೀಕ್ಷಕರ ಅಭಿರುಚಿಗೆ ತಕ್ಕಂತೆ ಫ್ಯಾಷನ್ ಷೋ ರೂಪಿಸುವ ಜಾಣ್ಮೆ ಮೈಗೂಡಿಸಿಕೊಂಡಿರಬೇಕು. ಅಂದಾಗ ಮಾತ್ರ ಒಬ್ಬ ಕೋರಿಯೋಗ್ರಾಫರ್ ಯಶಸ್ವಿಯಾಗಲು ಸಾಧ್ಯ’ ಎನ್ನುತ್ತಾರೆ.

ಎಲ್ಲಿಯೂ ವೃತ್ತಿಪರವಾಗಿ ಫ್ಯಾಷನ್ ಷೋ ಕೊರಿಯೋಗ್ರಫಿ ತರಬೇತಿ ಪಡೆಯದ ದೀತ್, ಸ್ವಂತ ಆಸಕ್ತಿಯಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಪುಣೆಯಲ್ಲಿ ಬಿ.ಬಿ.ಎಂ. ಪದವಿ ಪಡೆದಿರುವ ಈಕೆ ಕಾಲೇಜು ದಿನಗಳಲ್ಲಿಯೇ ಕೆಲ ಷೋಗಳಲ್ಲಿ ಭಾಗವಹಿಸಿದ್ದರು. ಈ ಕ್ಷೇತ್ರಕ್ಕೆ ಪ್ರವೇಶ ಪಡೆದ ನಂತರ ವೃತ್ತಿಗೆ ಅನುಕೂಲವಾಗಲಿ ಎಂದು ಹೆಸರಾಂತ ನೃತ್ಯ ನಿರ್ದೇಶಕ ಶಾಮಕ್ ದಾವರ್ ತರಬೇತಿ ಸಂಸ್ಥೆಯಲ್ಲಿ ಬೆಲ್ಲಿ ಡಾನ್ಸ್ ಮತ್ತು ಸಾಲ್ಸಾ ನೃತ್ಯ ತರಬೇತಿ ಪಡೆದಿದ್ದಾರೆ.

ಬೆಂಗಳೂರಿನತ್ತ ಮುಖ
ಮುಂಬೈಯಲ್ಲಿ ಪೈಪೋಟಿ ಹೆಚ್ಚು. ಹೊಸಬರಿಗೆ ಅವಕಾಶ ಕಡಿಮೆ ಎನ್ನುವ ಯೋಚನೆಯಲ್ಲಿದ್ದ ದೀತ್ ಸೇಥಿ ಅವರಿಗೆ ಆಗ ಕಣ್ಣಿಗೆ ಬಿದ್ದದ್ದು ಬೆಂಗಳೂರು. ‘ದಕ್ಷಿಣದಲ್ಲಿ ಚೆನ್ನೈ, ಹೈದರಾಬಾದ್ ಹಾಗೂ ತಿರುವನಂತಪುರಕ್ಕೆ ಹೋಲಿಸಿದರೆ ಬೆಂಗಳೂರು ಎಲ್ಲದರಲ್ಲೂ ಉತ್ತಮ. ಹೀಗಾಗಿ ಅವಕಾಶ ಅರಸಿ ಬೆಂಗಳೂರಿನತ್ತ ಹೆಜ್ಜೆ ಹಾಕಿದೆ’ ಎನ್ನುತ್ತಾರೆ.

ದೀತ್ ಹೆಚ್ಚು ಕಡಿಮೆ ಈಗ ಬೆಂಗಳೂರಿನವರೇ ಆಗಿದ್ದಾರೆ. ಇಲ್ಲಿಯ ವಾತಾವರಣ, ಸಂಸ್ಕೃತಿಗೆ ಮಾರುಹೋಗಿ ಇಲ್ಲಿಯೇ ನೆಲೆ ನಿಲ್ಲುವ ನಿರ್ಧಾರ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಅವರಿಗೆ ಅವಕಾಶಗಳೂ ಹುಡುಕಿ ಬರುತ್ತಿವೆ. ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳಿಗಾಗಿ ಎದುರು ನೋಡುತ್ತಿರುವಾಗಲೇ ತುಳು ಚಿತ್ರವೊಂದರಲ್ಲಿ ನಟಿಸಲು ಆಹ್ವಾನ ಬಂದಿದೆ. ಫ್ಯಾಷನ್ ಷೋವೊಂದರ ಕೊರಿಯೋಗ್ರಫಿಗಾಗಿ ಮಂಗಳೂರಿಗೆ ಹೋದಾಗ ಈ ಅವಕಾಶ ದೊರೆತಿದ್ದು, ಚಿತ್ರಕ್ಕಾಗಿ ಈಗಾಗಲೇ ತುಳು ಕಲಿಯತೊಡಗಿದ್ದಾರೆ. ಮಂಗಳೂರು ಮೀನಿನ ಸವಿಯುಂಡ ಈ ಮರಾಠಿ ಚೆಲುವೆಗೆ ಕನ್ನಡ ಚಿತ್ರದಲ್ಲಿ ಅವಕಾಶ ಸಿಕ್ಕರೆ ನಟಿಸುವಾಸೆ ಇದೆ.

ಮಕ್ಕಳಿಗೂ ತರಬೇತಿ
ಮಕ್ಕಳಿಗೂ ರ್‍್ಯಾಂಪ್ ವಾಕ್ ಕಲಿಸುವ ಈ ಬೆಡಗಿ ತನ್ನ ಮನೆಯಲ್ಲೂ ತರಬೇತಿ ನೀಡುತ್ತಾರೆ. ‘ಮಕ್ಕಳಿಗೆ ರ್‍್ಯಾಂಪ್ ವಾಕ್ ಕಲಿಸಲು ತಾಳ್ಮೆ ಮುಖ್ಯ. ಮಕ್ಕಳು ಬಲು ಬೇಗ ಗ್ರಹಿಸುತ್ತಾರೆ. ಆದರೆ, ರ್‍್ಯಾಂಪ್‌ಗೆ ಬಂದಾಗ ಹಿಂಜರಿಯುತ್ತಾರೆ. ಅಂಥವರನ್ನು ಪಳಗಿಸಿ ಧೈರ್ಯ ತುಂಬುತ್ತೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಈಕೆ.”

ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ಗ್ಲ್ಯಾಮ್ ಇಂಡಿಯಾ ಮತ್ತು ಮಂಗಳೂರಿನಲ್ಲಿ ನಡೆಯಲಿರುವ ಮಕ್ಕಳ ಫ್ಯಾಷನ್ ಷೋ ಸ್ಪರ್ಧೆಗೆ ಸದ್ಯ ತರಬೇತಿ ನೀಡುತ್ತಿದ್ದಾರೆ. ತಾವು ಕೊರಿಯೋಗ್ರಫಿ ಮಾಡುವ ಕಾರ್ಯಕ್ರಮಗಳು ಚೆನ್ನಾಗಿ ಮೂಡಿ ಬರಲಿ ಎಂದು ತಮ್ಮದೇ ಮೇಕಪ್ ಮ್ಯಾನ್, ಫೋಟೊಗ್ರಾಫರ್‌ಗಳನ್ನು ಜತೆಗೆ ಕರೆದೊಯ್ಯುತ್ತಾರೆ.

ನೂತನ ಶ್ಯೆಲಿಯ ವೈವಿಧ್ಯಮಯ ವಸ್ತ್ರ ವಿನ್ಯಾಸದಲ್ಲಿ ಎತ್ತಿದ ಕೈ. ವಿವಿಧ ಬಗೆಯಲ್ಲಿ ಸೀರೆ ಉಡುವುದೆಂದರೂ ತುಂಬಾ ಇಷ್ಟ. ಅದನ್ನು ವೇದಿಕೆಯ ಮೇಲೆ ಪ್ರಯೋಗಕ್ಕೂ ಅಳವಡಿಸಿ ಯಶಸ್ವಿಯಾಗಿದ್ದಾರೆ. ಸದಾ ಹೊಸತನಕ್ಕಾಗಿ ಹಂಬಲಿಸುವ ದೀತ್‌ಗೆ ಮಹಾನಗರಗಳಲ್ಲಿ ನಡೆಯುವ ಹಾಗೂ ಸವಾಲು ಹಾಕಬಲ್ಲ ಅತ್ಯುತ್ತಮ ಷೋಗಳಿಗೆ ಕೋರಿಯೋಗ್ರಾಫಿ ಮಾಡುವ ಮಹದಾಸೆ ಇದೆ.

Write A Comment