ರಾಷ್ಟ್ರೀಯ

ಬೋಡೊ ಉಗ್ರರ ದಾಳಿ: 48 ಬಲಿ

Pinterest LinkedIn Tumblr

assam

ಹೊಸದಿಲ್ಲಿ: ಬೋಡೋಲ್ಯಾಂಡ್ ಬಂಡುಕೋರರು ಅಸ್ಸಾಂನ ಕೋಕ್ರಜಾರ್, ಸೋನಿಟ್‌ಪುರ್ ಜಿಲ್ಲೆಗಳಲ್ಲಿ ನಾಲ್ಕು ಪ್ರದೇಶಗಳಲ್ಲಿ ಮಂಗಳವಾರ ಸಂಜೆ ಗುಂಡಿನ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ 48 ಬುಡಕಟ್ಟು ವಾಸಿಗಳು ಬಲಿಯಾಗಿದ್ದಾರೆ. ದಾಳಿಯಲ್ಲಿ ಹಲವರು ಗಾಯಗೊಂಡಿದ್ದು ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಶಾಂತಿ ಮಾತುಕತೆ ವಿರೋಧಿಸಿದ್ದ ನ್ಯಾಷನಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್(ಎನ್‌ಡಿಎಫ್‌ಬಿ) ಉಗ್ರರು ಕೋಕ್ರಜಾರ್ ಜಿಲ್ಲೆಯ ಸರಳ್‌ಪಾರ ಗ್ರಾಮ, ಸೋನಿಟ್‌ಪುರ ಜಿಲ್ಲೆಯ ಶಾಂತಿಪುರ್ ಗ್ರಾಮದ ಮೇಲೆ ದಾಳಿ ಮಾಡಿದ್ದಾರೆ. ಸುಸಜ್ಜಿತ ಅಸ್ತ್ರಗಳನ್ನು ಹೊಂದಿದ್ದ ಈ ಉಗ್ರರು ಗುಂಡಿನ ಸುರಿಮಳೆ ಸುರಿಸಿ, ಬುಡಕಟ್ಟು ವಾಸಿಗಳನ್ನು ಮನಬಂದಂತೆ ಕೊಂದು, ರಕ್ತದ ಕೋಡಿ ಹರಿಸಿದರು.

ಭದ್ರತಾ ಪಡೆಗಳು ತಮ್ಮ ವಿರುದ್ಧ ನಡೆಸುತ್ತಿರುವ ವ್ಯಾಪಕ ಕಾರ್ಯಾಚರಣೆಗೆ ಉತ್ತರ ನೀಡುವ ಸಲುವಾಗಿ ಗ್ರಾಮಸ್ಥರ ಮೇಲೆ ಬಂಡುಕೋರರು ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಭೂತಾನ್ ಗಡಿಗೆ ಹೊಂದಿಕೊಂಡಿರುವ ಚಿರಾಂಗ್ ಜಿಲ್ಲೆಯಲ್ಲಿ ಅಸ್ಸಾಂನ ಪೊಲೀಸ್ ಕಮಾಂಡೋಗಳು ಮತ್ತು ಸೇನೆ ಭಾನುವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬ್ಬರು ಬೋಡೋ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಇದರಿಂದ ಉಗ್ರರು ಕೆರಳಿದ್ದಾರೆ ಎನ್ನಲಾಗಿದ್ದು, ಸೋಮವಾರವಷ್ಟೇ ಕೋಕ್ರಜಾರ್ ಜಿಲ್ಲೆಯ ಪಟಗಾಂವ್‌ನಲ್ಲಿ ಗ್ರೇನೇಡ್ ಸ್ಫೋಟ ಮತ್ತು ಗುಂಡಿನ ದಾಳಿಗಳನ್ನು ನಡೆಸಿದ್ದರು. ಇದರಿಂದಾಗಿ ಕೆಲವು ನಾಗರಿಕರು ಗಾಯಗೊಂಡಿದ್ದರು.

ಬೋಡೊ ಉಗ್ರರು ಅಸ್ಸಾಂನಲ್ಲಿ ಅಟ್ಟಹಾಸ ಮೆರೆಯುವುದು ಹೊಸತೇನಲ್ಲ. ತಮ್ಮ ಸಂಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಳೆಂದು ಚಿರಾಂಗ್ ಜಿಲ್ಲೆಯಲ್ಲಿ ಅಸ್ಸಾಂ ಯುವತಿಯೊಬ್ಬಳನ್ನು ಈ ಬಂಡುಕೋರರು ಹತ್ಯೆ ಮಾಡಿ, ಕಳೆದ ಆಗಸ್ಟ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದರು. ಮತ್ತಷ್ಟು ಜನರನ್ನು ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದರು.

ಸಕಲ ನೆರವು: ಕೇಂದ್ರ ಭರವಸೆ
ಬೋಡೊ ಬಂಡುಕೋರರ ದಾಳಿಯ ಬೆನ್ನಿಗೇ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಅಸ್ಸಾಂ ಮುಖ್ಯಮಂತ್ರಿ ತರುಣ್ ಗಗೋಯಿ ಅವರ ಜತೆ ಮಾತನಾಡಿ ಘಟನೆಯ ವಿವರ ಪಡೆದರು. ಉಗ್ರರನ್ನು ಮಟ್ಟಹಾಕುವಲ್ಲಿ ಕೇಂದ್ರವು ಸಕಲ ನೆರವು ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರಲ್ಲದೇ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುವಂತೆ ಕೋರಿಕೊಂಡರು ಎಂದು ಮೂಲಗಳು ಹೇಳಿವೆ. ಬುಧವಾರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಈ ಮಧ್ಯೆ ಪರಿಸ್ಥಿತಿ ನಿಯಂತ್ರಿಸಲು ಕೇಂದ್ರವು ಹೆಚ್ಚುವರಿ ಅರೆಸೇನಾ ಪಡೆಗಳನ್ನು ರವಾನಿಸಿಕೊಟ್ಟಿದೆ. ಅಸ್ಸಾಂನಾದ್ಯಂತ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

ಉಗ್ರರ ಯಾವುದೇ ಬೆದರಿಕೆಗೂ ನಮ್ಮ ಸರಕಾರ ಬೆದರುವುದಿಲ್ಲ . ಬೋಡೊ ಬಂಡುಕೋರರ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ
– ತರುಣ್ ಗೊಗೋಯಿ ಅಸ್ಸಾಂ ಮುಖ್ಯಮಂತ್ರಿ

ಹೇಡಿಗಳು ನಡೆಸಿದ ಬರ್ಬರ ಕೃತ್ಯ ಇದಾಗಿದ್ದು, ಎಂದಿಗೂ ಕ್ಷಮಿಸಲಾಗದು. ಇಂತಹ ದಾಳಿಯಿಂದ ಸರಕಾರ ಎದೆಗುಂದದು. ಬಂಡುಕೋರರನ್ನು ಮಟ್ಟಹಾಕಲು ಕೇಂದ್ರವು, ಅಸ್ಸಾಂ ಸರಕಾರದ ಪ್ರಯತ್ನಗಳಿಗೆ ನೆರವು ನೀಡಲಿದೆ.
– ನರೇಂದ್ರ ಮೋದಿ , ಪ್ರಧಾನಿ

Write A Comment