ಕರ್ನಾಟಕ

ರಾಜ್ಯದ ಬಹುತೇಕ ಕಡೆ ಮೋಡದ ಮುಸುಕು: ಚಳಿ ಇಳಿಮುಖ

Pinterest LinkedIn Tumblr

weather in UAE

ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮಳೆಯ ಮೋಡಗಳು ಮುಸುಕಿವೆ. ಹೀಗಾಗಿ ಚಳಿ ಕಡಿಮೆಯಾಗಿ ಒಂದು ರೀತಿಯ ಸೆಖೆಯ ಅನುಭವವಾಗುತ್ತಿದೆ. ‘ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳಿನಲ್ಲಿ ಚಳಿ ಹೆಚ್ಚಿರುತ್ತದೆ. ರಾತ್ರಿ ಅವಧಿ ಹೆಚ್ಚುತ್ತಾ ಚಳಿ ತೀವ್ರವಾಗಿರುತ್ತದೆ. ಆದರೆ, ಈ ಬಾರಿ ಮೋಡದ ವಾತಾವರಣವಿರುವುದರಿಂದ ಅಷ್ಟು ಪ್ರಮಾಣದಲ್ಲಿ ಚಳಿಯಿಲ್ಲ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ ತಿಳಿಸಿದರು.

‘ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗಿಂತಲೂ ಉತ್ತರ ಭಾರತದ ರಾಜ್ಯಗಳಲ್ಲಿ ಚಳಿ ಅಧಿಕ. ಈ ಬಾರಿ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಅಲೆಗಳಿಂದ ಕಳೆದೊಂದು ವಾರದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆ ಮುಂದುವರಿದಿದೆ. ಚಳಿಗಾಲ ಇದ್ದರೂ ಚಳಿ ಅನುಭವ ಇಲ್ಲವಾಗಿದೆ’ ಎಂದರು.

‘ಚಳಿಗಾಲದ ಅವಧಿ ಡಿಸೆಂಬರ್‌ನಿಂದ ಫೆಬ್ರುವರಿ ಅಂತ್ಯದವರೆಗೆ ಇದ್ದರೂ ಸಹ ದೇಶದೆಲ್ಲೆಡೆ ಡಿಸೆಂಬರ್‌ನಿಂದ ಜನವರಿ ಅಂತ್ಯದವರೆಗೆ ತೀವ್ರವಾದ ಚಳಿಗಾಲ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಕೆಲವೆಡೆ ತೀವ್ರವಾದ ಶೀತಗಾಳಿ ಇರುತ್ತದೆ. ಆದರೆ, ಈ ಬಾರಿ ಅಂತಹ ಚಳಿಯೇ ಕಾಣಿಸುತ್ತಿಲ್ಲ. ಮೋಡಕವಿದ ವಾತಾವರಣ ಮತ್ತು ಗರಿಷ್ಠ ಉಷ್ಣಾಂಶದಿಂದಾಗಿ ಮಧ್ಯಾಹ್ನದ ವೇಳೆ ಸೆಖೆ ಹೆಚ್ಚಿರುತ್ತಿದೆ’ ಎಂದರು.

‘ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿ, ಬೀದರ್, ವಿಜಯಪುರ, ಕಲಬುರ್ಗಿ, ರಾಯಚೂರು, ಬಳ್ಳಾರಿ ಸೇರಿದಂತೆ ಉತ್ತರ ಭಾಗದ ಜಿಲ್ಲೆಗಳಲ್ಲಿ ತೀವ್ರವಾದ ಚಳಿ ಇರುತ್ತದೆ. ಈ ಜಿಲ್ಲೆಗಳ ಸುತ್ತ ಸಮುದ್ರ ಇಲ್ಲ. ಇದರಿಂದ ಉತ್ತರ ಭಾಗದಿಂದ ನೇರವಾಗಿ ಗಾಳಿ ಬೀಸುತ್ತದೆ. ಕಳೆದ ವರ್ಷಗಳಲ್ಲಿ ಈ ಜಿಲ್ಲೆಗಳ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಇತ್ತು. ಬಹುತೇಕ ಜಿಲ್ಲೆಗಳಲ್ಲಿ ಶೀತಗಾಳಿ ಬೀಸುತ್ತಿತ್ತು. ಆದರೆ, ಈಗ ಪೂರ್ವದಿಂದಲೇ ಗಾಳಿ ಬೀಸುತ್ತಿರುವುದರಿಂದ ಅಂತಹ ವಾತಾವರಣ ಇಲ್ಲ’ ಎಂದರು.

ಈ ಅವಧಿಯಲ್ಲಿ ವಾಯುಭಾರ ಕುಸಿತದಿಂದ ಮೋಡ ಬಂದರೆ ಚಳಿಯ ಅನುಭವ ಆಗುವುದಿಲ್ಲ. ಈ ವರ್ಷ ಡಿಸೆಂಬರ್ ಎರಡನೇ ವಾರದಿಂದಲೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ರಾಜ್ಯದ ಎಲ್ಲಾ ಭಾಗಗಳಲ್ಲೂ ಮೋಡ ಮುಸುಕಿದ ವಾತಾವರಣವಿದೆ. ಜವರಿಯಿಂದಷ್ಟೇ ಚಳಿ ಅನುಭವ ಆಗುವ ಸಾಧ್ಯತೆ ಇದೆ.
– ಬಿ.ಪುಟ್ಟಣ್ಣ, ಹವಾಮಾನ ಇಲಾಖೆ ನಿರ್ದೇಶಕ

Write A Comment