ಕರ್ನಾಟಕ

ಕರ್ನಾಟಕ ಹೈಕೋರ್ಟ್‌ಗೆ ಐವರು ಹೊಸ ಜಡ್ಜ್ ನೇಮಕ

Pinterest LinkedIn Tumblr

high court1

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ಗೆ ಹೊಸದಾಗಿ ಐವರು ನ್ಯಾಯಮೂರ್ತಿಗಳು ನೇಮಕಗೊಂಡಿದ್ದಾರೆ.

ವಕೀಲರಾದ ಬಿ.ವೀರಪ್ಪ, ಸುಜಾತ, ಪವನ್‌ಕುಮಾರ್ ಬಿ.ಭಜಂತ್ರಿ, ಪಿ.ಎಸ್.ದಿನೇಶ್‌ಕುಮಾರ್ ಹಾಗೂ ನರೇಂದ್ರ ಅವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಪ್ರಸ್ತಾವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈಗಾಗಲೇ ಅಂಕಿತ ಹಾಕಿದ್ದಾರೆಂದು ಗೊತ್ತಾಗಿದೆ.

ಆ ನೇಮಕದ ಅಧಿಕೃತ ಆದೇಶಕ್ಕೆ ಇನ್ನೂ 2-3 ದಿನ ಬೇಕಾಗುತ್ತದೆ. ಕೇಂದ್ರ ಸರಕಾರ ಆಗಲೇ ನ್ಯಾಯಮೂರ್ತಿಗಳ ನೇಮಕದ ನಂತರ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ.

ಸದ್ಯ ಹೈಕೋರ್ಟ್‌ಗೆ ಚಳಿಗಾಲದ ರಜೆ ಇರುವ ಹಿನ್ನೆಲೆಯಲ್ಲಿ ಹಾಗೂ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರು ಸಮ್ಮೇಳನವೊಂದರಲ್ಲಿ ಭಾಗವಹಿಸಲು ದಿಲ್ಲಿಯಲ್ಲಿದ್ದಾರೆ. ಹೀಗಾಗಿ ಆ ಐವರು ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸುವುದು ಸ್ವಲ್ಪ ತಡವಾಗಲಿದೆ. ಈ ತಿಂಗಳ ಅಂತ್ಯದಲ್ಲಿ ಅಥವಾ ಹೊಸವರ್ಷದ ಎರಡನೇ ದಿನ ಅವರು ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಕಳೆದ ಆರು ವರ್ಷಗಳಿಂದ ಕರ್ನಾಟಕ ಹೈಕೋರ್ಟ್‌ಗೆ ವಕೀಲರ ವಲಯದಿಂದ ನ್ಯಾಯಮೂರ್ತಿಗಳ ನೇಮಕ ಆಗಿರಲಿಲ್ಲ. ವಕೀಲರ ವಲಯದಿಂದ ನ್ಯಾಯಮೂರ್ತಿಗಳ ಸ್ಥಾನಕ್ಕೆ ಹೆಸರುಗಳನ್ನು ಕೊಲಿಜಿಯಂ ಕಳುಹಿಸಿದ್ದರೂ, ನಾನಾ ಕಾರಣದಿಂದ ಅದು ಅಂತಿಮ ಘಟ್ಟ ತಲುಪಿರಲಿಲ್ಲ. ಹೊಸದಾಗಿ ನೇಮಕಗೊಂಡಿರುವವರಲ್ಲಿ ನಾಲ್ವರು ಹಾಲಿ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ವಿಶೇಷ.

ಜೊತೆಗೆ 62 ನ್ಯಾಯಮೂರ್ತಿಗಳ ಪೈಕಿ ಹಾಲಿ 30 ನ್ಯಾಯಮೂರ್ತಿಗಳು ಮಾತ್ರ ಕಾರ‌್ಯನಿರ್ವಹಿಸುತ್ತಿದ್ದಾರೆ. ಉಳಿದ 32 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇವೆ. ಇದೀಗ ಹೊಸದಾಗಿ ಐವರು ನ್ಯಾಯಮೂರ್ತಿಗಳ ನೇಮಕವಾದರೂ ಸಹ ಇನ್ನೂ 27 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇರುತ್ತವೆ.

Write A Comment