ಕರ್ನಾಟಕ

‘ವಿಮ್ಸ್’ ಸಿಬ್ಬಂದಿ ನಿರ್ಲಕ್ಷ್ಯ: ಮಗು ಅನಾಥ

Pinterest LinkedIn Tumblr

child

ಬಳ್ಳಾರಿ: ಆಸ್ಪತ್ರೆಗೆ ದಾಖಲಾದವರ ಸಂಪೂರ್ಣ ವಿವರವನ್ನು ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌) ಸಿಬ್ಬಂದಿ ಪಡೆದು­ಕೊಳ್ಳದ ಕಾರಣ ಹೆಣ್ಣು ಮಗು­ವೊಂದು ಅನಾಥವಾಗಿದೆ. ಈ ಮಗುವಿನ ತಂದೆಯ ಹುಡು­ಕಾಟ­ದಲ್ಲಿ ತೊಡಗಿರುವ ಪೊಲೀಸರ ತನಿಖೆಗೂ ಇದರಿಂದ ಅಡ್ಡಿಯಾಗಿದೆ.

ಹೆರಿಗೆಯಾದ ತಕ್ಷಣ ತಾಯಿ ಸಾವಿಗೀಡಾಗಿದ್ದರಿಂದ ಪಾಲಕ­ರಿಂ­ದಲೂ ದೂರವಾಗಿರುವ ಈ ಹೆಣ್ಣು­ಮಗು ಈಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆರೈಕೆ­ಯಲ್ಲಿದೆ. ಹೆರಿಗೆಗೆ ಮಹಿಳೆ­ಯನ್ನು ದಾಖಲು ಮಾಡಿ­ಕೊಳ್ಳುವ ಸಂದರ್ಭ­ದಲ್ಲಿ ಮಗುವಿನ ತಂದೆ ಅಥವಾ ಸಂಬಂ­ಧಿಕರ ವಿಳಾಸ ಮತ್ತು ವಿವರವನ್ನು ‘ವಿಮ್ಸ್‌’ ಸಿಬ್ಬಂದಿ ಪಡೆಯದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆರಿಗೆಗೆ ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕಾರಟಗಿ ಪಟ್ಟಣದ ಗೋವಿಂದಮ್ಮ ಎಂದಷ್ಟೇ ಕೇಸ್‌ ಶೀಟ್‌ನಲ್ಲಿ ನಮೂದಿಸಲಾಗಿದೆ. ‘ವಿಮ್ಸ್’ ಆಡಳಿತಕ್ಕೆ ಒಳಪಟ್ಟಿರುವ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗೋವಿಂದಮ್ಮ ಕಳೆದ ಅಕ್ಟೋಬರ್‌ 28ರಂದು ಮಗುವಿಗೆ ಜನ್ಮ ನೀಡಿದ ಎರಡು ದಿನಗಳ ನಂತರ ಮೃತಪಟ್ಟರು.

ಶವವನ್ನೂ ಸಂಬಂಧಿಕರಿಗೆ ಹಸ್ತಾಂತ­ರಿ­ಸಿ­­ದಾಗಲೂ ಶವ ಕೊಂಡೊಯ್ದವರ ವಿಳಾಸವನ್ನು ಸಿಬ್ಬಂದಿ ಪಡೆದಿಲ್ಲ. ಅವರು ಮಗುವನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ. ಪೂರ್ಣವಾಗಿ ಬೆಳೆಯದ ಈ ಮಗುವನ್ನು ಚಿಕಿತ್ಸೆ ಮತ್ತು ಆರೈಕೆಗಾಗಿ ‘ವಿಮ್ಸ್’ ಆಸ್ಪತ್ರೆಯ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿದೆ. ಪಾಲನೆಗಾಗಿ ಇಬ್ಬರು ದಾದಿಯರನ್ನು ನಿಯೋಜಿಸಲಾಗಿದೆ.

‘ತಾಯಿ ತೀರಿ ಹೋದ ನಂತರ ಸಂಬಂಧಿಕರು ಹೆಣ್ಣುಮಗುವನ್ನು ತಿರಸ್ಕ­ರಿಸಿ ಹೋಗಿರುವುದರಿಂದ ‘ವಿಮ್ಸ್’ ಅಧೀಕ್ಷಕರು ಮಗುವನ್ನು ರಕ್ಷಣಾ ಘಟ­ಕಕ್ಕೆ ಒಪ್ಪಿಸಿ, ಕೌಲ್‌ಬಜಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ, ಪಾಲಕ­ರನ್ನು ಹುಡುಕುವಂತೆ ಕೋರಿ­ದ್ದಾರೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಮ್ಮದ್‌ ಸರ್ವರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕಾರಟಗಿ ಪೊಲೀಸರನ್ನು ಸಂಪರ್ಕಿಸಿ, ನಮ್ಮ ಸಿಬ್ಬಂದಿಯನ್ನೂ ಕಳುಹಿಸಿ ಪಾಲಕರಿಗಾಗಿ ಶೋಧ ನಡೆಸಲಾಗಿದೆ. ಗರ್ಭಿಣಿಯಾಗಿದ್ದ ಗೋವಿಂದಮ್ಮ ಎಂಬು­ವವರು ಹೆರಿಗೆ ನಂತರ ಮೃತ­ಪಟ್ಟಿ­ರುವ ವಿಷಯ ತಿಳಿಸಿ ಊರೆಲ್ಲ ಅಲೆದಾಡಿದರೂ ಅವರ ಪತ್ತೆಯಾಗಿಲ್ಲ. ‘ವಿಮ್ಸ್’ ಆಸ್ಪತ್ರೆಯ ಸಿಬ್ಬಂದಿ ಸಮರ್ಪಕವಾಗಿ ಮಾಹಿತಿ ಸಂಗ್ರಹಿಸದ ಕಾರಣ ಈ ಸಮಸ್ಯೆ ಉಂಟಾಗಿದೆ’ ಎಂದು ನಗರ ಡಿವೈಎಸ್‌ಪಿ  ಟಿ.ಎಸ್‌. ಮುರುಗಣ್ಣವರ್‌, ಕೌಲ್‌ಬಜಾರ್‌ ಠಾಣೆ ಇನ್‌ಸ್ಪೆಕ್ಟರ್‌ ಎಂ.ಬಿ. ಗೊಳಸಂಗಿ ಹೇಳುತ್ತಾರೆ.

‘ದೇವದಾಸಿಯರು, ಮದುವೆ­ಯಾ­ಗದ ಯುವತಿಯರು ಗರ್ಭಿಣಿ­ಯರಾಗಿ ಹೆರಿಗೆಗೆ ಆಸ್ಪತ್ರೆಗೆ ದಾಖಲಾ­ಗುತ್ತಾರೆ. ಕೆಲವರು ಗಂಡ ಅಥವಾ ಸಂಬಂಧಿಕರ ಹೆಸರು ಬಹಿರಂಗಪಡಿಸಲು ಇಚ್ಛಿಸ­ದಿ­ದ್ದರೆ ಒತ್ತಾಯ ಮಾಡಲು ಆಗುವು­ದಿಲ್ಲ. ಹೆರಿಗೆ ನೋವು ಅನುಭವಿಸುವ­ವ­ರಿಗೆ ಚಿಕಿತ್ಸೆ ಕೊಟ್ಟು ಹೆರಿಗೆ ಮಾಡಿಸು­ವುದು ಮುಖ್ಯ. ಹೀಗಾಗಿ ಸಿಬ್ಬಂದಿ ಸಂಪೂರ್ಣ ಮಾಹಿತಿ ಸಂಗ್ರಹಿಸಿಲ್ಲ’ ಎಂದು ‘ವಿಮ್ಸ್’ ಅಧೀಕ್ಷಕ ಡಾ.ಶ್ರೀನಿವಾಸುಲು ತಿಳಿಸಿದ್ದಾರೆ.

Write A Comment