ಕರ್ನಾಟಕ

ಬೆಳಗಾವಿ ವಿಟಿಯು ಆವರಣದಲ್ಲಿ ಹುಲಿ ಪ್ರತ್ಯಕ್ಷ: ಆತಂಕ

Pinterest LinkedIn Tumblr

tiger

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಹುಲಿಯೊಂದು  ಪ್ರತ್ಯಕ್ಷವಾಗಿದ್ದು, ಆತಂಕ ಮೂಡಿಸಿದೆ. ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿವರೆಗೆ ಕಾರ್ಯಾಚರಣೆ ನಡೆಸಿದರೂ ಪ್ರಯೋಜವಾಗಲಿಲ್ಲ. ಬೆಳಿಗ್ಗೆ 6.30ರ ಸುಮಾರಿಗೆ ಪ್ರವೇಶದ್ವಾರದ ಮೂಲಕ ಹುಲಿ ವಿಟಿಯು ಆವರಣ ಪ್ರವೇಶಿಸಿದೆ.

ವಾಯುವಿಹಾರಕ್ಕೆ ಹೋಗುತ್ತಿದ್ದ ಎಂಸಿಎ 2ನೇ ವರ್ಷದ ವಿದ್ಯಾರ್ಥಿ ಶಿವರಾಜ ಅಡಿವೆಪ್ಪ ಹೂಗಾರ ಅವರಿಗೆ ಹುಲಿ ಕಾಣಿಸಿದೆ. ಆತಂಕಗೊಂಡ ಅವರು ವಸತಿನಿಲಯಕ್ಕೆ ಓಡಿ ಹೋಗಿ, ದೈಹಿಕ ಶಿಕ್ಷಣ ನಿರ್ದೇಶಕರಿಗೆ ಈ ವಿಷಯ ತಿಳಿಸಿದರು. ನಂತರ ದೈಹಿಕ ಶಿಕ್ಷಣ ನಿರ್ದೇಶಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ವಿಶ್ವವಿದ್ಯಾಲಯದ ಟೆನಿಸ್‌ ಕೋರ್ಟ್‌ ಬಳಿ ಹುಲಿಯ ಹೆಜ್ಜೆ ಗುರುತುಗಳು ಕಂಡುಬಂದಿವೆ. ಇದರ ಆಧಾರದ ಮೇಲೆ ಬೆಳಗಾವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಿಕವಾಡಿ, ವನ್ಯಜೀವಿ ತಜ್ಞ ಸಂಜಯ ಗುಬ್ಬಿ ಹಾಗೂ ಡಾ. ಎಚ್‌.ಎಸ್‌.ಪ್ರಯಾಗ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಬಂದೂಕು, ಅರಿವಳಿಕೆ ಚುಚ್ಚುಮದ್ದು, ಬಲೆ, ದೊಡ್ಡ ಬ್ಯಾಟರಿ ಹಿಡಿದು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಲಾಯಿತು.

ಪೊಲೀಸ್ ಇಲಾಖೆ ನಿರ್ಲಕ್ಷ್ಯ: ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪೊಲೀಸ್‌ ಇಲಾಖೆ ನಿರ್ಲಕ್ಷ್ಯ ಎದ್ದು ಕಂಡಿತು. ಮೂರ್‍ನಾಲ್ಕು ಕಾನ್‌­ಸ್ಟೆಬಲ್‌ಗಳನ್ನು ಹೊರತುಪಡಿಸಿದರೆ, ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯಲಿಲ್ಲ. ಹೆಚ್ಚು ಪೊಲೀಸರನ್ನು ನಿಯೋಜಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಡಿಸಿಪಿ ಅನುಪಮ್‌ ಅಗರವಾಲ್‌ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಸಂಜೆ 6ಕ್ಕೆ ಅಲ್ಲಿಗೆ ಬಂದ ಅನುಪಮ್‌ ಅಗರವಾಲ್‌ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ಸಂಜೆ 7ಕ್ಕೆ ಅಲ್ಲಿಗೆ ಬಂದ ಜಿಲ್ಲಾಧಿಕಾರಿ ಎನ್‌.ಜಯರಾಂ ಪರಿಶೀಲಿಸಿದರು.

‘ಹುಲಿ ಹಿಡಿಯಲು ಬೋನು ಇಡ­ಲಾಗಿದೆ. ಅದನ್ನು ಹಿಡಿಯುವವರೆಗೆ ಹಗಲು–ರಾತ್ರಿ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಶಿವಾನಂದ ನಾಯಿಕವಾಡಿ ತಿಳಿಸಿದರು. ಹುಲಿಯು ತೀರ್ಥಕುಂಡೆ ಗ್ರಾಮದ ಅರಣ್ಯ ಪ್ರದೇಶದಿಂದ ಬಂದಿದೆ ಎಂದು ಕೆಲವರು ಹೇಳಿದರೆ, ಕಿಣಯೆ ಹಾಗೂ ಖಾನಾಪುರ ಅರಣ್ಯದ ಕಡೆಯಿಂದ ಬಂದಿರಬಹುದು ಎಂದು ಕೆಲವರು ಅಂದಾಜಿಸಿದ್ದಾರೆ. ಭಾನುವಾರ ತೀರ್ಥಕುಂಡೆ ಗ್ರಾಮದಲ್ಲಿ ಹಸು­ವೊಂದನ್ನು ಹುಲಿಕೊಂದು ಹಾಕಿತ್ತು.ಅದೇ ಹುಲಿ ಇಲ್ಲಿಗೆ ಬಂದಿರಬಹುದು ಎಂದು ಅರಣ್ಯ ಸಿಬ್ಬಂದಿ ಊಹಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ವಿಟಿಯು ಆವರಣದಲ್ಲೇ ಬೀಡು ಬಿಟ್ಟಿದ್ದಾರೆ. ವಿಟಿಯು ಆವರಣದ ತುಂಬೆಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೋಧ ನಡೆಸಿದರು. ಆದರೆ, ಹುಲಿ ಕಂಡುಬಂದಿಲ್ಲ. ಸಮೀಪದಲ್ಲೇ ಇರುವ ಅರಣ್ಯದ ಕಡೆಗೆ ಹುಲಿ ಹೋಗಿರಬಹುದು ಎಂದು ಹೇಳಲಾಗಿದೆ.

Write A Comment