ಕರ್ನಾಟಕ

ಧಾರ್ಮಿಕ ವಿಧೇಯಕ ಮಂಡನೆ ಕುರಿತು ಸರಕಾರ ಸ್ಪಷ್ಟೋಕ್ತಿ: ಮಠಗಳ ಸ್ವಾಧೀನ ಉದ್ದೇಶವಿಲ್ಲ: ಸಿದ್ದರಾಮಯ್ಯ

Pinterest LinkedIn Tumblr

siddu

ಬೆಂಗಳೂರು: ಹಿಂದೂ ಧಾರ್ಮಿಕ ಪರಂಪರೆಯ ಮಠಮಾನ್ಯಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಅಂತಹ ಉದ್ದೇಶವೂ ಇಲ್ಲ ಎಂದು ರಾಜ್ಯ ಸರಕಾರ ಹೇಳಿದೆ.

ಮಠಗಳ ನಿರ್ವಹಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ವಿಧೇಯಕ ಮಂಡಿಸಲಾಗಿದೆ. ಆದರೆ, ಇದು ಮಠಮಾನ್ಯಗಳ ಸ್ವಾಯತ್ತತೆಗೆ ಭಂಗ ತರುವಂತಹುದಲ್ಲ. ನಿಯಂತ್ರಣ ಸಾಧಿಸುವಂಥದ್ದೂ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ.ಬಿ. ಜಯಚಂದ್ರ ಪ್ರತ್ಯೇಕ ಹೇಳಿಕೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಅಧಿವೇಶನದ ಕೊನೆಯ ದಿನ ಮಂಡಿಸಿದ್ದ ‘ಕರ್ನಾಟಕ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2014’ ವಿವಾದಕ್ಕೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಮಾರಂಭವೊಂದರ ಬಳಿಕ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಿದ್ದರಾಮಯ್ಯ, ”ಸುಪ್ರೀಂಕೋರ್ಟ್ ಆದೇಶದಂತೆ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ. ಮಠಮಾನ್ಯಗಳ ಸ್ವಾಧೀನ ಅಥವಾ ಆಡಳಿತದಲ್ಲಿ ಮೂಗು ತೂರಿಸುವ ಉದ್ದೇಶವಿಲ್ಲ,” ಎಂದು ಹೇಳಿದರು.

ವಿಧಾನಸೌಧದ ಕಚೇರಿಯಲ್ಲಿ ವಿವರವಾದ ಸ್ಪಷ್ಟೀಕರಣ ನೀಡಿದ ಕಾನೂನು ಸಚಿವ ಜಯಚಂದ್ರ, ”ವಿಧೇಯಕ ಮಂಡನೆಯಷ್ಟೆ ಆಗಿದ್ದು, ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಳ್ಳಬೇಕಿದೆ. ಈ ವಿಚಾರದಲ್ಲಿ ಯಾರೂ ಆತಂಕಗೊಳ್ಳಬೇಕಿಲ್ಲ. ಮಠಗಳ ನಿರ್ವಹಣೆ ಕುರಿತ ಪ್ರಕರಣವೊಂದು ಸುಪ್ರೀಂ ಕೋರ್ಟ್‌ನಲ್ಲಿದ್ದು, ಜನವರಿ 13ರಂದು ವಿಚಾರಣೆಗೆ ಬರಲಿದೆ. ಈ ಬಗ್ಗೆ ರಾಜ್ಯ ಸರಕಾರ ಕೈಗೊಂಡ ಕ್ರಮದ ಬಗ್ಗೆ ತಿಳಿಸಲು ತಿದ್ದುಪಡಿ ವಿಧೇಯಕ ರೂಪಿಸಲಾಗಿದೆ. ಈ ಸಂಬಂಧ ಯಾವುದೇ ಕಾನೂನು ಇಲ್ಲ. ಸರಕಾರ ಏನನ್ನೂ ಮಾಡಿಲ್ಲವೆಂದಾಗಬಾರದು ಎಂಬ ಕಾರಣದಿಂದ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ,” ಎಂದರು.

”ಮಠಗಳ ಆಡಳಿತ ವ್ಯವಸ್ಥೆಯಲ್ಲಿನ ಗೊಂದಲ ಬಗೆಹರಿಸುವುದು ಮತ್ತು ಆಸ್ತಿ ರಕ್ಷಣೆ ವಿಚಾರದಲ್ಲಿ ಸರಕಾರದ ನಿಲುವೇನು ಎಂದು ಸುಪ್ರೀಂ ಕೋರ್ಟ್ ಪದೇಪದೆ ಕೇಳಿದೆ. ಹೀಗಾಗಿ ಭಕ್ತರು ಕಾಣಿಕೆ ನೀಡಿ ಬೆಳೆಸಿದ ಮಠಗಳ ನೂರಾರು ಕೋಟಿ ರೂ. ಆಸ್ತಿ ಪರಭಾರೆಯಾಗುವ ಅಥವಾ ದುರ್ಬಳಕೆಯಾಗುವ ಸನ್ನಿವೇಶ ಬಂದಾಗ ಅದನ್ನು ಉಳಿಸಲು ಸರಕಾರ ಕಾಳಜಿ ವಹಿಸುವುದು ಈ ವಿಧೇಯಕದಲ್ಲಿನ ಅಂಶವಾಗಿದೆ,” ಎಂದರು.

”ಮಠಗಳ ಆಸ್ತಿ ರಕ್ಷಣೆ ಇನ್ನಿತರ ವಿಚಾರದಲ್ಲಿ ಮುತುವರ್ಜಿ ವಹಿಸುವಂತೆ ಮಠಾಧಿಪತಿಗಳು ಸ್ವಇಚ್ಛೆಯಿಂದ ಕೇಳಿಕೊಂಡಾಗ ಅಥವಾ ಸಂಬಂಧಿಸಿದವರು ದೂರು ನೀಡಿದಾಗ ಈ ನಿಟ್ಟಿನಲ್ಲಿ ಸರಕಾರ ಮುಂದುವರಿಯುತ್ತದೆ. ಇದಕ್ಕೆ ಮುನ್ನ 100 ಬಾರಿ ಪರಾಮರ್ಶೆ ನಡೆಸುತ್ತದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಂದ ವರದಿಯನ್ನೂ ತರಿಸಿಕೊಳ್ಳುತ್ತದೆ,” ಎಂದು ವಿಧೇಯಕದಲ್ಲಿನ ಅಂಶಗಳ ಬಗ್ಗೆ ವಿವರಣೆ ನೀಡಿದರು.

ಹೋರಾಟ ಬೇಡ
”ಮಠಮಾನ್ಯಗಳು ಹಾಗೂ ಮಠಾಧಿಪತಿಗಳ ಬಗ್ಗೆ ಗೌರವವಿದೆ. ಹೀಗಾಗಿ ಯಾರೂ ಬೀದಿಗಿಳಿದು ಹೋರಾಡಬಾರದು. ತಪ್ಪು ಅಭಿಪ್ರಾಯಕ್ಕೆ ಒಳಗಾಗಬಾರದು. ಗೊಂದಲವಿದ್ದರೆ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಮುಕ್ತ ಚರ್ಚೆಗೂ ಅವಕಾಶವಿದೆ,” ಎಂದು ಮನವಿ ಮಾಡಿಕೊಂಡರು.

ಕ್ರೈಸ್ತ, ಇಸ್ಲಾಂ ಸಮುದಾಯಕ್ಕೆ ಸೇರಿದ ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳಲ್ಲಿನ ಗೊಂದಲ ಇತ್ಯರ್ಥಕ್ಕೂ ಇಂತಹ ವಿಧೇಯಕ ತರುತ್ತೀರಾ ಎಂದು ಕೇಳಿದಾಗ, ಸಚಿವರು ಖಚಿತವಾಗಿ ಏನನ್ನೂ ಹೇಳಲಿಲ್ಲ. ವಕ್ಫ್ ಬೋರ್ಡ್ ಹಗರಣದ ವಿಚಾರವಾಗಿ ಗಮನ ಸೆಳೆದಾಗಲೂ, ಸಂಬಂಧಿಸಿದ ಸಚಿವರನ್ನು ಕೇಳಬೇಕು ಎಂದರು.

ಇದು ಮೈತ್ರಿ ಸರಕಾರದ ಕೂಸು

”ಸೋಸಲೆ ಮಠ ಮತ್ತು ಕೂಡಲಿ ಶೃಂಗೇರಿ ಮಠದ ಆಡಳಿತದಲ್ಲಿ ವ್ಯತ್ಯಾಸವಾದಾಗ ಅಲ್ಲಿನ ಆಸ್ತಿ ರಕ್ಷಣೆಗೆ ಸರಕಾರ ಮಧ್ಯಪ್ರವೇಶಿಸುವಂತೆ ಮಠಗಳಿಗೆ ಸಂಬಂಧಪಟ್ಟವರೇ ಕೇಳಿಕೊಂಡಿದ್ದರು. ಆದರೆ, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಹೀಗಾಗಿ ಇಂಥದೊಂದು ಕಾನೂನಿನ ಅವಶ್ಯಕತೆ ಇರುವುದಾಗಿ ಅಂದಿನ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಇದರಲ್ಲಿ ಬೌದ್ಧ, ಜೈನ, ಸಿಖ್ ಧಾರ್ಮಿಕ ಸಂಸ್ಥೆಗಳಿಗೂ ಅನ್ವಯವಾಗುವ ಕಾನೂನು ಇರಬೇಕೆಂದು ಕೇಳಿಕೊಂಡಿತ್ತು. ಹೀಗಾಗಿ ಇದು ಮೈತ್ರಿ ಸರಕಾರದ ಕೂಸಾಗಿದೆ,” ಎಂದು ಜಯಚಂದ್ರ ಹೇಳಿದರು.

ಸುಪ್ರೀಂ ಕೋರ್ಟ್ ನಿರ್ದೇಶನ ಕಾರಣ

”ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರ ಕೊಟ್ಟಿದ್ದ ಪ್ರಮಾಣಪತ್ರದ ಹಿನ್ನೆಲೆಯಲ್ಲಿ ಕಾನೂನು ತರುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ಕೊಟ್ಟಿದೆ. ಅದರ ಅನುಸಾರ ಹಿಂದಿನ ವಿಧೇಯಕಕ್ಕೆ ತಿದ್ದುಪಡಿ ತಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗಿದೆ. ಅಲ್ಲದೇ, ಮೈತ್ರಿ ಸರಕಾರದ ಅವಧಿಯಲ್ಲೇ ನ್ಯಾಯಮೂರ್ತಿ ರಾಮಾ ಜೋಯಿಸ್ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲೂ ಅಗತ್ಯ ಕಾಯಿದೆ ರೂಪಿಸುವಂತೆ ಶಿಫಾರಸು ಮಾಡಲಾಗಿದೆ,” ಎಂದು ಸಚಿವ ಜಯಚಂದ್ರ ಹೇಳಿದರು.
—–

ಸುಪ್ರೀಂಕೋರ್ಟ್ ಆದೇಶದ ಅನ್ವಯ ಈ ವಿಧೇಯಕ ಮಂಡಿಸಲಾಗಿದೆ. ಮಠಮಾನ್ಯಗಳ ಸ್ವಾಧೀನ ಅಥವಾ ಆಡಳಿತದಲ್ಲಿ ಮೂಗು ತೂರಿಸುವ ಉದ್ದೇಶ ಸರಕಾರಕ್ಕೆ ಇಲ್ಲ. ಸುಪ್ರೀಂಕೋರ್ಟ್ ಸೂಚನೆಯಂತೆ ಸ್ವಲ್ಪ ಮಟ್ಟಿನ ನಿಯಂತ್ರಣ ಸಾಧಿಸಲು ವಿಧೇಯಕ ತರಲಾಗುತ್ತಿದ್ದು, ಇದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸಬೇಕಿಲ್ಲ.
* ಸಿದ್ದರಾಮಯ್ಯ ಸಿಎಂ

ಮಠಗಳ ನಿಯಂತ್ರಣ ವಿಧೇಯಕವನ್ನು ತಕ್ಷಣ ಕೈಬಿಟ್ಟು ಮಠಮಾನ್ಯಗಳ ಪರಂಪರೆ ಉಳಿಸುವ ಪ್ರಯತ್ನ ಮಾಡಬೇಕು.
* ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಜಗದ್ಗುರು

ಮಠಗಳಿಗೆ ಆಡಳಿತಾಧಿಕಾರಿ ನೇಮಿಸುವ ವಿಧೇಯಕ ಹಾಗೂ ಗೋಹತ್ಯೆ ನಿಷೇಧ ಕಾಯಿದೆ ಹಿಂಪಡೆಯುವುದನ್ನು ರಾಜ್ಯ ಸರಕಾರ ಕೈಬಿಡಬೇಕು. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಈಡೇರಿಸುವ ಬದಲು ಮಠಗಳ ಮೇಲೆ ನಿಯಂತ್ರಣ ಸಾಧಿಸುವ ವಿಧೇಯಕವನ್ನು ಮಂಡಿಸಿದ್ದಾರೆ. ಈ ವೇಳೆಯಲ್ಲಿ ಇಂಥ ವಿಧೇಯಕ ಮಂಡಿಸುವ ಅಗತ್ಯವಾದರೂ ಏನಿತ್ತು?
* ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

ಧಾರ್ಮಿಕ ಮಠ ಮಾನ್ಯಗಳ ಕುರಿತಂತೆ ಹೊಸ ವಿಧೇಯಕ ಸಮರ್ಥನೀಯ. ಮಠ ಮಂದಿರಗಳಲ್ಲಿ ವ್ಯತ್ಯಾಸಗಳಾದರೆ ಸರಕಾರ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಿ ವಾಪಸ್ ಆಡಳಿತ ಮಂಡಳಿಗೆ ನೀಡಲಿದೆ. ಕಾಯಂ ಆಗಿ ಸರಕಾರ ವಶಕ್ಕೆ ಪಡೆಯುವುದಿಲ್ಲ.
* ಬಿ. ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ

Write A Comment