ಕರ್ನಾಟಕ

ಪತಿಯಿಂದ 17 ಬಾರಿ ಇರಿತಕ್ಕೊಳಗಾದರೂ ಪ್ರಾಣ ಉಳಿಸಿಕೊಂಡ ಪತ್ನಿ

Pinterest LinkedIn Tumblr

knife-attack

ಕೊಯಮತ್ತೂರು: ಆಯುಷ್ಯ ಗಟ್ಟಿಯಿದ್ದರೆ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಪತಿಯಿಂದ 17 ಬಾರಿ ಇರಿತಕ್ಕೊಳಗಾದರೂ ಪ್ರಾಣ ಉಳಿಸಿಕೊಂಡ ಪತ್ನಿಯೇ ಸಾಕ್ಷಿ.

ಇಲ್ಲಿನ ಸೆಲ್ವಾಪುರಂನ ಎಲ್‌ಐಸಿ ಕಾಲನಿಯ ಸಮೀಪದ 39 ವರ್ಷದ ಖತೀಜಾ ಎಂಬ ಮಹಿಳೆಯೇ ಈ ಅದೃಷ್ಟವಂತೆ.

ಮೊದಲ ಪತಿಯ ಮರಣದ ನಂತರ 32 ವರ್ಷದ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದರು. ಐದು ವರ್ಷಗಳ ಹಿಂದಿನ ಕತೆ. ಆದರೆ ಬುಧವಾರ ರಾತ್ರಿ ಅವರಿಬ್ಬರ ನಡುವೆ ಗಲಾಟೆ ನಡೆದಿದೆ. ಪತಿ ಏಕಾಏಕಿ ರೊಚ್ಚಿಗೆದ್ದು ಪತ್ನಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಅದೃಷ್ಟವಶಾತ್‌ ಆಕೆ ಬದುಕುಳಿದಿದ್ದು, ಕೊಯಮತ್ತೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚೇತರಿಸಿಕೊಳುತ್ತಿದ್ದಾಳೆ.

ಹತ್ಯೆ ಯತ್ನ ದಾಖಲು:

ಖತೀಜಾಳ ಕತ್ತು ಹಾಗೂ ಕೈಗಳ ಮೇಲೆ 17 ಕಡೆ ಇರಿತದ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ವೈದ್ಯರು 24 ಹೊಲಿಗೆಗಳನ್ನೂ ಹಾಕಿದ್ಧಾರೆ. ಇದೀಗ ಆಕೆಯ ಪತಿ ಎಸ್‌.ಶಕ್ತಿದಾಸ್ ಎಂಬಾತನ ಮೇಲೆ ಪೊಲೀಸರು ಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೃತ್ತಿಯಲ್ಲಿ ಪೈಂಟರ್‌ ಆಗಿರುವ ಶಕ್ತಿದಾಸ್, ಮೂರು ಮಕ್ಕಳ ಖತೀಜಾಳನ್ನು ಐದು ವರ್ಷದ ಹಿಂದೆ ವಿವಾಹವಾಗಿದ್ದ. ಆಕೆ ಹೂವಿನ ವ್ಯಾಪಾರ ಮಾಡಿ ಹಣ ಸಂಪಾದಿಸುತ್ತಿದ್ದಳು. ಇಬ್ಬರೂ ಮದ್ಯವ್ಯಸನಿಗಳಾಗಿದ್ದು ಆಗಾಗ ಜಗಳವಾಡುತ್ತಿದ್ದರು. ಈ ಹಿಂದೆಯೂ ಖತೀಜಾ ತನ್ನ ಪತಿಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೌರ್ಜನ್ಯದ ಮೂರು ಪ್ರಕರಣಗಳು ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ದಾಖಲಾಗಿದೆ.

ಕುಡಿದು ಗಲಾಟೆ:

ಬುಧವಾರ ರಾತ್ರಿ ಎಂದಿನಂತೆ ಕಂಠಪೂರ್ತಿ ಕುಡಿದು ಮನೆಗೆ ಮರಳಿದ್ದ ಶಕ್ತಿದಾಸ್‌, ಪತ್ನಿ ಖತೀಜಾ ಜತೆಗೆ ಜಗಳಕ್ಕೆ ಬಿದ್ದಿದ್ದ. ತನ್ನ ವಿರುದ್ಧದ ಕೇಸುಗಳನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದ. ಆದರೆ ಆಕೆ ತಿರಸ್ಕರಿಸಿದಳು. ಇದರಿಂದ ಕೋಪಗೊಂಡ ಆತ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ. ಆಗ ಪತ್ನಿ ಕೂಗಿಕೊಂಡಿದ್ದು, ಅಕ್ಕಪಕ್ಕದ ಮನೆಯವರು ಧಾವಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿದರು. ಅಷ್ಟರಲ್ಲಿ ಪತಿ ಶಕ್ತಿದಾಸ್‌ ಅಲ್ಲಿದ್ದ ಕಾಲು ಕಿತ್ತಿದ್ದ.

ಪೊಲೀಸ್ ಇನ್‌ಸ್ಪೆಕ್ಟರ್‌ ಎನ್ ರವಿಕುಮಾರ್ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖತೀಜಾಳನ್ನೂ ಭೇಟಿಯಾಗಿದ್ದಾರೆ. ಆಕೆ ದೂರಿನ ಆಧಾರದಲ್ಲಿ ಪತ್ನಿಯ ಕೊಲೆ ಪ್ರಯತ್ನದ ಸಂಬಂಧ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ಶಕ್ತಿದಾಸ್‌ ಪತ್ತೆ ಹಾಗೂ ಬಂಧನಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿದೆ.

Write A Comment