ಕರ್ನಾಟಕ

ಬೆಂಗಳೂರಲ್ಲಿ ರೌಡಿ ಸೇರಿ ಇಬ್ಬರ ಭೀಕರ ಕೊಲೆ

Pinterest LinkedIn Tumblr

1

ಬೆಂಗಳೂರು,ಡಿ.17: ನಗರದಲ್ಲಿ ಕಳೆದ ರಾತ್ರಿ ರೌಡಿ ಸೇರಿದಂತೆ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಮತ್ತೊಬ್ಬ ರೌಡಿಯ ಕೊಲೆಯತ್ನ ನಡೆದಿದೆ.

ಯಶವಂತಪುರ: ಸ್ನೇಹಿತರ ಕರೆ ಮೇರೆಗೆ ಮನೆಯಿಂದ ಹೊರ ಹೋದ ರೌಡಿಯನ್ನು ದುಷ್ಕರ್ಮಿಗಳು ಬರ್ಭರವಾಗಿ ಕೊಲೆ ಮಾಡಿದ್ದಾರೆ. ಮೋಹನ್‌ಕುಮಾರ್ ನಗರದ ನಿವಾಸಿ ರವಿ(25) ಕೊಲೆಯಾದವ. ರಾತ್ರಿ ಈತ ಮನೆಯಲ್ಲಿದ್ದಾಗ 8.30ರಲ್ಲಿ ದೂರವಾಣಿ ಕರೆಯೊಂದು ಬಂದಿದ್ದು, ಆ ವೇಳೆ ಹೊರ ಹೋದ ರವಿಯನ್ನು ದುಷ್ಕರ್ಮಿಗಳು ಚಾಕುವಿನಿಂದ ಬೆನ್ನು ಹಾಗೂ ಪಕ್ಕೆಗೆ ಬಲವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಎಷ್ಟು ಹೊತ್ತು ಕಳೆದರೂ ರವಿ ಮನೆಗೆ ಬಾರದಿದ್ದಾಗ ಪೋಷಕರು ಕೆಲಸದ ನಿಮಿತ್ತ ಹೋಗಿರಬಹುದೆಂದು ಸುಮ್ಮನಾಗಿದ್ದಾರೆ. ಬೆಳಗ್ಗೆ ಯಶವಂತಪುರ ರೈಲ್ವೆ ನಿಲ್ದಾಣ ಸಮೀಪದ ರೈಲ್ವೆ ಆಸ್ಪತ್ರೆ ಹಿಂಭಾಗ ಯುವಕನ ಶವ ಕಂಡ ಸ್ಥಳೀಯರು ತಕ್ಷಣ ಯಶವಂತಪುರ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿದಾಗ ಈತ ರೌಡಿಶೀಟರ್ ರವಿ ಎಂದು ಗುರುತಿಸಿದ್ದಾರೆ. ದುಷ್ಕರ್ಮಿಗಳು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದು ಸದ್ಯ ತಿಳಿದುಬಂದಿಲ್ಲ. ಕೊಲೆಯಾದ ರವಿಯ ಜೇಬಿನಲ್ಲಿ ಸಲ್ಯೂಷನ್ ದೊರೆತಿದ್ದು, ಸ್ನೇಹಿತರೇ ಸಲ್ಯೂಷನ್ ಸಿಂಪಡಿಸಿ ಆ ಮತ್ತಿನಲ್ಲಿ ಜಗಳವಾಡಿ ಕೊಲೆ ನಡೆಸಿರಬಹುದೆಂದು ಶಂಕೆ ವ್ಯಕ್ತಪಡಿಸಿ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.

ವೃತ್ತಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ರವಿ ವಿರುದ್ಧ 2010ರಲ್ಲಿ ಯಶವಂತಪುರ ಠಾಣೆಯಲ್ಲಿ ಡಕಾಯಿತಿ ಯತ್ನ ಪ್ರಕರಣ ದಾಖಲಾಗಿದೆ. ಅಲ್ಲದೆ ಈತ ಯಶವಂತಪುರ ಠಾಣೆಯ ರೌಡಿ ಪಟ್ಟಿಯಲ್ಲಿದ್ದನು.

ಜಾಲಹಳ್ಳಿ ಠಾಣೆ ವ್ಯಾಪ್ತಿ: ಪಿಯು ವಿದ್ಯಾರ್ಥಿಯನ್ನು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಎದೆ ಮತ್ತು ಬೆನ್ನಿಗೆ ಚಾಕುವಿನಿಂದ ಹಿರಿದು ಬರ್ಭರವಾಗಿ ಕೊಲೆ ಮಾಡಲಾಗಿದೆ. ಸಿದ್ದಾರ್ಥನಗರದ ಟೋನಿ ವಿನ್ಸೆಂಟ್ (17) ಕೊಲೆಯಾದ ದುರ್ದೈವಿ.

ಸೆಂಟ್‌ಜೋಸೆಫ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ ಸರಿಯಾಗಿ ಕಾಲೇಜಿಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಓದಿನ ಜೊತೆಗೆ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಸಹ ಮಾಡುತ್ತಿದ್ದನು. ನಿನ್ನೆ ಬೆಳಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಗೆ ಹೇಳಿ ಟೋನಿ ಹೊರಹೋಗಿದ್ದು, ಮನೆಗೆ ಹಿಂದಿರುಗಿರಲಿಲ್ಲ. ಇಂದು ಮುಂಜಾನೆ ಜಾಲಹಳ್ಳಿಯ ಎಚ್.ಎಂ.ಟಿ ಕಾಲೋನಿಯ ಖಾಲಿ ನಿವೇಶನದ ಬಳಿ ಯುವಕನ ಶವ ಇರುವುದನ್ನು ಗಮನಿಸಿದ ದಾರಿಹೋಕರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ವಿನ್ಸೆಂಟ್‌ನನ್ನು ಹಗ್ಗದಿಂದ ಕೈಕಾಲು ಕಟ್ಟಿ ಹಾಕಿರುವ ದುಷ್ಕರ್ಮಿಗಳು ಎದೆ, ಬೆನ್ನಿಗೆ ಚಾಕುವಿನಿಂದ ಇರಿದು, ರಾಡಿನಿಂದ ತಲೆ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಕಂಡುಬಂದಿದೆ.

ಪ್ರಕರಣ ದಾಖಲಿಸಿಕೊಂಡ ಜಾಲಹಳ್ಳಿ ಪೊಲೀಸರು ಶೋಧ ಕೈಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜಣ್ಣ ಮತ್ತು ಈತನ ಕಡೆಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತಿಕೆರೆಯಲ್ಲಿ ಮಂಜಣ್ಣ ಎಂಬುವರಿಗೆ ಸೇರಿದ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ರಾತ್ರಿ ವಿನ್ಸೆಂಟ್ ಕಳ್ಳತನ ಮಾಡಲು ಬಂದಿದ್ದಾನೆಂಬ ಅನುಮಾನದಿಂದ ದೊಣ್ಣೆ ಹಾಗೂ ರಾಡ್‌ನಿಂದ ಆರೋಪಿಗಳು ಹೊಡೆದಿದ್ದಾಗಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಮಹದೇವಪುರ: ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿಯೊಬ್ಬನ ಮೇಲೆ ಹಳೇ ದ್ವೇಷದಿಂದ ದುಷ್ಕರ್ಮಿಗಳು ಮಚ್ಚು, ಲಾಂಗ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ಮೊದಲು ಇಂದಿರಾನಗರದಲ್ಲಿ ವಾಸವಾಗಿದ್ದ ಮಲ್ಲೇಶ್(37) ಇತ್ತೀಚಗಷ್ಟೇ ಬಾಣಸವಾಡಿಗೆ ಬಂದು ನೆಲೆಸಿದ್ದನು. ಇಂದಿರಾನಗರ ಠಾಣೆಯಲ್ಲಿ ಈತನ ವಿರುದ್ಧ ಕೊಲೆಯತ್ನ ಪ್ರಕರಣ ಹಾಗೂ ಬಾಣಸವಾಡಿಯಲ್ಲಿ ಪ್ರಕರಣವೊಂದು ದಾಖಲಾಗಿದೆ.

ಪ್ರಕರಣವೊಂದರ ಸಂಬಂಧ ಜೈಲಿನಲ್ಲಿದ್ದ ಮಲ್ಲೇಶ್ ಇತ್ತೀಚೆಗಷ್ಟೇ ಜಾಮೀನ ಮೇಲೆ ಹೊರಬಂದಿದ್ದನು. ರಾತ್ರಿ ಮಹದೇವಪುರ ವ್ಯಾಪ್ತಿಯ ಟಿನ್ ಫ್ಯಾಕ್ಟ್ರಿ ಸಮೀಪದ ಬಾರ್‌ವೊಂದರಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿ 9.30ರಲ್ಲಿ ಈತ ಹೊರ ಬರುತ್ತಿದ್ದಂತೆ ಬೈಕ್ ಹಾಗೂ ಟಾಟಾ ಸುಮೊದಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮಚ್ಚು ಲಾಂಗ್‌ನಿಂದ ಹಲ್ಲೆ ನಡೆಸಿದಾಗ ಭೀತಿಯಿಂದ ಮತ್ತೆ ಮಲ್ಲೇಶ್ ಬಾರ್‌ನೊಳಗೆ ಓಡಿದ್ದಾನೆ.

ಈ ವೇಳೆ ದುಷ್ಕರ್ಮಿಗಳು ಪರಾರಿಯಾಗಿದ್ದು, ಮಲ್ಲೇಶನ ಹೊಟ್ಟೆ ಹಾಗೂ ಬೆನ್ನಿನಲ್ಲಿ ಗಂಭೀರ ಗಾಯವಾಗಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೇ ದ್ವೇಷದಿಂದ ಕೊಲೆಯತ್ನ ನಡೆದಿದೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

Write A Comment