ಕರ್ನಾಟಕ

ರಾಮನಗರದಲ್ಲಿ ಅಪ್ರಾಪ್ತೆಯ ಮರ್ಯಾದೆ ಹತ್ಯೆ? ಮೃತಳ ಪೋಷಕರ ವಿಚಾರಣೆ

Pinterest LinkedIn Tumblr

maryade murder

ರಾಮನಗರ: ತಾಲೂಕಿನ ದೊಡ್ಡಗಂಗ ವಾಡಿಯಲ್ಲಿ ಮನೆಬಿಟ್ಟು ಪ್ರಿಯಕರನ ಜತೆ ಹೊಗಿ ಮರಳಿದ್ದ ಅಪ್ರಾಪ್ತೆ ಮಂಗಳವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಘಟನೆಯನ್ನು ‘ಮರ್ಯಾದೆ ಹತ್ಯೆ’ ಎಂದು ಶಂಕಿಸಲಾಗಿದ್ದು, ಮೃತಳ ಪೋಷಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಮೃತ ಚಂದ್ರಕಲಾ(17)ಳ ತಂದೆ ಕೆಂಪೇಗೌಡ ಅಲಿಯಾಸ್ ಕರಿಯಪ್ಪ, ಚಿಕ್ಕಪ್ಪ ರಾಜಣ್ಣ ಸಹಿತ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಬಳಿಕವಷ್ಟೇ ಇದು ಮರ್ಯಾದೆ ಹತ್ಯೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ಸ್ಪಷ್ಪವಾಗಬೇಕಿದೆ.

ರಾಗಿ ಕುಯ್ಲು ಕೆಲಸ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೆಂಪೇಗೌಡ ಮತ್ತು ಪತ್ನಿ ಇಬ್ಬರು ಹೊಲಕ್ಕೆ ಹೋಗಿದ್ದರು. ಮನೆಯಲ್ಲಿ ಒಬ್ಬಳೇ ಇದ್ದ ಚಂದ್ರಕಲಾ ಮಧ್ಯಾಹ್ನ 12ಕ್ಕೆ ನೇಣು ಹಾಕಿಕೊಂಡಿದ್ದಳು. ಆಕೆಯ ಶವ ನೇಣಿನಲ್ಲಿ ಇದ್ದದ್ದನ್ನು ನೋಡಿದ್ದಾಗಿ ಗ್ರಾಮಸ್ಥರು ಹೇಳುತ್ತಾರೆ. ವಿಪರ್ಯಾಸವೆಂದರೆ, ಚಂದ್ರಕಲಾ ಸಾವಿನ ಸುದ್ದಿಯನ್ನು ಆಕೆಯ ತಾಯಿಯಿಂದಲೂ ಮರೆಮಾಚಲಾಗಿತ್ತು. ಆರೇಳು ಮಂದಿಯಷ್ಟೇ ಮನೆಯಿಂದ ಸುಮಾರು ಇನ್ನೂರು ಮೀಟರ್ ಅಂತರದಲ್ಲಿರುವ ಕೆಂಪೇಗೌಡರ ಜಮೀನಿನಲ್ಲೇ ಅಂತ್ಯಸಂಸ್ಕಾರ ಮಾಡಿದ್ದಾರೆ.

ಘಟನೆ ಹಿನ್ನೆಲೆ: ರಾಮನಗರದ ವಿದ್ಯಾಪೀಠ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಚಂದ್ರಕಲಾ, ದೊಡ್ಡಗಂಗವಾಡಿ ಗ್ರಾಮದವನೇ ಆದ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ದಯಾನಂದನನ್ನು ಪ್ರೀತಿಸಿದ್ದಳು.
ಇಬ್ಬರೂ ಒಂದೇ ಜಾತಿಯವರಾಗಿದ್ದು, ಉಪಜಾತಿ ಬೇರೆಯಾಗಿತ್ತು. ಈ ನಡುವೆ ಬೇರೊಬ್ಬನ ಜತೆ ಮದುವೆ ನಿಶ್ಚಯದ ಮಾತುಕತೆ ಚಂದ್ರಕಲಾ ಕಿವಿಗೆ ಬಿದ್ದಿತು. ಈ ಹಿನ್ನೆಲೆಯಲ್ಲಿ ಚಂದ್ರಕಲಾ ತನ್ನ ಪ್ರಿಯಕರನೊಂದಿಗೆ 15 ದಿನಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದಳು. ಚಂದ್ರಕಲಾ ನಾಪತ್ತೆ ಬಗ್ಗೆ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

‘ಮನೆಗೆ ಮರಳಿದ ಬಳಿಕ ಕೇಳಿ ಬರುತ್ತಿದ್ದ ನಿಂದನೆಯ ಮಾತುಗಳಿಂದ ಬೇಸತ್ತು ಚಂದ್ರಕಲಾ ನೇಣಿಗೆ ಶರಣಾಗಿದ್ದಾಳೆ. ಪೊಲೀಸರಿಗೆ ತಿಳಿಸಿದರೆ ಶವವನ್ನು ಪರೀಕ್ಷೆ ನೆಪದಲ್ಲಿ ಕುಯ್ದು, ಕಟ್ಟುತ್ತಾರೆ. ಹೀಗಾಗಿ ಯಾರಿಗೂ ವಿಷಯ ತಿಳಿಸದೆ ತಕ್ಷಣವೇ ಶವವನ್ನು ಚಿತೆಗಿಟ್ಟು, ಅಗ್ನಿ ಸ್ಪರ್ಶ ಮಾಡಲಾಗಿದೆ.

ಹಾಗಾಗಿ ಸಂಬಂಧಿಕರಿಗೂ ತಿಳಿಸಲಾಗಿಲ್ಲ’ ಎನ್ನುವುದು ಗ್ರಾಮಸ್ಥರ ಮಾತು. ಘಟನೆ ಸಂಬಂಧ ಅನಾಮಧೇಯ ಕರೆಯಿಂದ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿದರು. ಅಷ್ಟರಲ್ಲಾಗಲೇ ಶವವನ್ನು ಚಿತೆಗೇರಿಸಿ, ಸುಟ್ಟು ಹಾಕಲಾಗಿತ್ತು. ಚಂದ್ರಕಲಾ ಸಾವಿನ ಬಗ್ಗೆ ಪೊಲೀಸರಿಗೆ ಯಾರು ದೂರು ನೀಡಿಲ್ಲ.

ಪ್ರೇಮಿಗಳು ಬೆಂಗಳೂರಿನಲ್ಲಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಇಬ್ಬರನ್ನು ರಾಮನಗರಕ್ಕೆ ಕರೆತಂದು ವಿಚಾರಣೆ ನಡೆಸಿದ್ದರು. ತಾನಾಗಿಯೇ ದಯಾನಂದ್ ಜತೆ ತೆರಳಿದ್ದಾಗಿ ಚಂದ್ರಕಲಾ ಹೇಳಿಕೆ ನೀಡಿದ್ದಳು.

ನಂತರ ಗ್ರಾಮಸ್ಥರು ನಡೆಸಿದ ನ್ಯಾಯ ಪಂಚಾಯಿತಿ ಬಳಿಕ ಚಂದ್ರಕಲಾ ಪೋಷಕರು ದೂರು ವಾಪಸ್ ಪಡೆದಿದ್ದರು. ಅಷ್ಟೇ ಅಲ್ಲ, ಚಂದ್ರಕಲಾಗೆ 18 ವರ್ಷ ತುಂಬಿದ ಬಳಿಕ ದಯಾನಂದನಿಗೇ ಕೊಟ್ಟು ಮದುವೆ ಮಾಡಿಕೊಡುವುದಾಗಿ ಹೇಳಿ, ಆಕೆಯನ್ನು ಮನೆಯ ಕರೆದೊಯ್ದಿದ್ದರು.

Write A Comment