ಬೆಂಗಳೂರು: ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೃತಕ ಉಸಿರಾಟ ವ್ಯವಸ್ಥೆ ಲಭ್ಯವಾಗದೆ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದ ಇಬ್ಬರು ಮಕ್ಕಳು ಶುಕ್ರವಾರ ಸಾವನ್ನಪ್ಪಿದ್ದಾರೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೂರೂವರೆ ವರ್ಷದ ಆಕಾಶ್ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ.
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಿಂದ ಮನೆಗೆ ತೆರಳಿದ್ದ ದೇವನಹಳ್ಳಿಯ ಎಂಟು ವರ್ಷದ ಆನಂದ ಕೂಡ ಸಂಜೆ ಸಾವನ್ನಪ್ಪಿದ್ದಾನೆ.
ಕೋರಮಂಗಲ ನಿವಾಸಿ ಪಳನಿ ಮತ್ತು ಗೋವಿಂದಮ್ಮ ದಂಪತಿಯ ಮಗು ಆಕಾಶ್, ಮಂಗಳವಾರ ಮಧ್ಯಾಹ್ನ ಮಹಡಿಯಿಂದ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ.
‘ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದ ಆಕಾಶ್ ತಲೆಗೆ ತೀವ್ರ ಪೆಟ್ಟಾಗಿತ್ತು. ಹೀಗಾಗಿ, ಮಧ್ಯಾಹ್ನ 3.30ರ ಸುಮಾರಿಗೆ ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದೆವು. ಆಗ, ಮಗುವನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ ವೈದ್ಯರು ರಾತ್ರಿ 11.30ರ ಸುಮಾರಿಗೆ ಕೃತಕ ಉಸಿರಾಟ ವ್ಯವಸ್ಥೆಯಿಲ್ಲ ಎಂದು ಹೇಳಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು’ ಎಂದು ತಂದೆ ಪಳನಿ ಹೇಳಿದರು.
‘ಅಲ್ಲಿಯೂ ಕೃತಕ ಉಸಿರಾಟ ವ್ಯವಸ್ಥೆಯಿಲ್ಲ ಎಂದು ಕಾರಣ ನೀಡಿ ಮತ್ತೆ ನಿಮ್ಹಾನ್ಸ್ಗೆ ಹೋಗುವಂತೆ ಹೇಳಿದರು. ಅಲ್ಲಿಯೂ ಚಿಕಿತ್ಸೆ ದೊರೆಯದೆ, ವಾಣಿವಿಲಾಸ ಆಸ್ಪತ್ರೆಗೆ ಮಧ್ಯರಾತ್ರಿ 1.30ರ ಸುಮಾರಿಗೆ ಮಗುವನ್ನು ದಾಖಲಿಸಿದೆವು’ ಎಂದು ದೂರಿದರು.
‘ಮಗುವಿನ ಚಿಕಿತ್ಸೆಗಾಗಿ ಸುಮಾರು 10 ಗಂಟೆ ಅಲೆದಾಡಿದರೂ ಯಾವುದೇ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ. ಸಕಾಲದಲ್ಲಿ ತುರ್ತು ಚಿಕಿತ್ಸೆ ನೀಡಿದ್ದರೆ ನನ್ನ ಮಗ ಉಳಿಯುತ್ತಿದ್ದ’ ಎಂದು ದುಃಖ ತೋಡಿಕೊಂಡರು.
ಬಾಲಕ ಆನಂದ ಸಾವು: ‘ಆನಂದ್ನಿಗೆ ಕೃತಕ ಉಸಿರಾಟ ವ್ಯವಸ್ಥೆಯಿಲ್ಲದೆ ಉಸಿರಾಡಲು ಸಾಧ್ಯವಿರಲಿಲ್ಲ. ಆಸ್ಪತ್ರೆಯ ವೈದ್ಯರ ತೀವ್ರ ವಿರೋಧದ ನಡುವೆಯೂ ಪೋಷಕರು ಮಗುವನ್ನು 4 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಹೋಗಿದ್ದರು’ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕಿ ಡಾ.ಪ್ರೇಮಲತಾ ತಿಳಿಸಿದರು.
ದೇವನಹಳ್ಳಿಯ ನಿವಾಸಿ ಕೂಲಿಕಾರ್ಮಿಕ ನಂದೀಶ್ ಅವರ ಪುತ್ರ ಆನಂದ ಮೂರ್ಛೆ ರೋಗ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ. ಮಂಗಳವಾರ ಮಧ್ಯಾಹ್ನ ಆನಂದನನ್ನು ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕೃತಕ ಉಸಿರಾಟ ವ್ಯವಸ್ಥೆ ಇಲ್ಲ ಎಂದು ಹೇಳಿ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಅಲ್ಲಿಂದ ಬೌರಿಂಗ್ ಮತ್ತು ಲೇಡಿಕರ್ಜನ್ ಆಸ್ಪತ್ರೆ… ಹೀಗೆ ಬೇರೆ ಬೇರೆ ಆಸ್ಪತ್ರೆಗಳಿಗೆ ಅಲೆದಾಡಿಸಲಾಗಿತ್ತು. ಕೊನೆಗೆ ಬೆಳಿಗ್ಗೆ 4.30 ಕ್ಕೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು.
‘ಆಸ್ಪತ್ರೆಯ ನಿರ್ಲಕ್ಷ್ಯವಿಲ್ಲ’
ವಾಣಿವಿಲಾಸ ಆಸ್ಪತ್ರೆಗೆ ಬಂದಾಗ ಆಕಾಶ್ನ ಸ್ಥಿತಿ ಚಿಂತಾಜನಕವಾಗಿತ್ತು. ಮೆದುಳಿಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಮಗು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ. ಆಸ್ಪತ್ರೆಗೆ ಬಂದ ಕೂಡಲೇ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ. ಆಸ್ಪತ್ರೆಯಿಂದ ಯಾವುದೇ ರೀತಿಯಲ್ಲಿಯೂ ನಿರ್ಲಕ್ಷ್ಯವನ್ನು ವಹಿಸಿಲ್ಲ.
– ಗಂಗಾಧರ ಬಿ.ಬೆಳವಾಡಿ, ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ.
‘ಸೂಕ್ತ ಕ್ರಮ’
ದೇವನಹಳ್ಳಿ ಮತ್ತು ವಾಣಿವಿಲಾಸ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದೇನೆ. ಇಡೀ ಘಟನೆಗಳನ್ನು ಪರಿಶೀಲಿಸಲಾಗುವುದು. ಮಕ್ಕಳಿಗೆ ಚಿಕಿತ್ಸೆ ನೀಡುವಲ್ಲಿ ಸಿಬ್ಬಂದಿ ತಪ್ಪಿತಸ್ಥರು ಎಂದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಯು.ಟಿ.ಖಾದರ್, ಆರೋಗ್ಯ ಸಚಿವ