ಕರ್ನಾಟಕ

ಬೆಂಗಳೂರಿನಲ್ಲೊಬ್ಬ ಐಸಿಸ್ ಉಗ್ರಾಭಿಮಾನಿ: -ಪತ್ತೆಗೆ ಬೆಂಗಳೂರು ಪೊಲೀಸರ ತೀವ್ರ ಕಾರ್ಯಾಚರಣೆ

Pinterest LinkedIn Tumblr

twitter

ಬೆಂಗಳೂರು: ಮಹಾರಾಷ್ಟ್ರದ ಕಲ್ಯಾಣ್‌ನ ಆರೀಫ್ ಮಜೀದ್ ಎಂಬ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಐಸಿಸ್ ಭಯೋತ್ಪಾದಕ ಸಂಘಟನೆ ತೊರೆದು ಇರಾಕ್‌ನಿಂದ ವಾಪಸಾಗಿರುವ ಬೆನ್ನಲ್ಲೇ, ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಈ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಎಂಬ ಸಂಗತಿ ಹೊರಬಿದ್ದಿದೆ. ಉಗ್ರ ಸಂಘಟನೆಗೆ ಭಾರತೀಯ ಯುವಕರನ್ನು ಆರಿಸಿ ಕಳಿಸಲು ಈ ಖಾತೆ ಬಳಕೆಯಾಗಿತ್ತು ಎನ್ನಲಾಗಿದ್ದು, ಇದರ ಸತ್ಯಾಸತ್ಯತೆ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ಕೈಗೊಂಡಿವೆ.

”ಬೆಂಗಳೂರಿನ ಬಹುರಾಷ್ಟ್ರೀಯ ಜಾಹೀರಾತು ಕಂಪನಿಯೊಂದರಲ್ಲಿರುವ ‘ಮೆಹದಿ ಮೆಹಬೂಬ್ ಬಿಸ್ವಾಸ್’ ಎಂಬ ಹೆಸರಿನ ವ್ಯಕ್ತಿಯೊಬ್ಬ ‘ಶಾಮಿ ವಿಟ್ನೆಸ್’ ಹೆಸರಿನ ಅಡಿಯಲ್ಲಿ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದು, ಇದರ ಮೂಲಕ ಜಿಹಾದಿ ಸಿದ್ಧಾಂತದ ಹರಡುವಿಕೆ ಹಾಗೂ ಉಗ್ರ ಸಂಘಟನೆಗೆ ಯುವಕರನ್ನು ಆಯ್ಕೆ ಮಾಡುವ ಕೆಲಸದಲ್ಲಿ ತೊಡಗಿದ್ದ,” ಎಂದು ಬ್ರಿಟನ್‌ನ ‘ಚಾನೆಲ್ 4 ನ್ಯೂಸ್’ ವರದಿ ಮಾಡಿದೆ.

”ಮೆಹದಿ ಎಂಬಾತ ಈ ಟ್ವಿಟರ್ ಖಾತೆಯ ಮೂಲಕ ಕಳೆದ 20 ದಿನಗಳಲ್ಲಿ 2,882 ಟ್ವೀಟ್ ಮಾಡಿದ್ದಾನೆ. ದಿನವೊಂದಕ್ಕೆ ಸರಾಸರಿ 147 ಟ್ವೀಟ್ ಕಳಿಸಿದ್ದಾನೆ. ಈ ಖಾತೆಗೆ 17,700 ಹಿಂಬಾಲಕರಿದ್ದು, 548 ಪ್ರತಿಕ್ರಿಯೆಗಳು ಬಂದಿವೆ. ವರದಿ ಹೊರಬೀಳುತ್ತಲೇ ಈ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಿ ಮೆಹದಿ ಪರಾರಿಯಾಗಿದ್ದಾನೆ,” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

”ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗಕ್ಕೆ ವಹಿಸಲಾಗಿದೆ. ಆತನ ಪತ್ತೆಗೆ ಬಲೆ ಬೀಸಲಾಗಿದೆ,” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ ಎನ್ ರೆಡ್ಡಿ ಶುಕ್ರವಾರ ಹೇಳಿದ್ದಾರೆ.

ಶಾಮಿ ವಿಟ್ನೆಸ್ ಎಂಬ ಖಾತೆಯನ್ನು ಕಳೆದ ವರ್ಷ ಸೃಷ್ಟಿಸಲಾಗಿದೆ. ಅಂದಿನಿಂದ ಐಸಿಸ್ ಸಂಘಟನೆ ಬಗ್ಗೆ ಮಾಹಿತಿ, ಅದು ನಡೆಸಿದ ದಾಳಿಗಳ ಚಿತ್ರಗಳು ಹಾಗೂ ದೃಶ್ಯಾವಳಿ ಇದರಲ್ಲಿ ಬಿತ್ತರಿಸಲಾಗಿದೆ. ಐಸಿಸ್ ಬಗ್ಗೆ ಉನ್ನತ ನಾಯಕರ ಮಾತುಗಳನ್ನೂ ಮೆಹದಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾನೆ. ಇದು ಜಿಹಾದಿಗಳು, ಅವರ ಬೆಂಬಲಿಗರು ಮತ್ತು ಆಯ್ಕೆದಾರರ ನಡುವೆ ಮಾಹಿತಿ ವಿನಿಮಯಕ್ಕೂ ಬಳಕೆಯಾಗಿತ್ತು ಎಂದು ಚಾನೆಲ್ 4 ನ್ಯೂಸ್ ತಿಳಿಸಿದೆ.

”ನನಗೆ ಒಂದೇ ಒಂದು ಅವಕಾಶ ಸಿಕ್ಕರೆ, ಎಲ್ಲವನ್ನೂ ತೊರೆದು ಐಸಿಸ್ ಸೇರಿಬಿಡುತ್ತೇನೆ. ಆದರೆ ನನಗೆ ಕುಟುಂಬವಿದೆ. ನನ್ನ ಕುಟುಂಬಿಕರು ಆರ್ಥಿಕವಾಗಿ ನನ್ನ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ನಾನು ಅವರನ್ನು ತೊರೆಯಲಾಗದು,” ಎಂದು ವಾಹಿನಿಗೆ ಮೆಹದಿ ವಿವರಿಸಿದ್ದಾನೆ. ಆಂಗ್ಲ ಜಿಹಾದಿಗಳ ಜತೆ ಸಂಪರ್ಕವಿರುವುದಾಗಿ ಹಾಗೂ ವಿರೋಧಿಗಳ ಶಿರಚ್ಛೇದದಲ್ಲಿ ನಂಬಿಕೆ ಇರುವುದಾಗಿಯೂ ಮೆಹದಿ ಹೇಳಿಕೊಂಡಿದ್ದಾನೆ.

”ಐಸಿಸ್ ಸಿದ್ಧಾಂತ ಬಿತ್ತರಿಸಲು ಮೆಹದಿ ಹಗಲು ರಾತ್ರಿಯೆನ್ನದೆ ಸಾವಿರಾರು ಟ್ವೀಟ್ ಮಾಡಿದ್ದಾನೆ. ಈ ಖಾತೆಯನ್ನು ಮೂರನೇ ಎರಡರಷ್ಟು ವಿದೇಶಿ ಉಗ್ರರು ಹಿಂಬಾಲಿಸಿದ್ದಾರೆ. ಜಿಹಾದಿಗಳಲ್ಲದೆ, ಮಧ್ಯಪ್ರಾಚ್ಯದ ವಿಶ್ಲೇಷಕರೂ ಅನುಸರಿಸಿದ್ದಾರೆ,” ಎಂದು ವಾಹಿನಿ ವರದಿ ಮಾಡಿದೆ.

ತನ್ನ ಟ್ವೀಟ್‌ಗಳ ಮೂಲಕ ಮೆಹದಿ ಐಸಿಸ್ ಜಿಹಾದಿಗಳನ್ನು ಪ್ರೋತ್ಸಾಹಿಸಿದ್ದಾನೆ. ಹಾಗೆಯೇ, ಇರಾಕ್‌ನಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಲು ಹೋಗಿ ಉಗ್ರರಿಂದ ಶಿರಚ್ಛೇದಕ್ಕೆ ಒಳಗಾದ ಅಮೆರಿಕದ ಪೀಟರ್ ಕೆಸಿಂಗ್ಸ್‌ನ ತಲೆ ಕಡಿಯುವ ದೃಶ್ಯವನ್ನು ಅನೇಕ ಬಾರಿ ಬಿತ್ತರಿಸಿದ್ದಾನೆ.

ಜಿಹಾದಿಗಳು ಒಗ್ಗೂಡಬೇಕು
‘ಜಿಹಾದಿಗಳು ಮಾತ್ರ ಉಳಿದುಕೊಂಡಾಗ’ ಎಂಬ ತಲೆ ಬರಹದ ಅಡಿ ಮೆಹದಿ 2013ರ ಮೇನಲ್ಲಿ ಒಂದು ಟ್ವಿಟ್ ಮಾಡಿದ್ದಾನೆ. ಇದರಲ್ಲಿ, ಐಸಿಸ್‌ನ ಪ್ರಾರಂಭಿಕ ದಿನಗಳ ಬಗ್ಗೆ ಬರೆದಿದ್ದಾನೆ. ಈ ಬಗ್ಗೆ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾನೆ. ”ಜಿಹಾದಿ ವಿಸ್ತರಣೆಗೆ ಇದೊಂದು ಸುವರ್ಣ ಅವಕಾಶ. ಶಸ್ತ್ರಾಸ್ತ್ರ ಪೂರೈಕೆಯಿಲ್ಲದೆ ಉಳಿದೆಲ್ಲ ಸಂಘಟನೆಗಳು ನೆಲೆ ಕಳೆದುಕೊಳ್ಳುತ್ತಿವೆ. ಅಸ್ಸಾದ್ ಆಡಳಿತದ ವಿರುದ್ಧ ನಿಂತಿರುವ ಸಶಸ್ತ್ರ ಪಡೆ ಸೇರಿಕೊಂಡು ಬಲವರ್ಧನೆ ಮಾಡಿಕೊಳ್ಳುವುದು ಇವಕ್ಕೆ ಉಳಿದಿರುವ ಏಕೈಕ ಮಾರ್ಗ,” ಎಂದು ಮತ್ತೊಂದು ಟ್ವೀಟ್‌ನಲ್ಲಿ ಮೆಹದಿ ಬರೆದಿದ್ದಾನೆ.

ತಗಾದೆ ವಿವರ
ಬ್ರಿಟಿಷ್ ಚಾನೆಲ್ ತನ್ನನ್ನು ಸಂಪರ್ಕಿಸುತ್ತಲೇ ಶಾಮಿ ವಿಟ್ನೆಸ್ ಎಂಬ ಟ್ವಿಟರ್ ಖಾತೆಯನ್ನು ಮೆಹದಿ ಸ್ಥಗಿತಗೊಳಿಸಿದ್ದಾನೆ. ಆದರೂ, ಇದಕ್ಕೆ ಬೆಸೆದುಕೊಂಡಿರುವ ಬ್ಲಾಗ್‌ಸ್ಪಾಟ್ ಪುಟ ಇನ್ನೂ ತೆರೆದುಕೊಳ್ಳುತ್ತದೆ. ಇದರಲ್ಲಿರುವ ಇತ್ತೀಚಿನ ಬ್ಲಾಗ್ ಕಳೆದ ವರ್ಷದ ಜೂನ್‌ನಲ್ಲಿ ಬರೆದಿರುವುದಾಗಿದೆ. ಇದರಲ್ಲಿ ಮೆಹದಿ, ‘ಡಾ.ಜವಾಹಿರಿ ವಿರುದ್ಧ ನಿಂತಿರುವ ಅಲ್ ಬಾಗ್ದಾದಿಗಳು’ ಎಂಬ ತಲೆ ಬರಹದ ಅಡಿ ಜಿಹಾದಿ ಸಂಘಟನೆಗಳ ತಗಾದೆಗಳ ಪರಿಹಾರದ ಬಗ್ಗೆ ಬರೆದಿದ್ದಾನೆ.

ಅತ್ಯಾಚಾರ ವಿರುದ್ಧ ದನಿ
”ಮೆಹದಿಯ ಫೇಸ್‌ಬುಕ್ ಖಾತೆ ಟ್ವಿಟರ್‌ನಂತೆ ಉಗ್ರವಾಗಿಲ್ಲ. ಇದರಲ್ಲಿ ಆತ ನಿಯಮಿತವಾಗಿ ಜೋಕ್‌ಗಳು, ತಮಾಷೆಯ ಚಿತ್ರಗಳು ಮತ್ತು ದೃಶ್ಯಾವಳಿಗಳನ್ನು ವಿನಿಮಯ ಮಾಡಿಕೊಂಡಿದ್ದಾನೆ. ಸೂಪರ್‌ಹೀರೊ ಸಿನಿಮಾಗಳು, ಗೆಳೆಯರ ಜತೆ ಫಿಜ್ಜಾ ತಿಂದಿದ್ದು, ಸಹೋದ್ಯೋಗಿಗಳ ಜತೆ ಪಾರ್ಟಿ ಮಾಡಿದ್ದು ಇತ್ಯಾದಿಗಳನ್ನು ಪೋಸ್ಟ್ ಮಾಡಿದ್ದಾನೆ,” ಎಂದು ಆಂಗ್ಲ ವಾಹಿನಿ ಪ್ರಸಾರ ಮಾಡಿದೆ. ಇದೇ ಖಾತೆಯಲ್ಲಿ ಮೆಹದಿ ಅತ್ಯಾಚಾರದ ವಿರುದ್ಧ ಮಾತನಾಡಿದ್ದಾನೆ ಕೂಡ.

ಮೆಹದಿ ಹೆಸರು ಸುಳ್ಳೋ ನಿಜವೋ ಜಿಜ್ಞಾಸೆ
ಐಸಿಸ್‌ನ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಬೆಂಗಳೂರು ಮೂಲದ ‘ಮೆಹದಿ ಮೆಹಬೂಬ್ ಬಿಸ್ವಾಸ್’ ಬಗ್ಗೆ ರಾಷ್ಟ್ರೀಯ ತನಿಖಾ ತಂಡದ (ಎನ್‌ಐಎ) ಅಧಿಕಾರಿಗಳಿಗೆ ಮಾಹಿತಿ ಇತ್ತು ಎಂದು ತಿಳಿದು ಬಂದಿದೆ.

”ಐಸಿಸ್ ಸೇರಲು ಇರಾಕ್‌ಗೆ ತೆರಳುತ್ತಿದ್ದಾಗ ಟರ್ಕಿಯಲ್ಲಿ ಕಳೆದ ತಿಂಗಳು ಸೆರೆಯಾಗಿದ್ದ ಕಲ್ಯಾಣ್‌ನ ಆರೀಬ್ ಮಜೀದ್ (23) ಈ ಟ್ವಿಟರ್ ಖಾತೆ ಬಗ್ಗೆ ಬಾಯಿಬಿಟ್ಟಿದ್ದ. ಈತ ಶಾಮಿ ವಿಟ್ನೆಸ್ ಟ್ವಿಟರ್ ಖಾತೆಯ ಹಿಂಬಾಲಕನಾಗಿದ್ದ. ಅಲ್ಲದೆ, ಐಸಿಸ್‌ನಿಂದ ವಾಪಸಾಗಿರುವ ಆರೀಫ್ ಮಜೀದ್ ಕೂಡ ಈ ಖಾತೆಯಿಂದ ಪ್ರಭಾವಿತನಾಗಿದ್ದ,” ಎಂದು ಅಧಿಕಾರಿಗಳು ಹೇಳಿದ್ದಾರೆ. ಬ್ರಿಟಿಷ್ ವಾಹಿನಿ ಮೆಹದಿ ಬಗ್ಗೆ ಸುದ್ದಿ ಬಿತ್ತರಿಸಿರುವುದರಿಂದ ಈಗ ತನಿಖಾಧಿಕಾರಿಗಳು ಈ ವರದಿಯ ಸತ್ಯಾಸತ್ಯತೆ ಪರೀಕ್ಷಿಸಲು ಮುಂದಾಗಿದ್ದಾರೆ.

ಸುಳ್ಳು ಹೆಸರು?
ಮೆಹದಿ ಮೆಹಬೂಬ್ ಬಿಸ್ವಾಸ್ ಎಂಬುದೊಂದು ಸುಳ್ಳು ಹೆಸರಿರಬಹುದು. ಹಾಗೆಯೇ, ಈತ ಬೆಂಗಳೂರಿನವನಲ್ಲದೆ ಇರಬಹುದೆಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂಬುದಾಗಿ ಗುಪ್ತಚರ ಸಂಸ್ಥೆಗಳು ಹೇಳಿವೆ. ಹೀಗಾಗಿ ಟ್ವಿಟರ್ ಖಾತೆಯ ಮೂಲ ಪತ್ತೆ ಹಚ್ಚಲು ಎನ್‌ಐಎ ಅಧಿಕಾರಿಗಳು ಅಮೆರಿಕದ ಟ್ವಿಟರ್ ಸೇವಾ ಪೂರೈಕೆದಾರರ ಜತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

”ಸದ್ಯಕ್ಕೆ ಸ್ಥಗಿತಗೊಂಡಿರುವ ಶಾಮಿ ವಿಟ್ನೆಸ್ ಎಂಬ ಟ್ವಿಟರ್ ಖಾತೆ ಐಸಿಸ್ ಸಿದ್ಧಾಂತ ಪ್ರಸರಣೆಯಲ್ಲಿ ತೊಡಗಿಸಿಕೊಂಡಿದ್ದು, ಈ ಉಗ್ರ ಸಂಘಟನೆ ಬಗ್ಗೆ ಉತ್ತೇಜನಕಾರಿಯಾಗಿ ಬರೆದಿರುವುದು ನಿಜ. ಆದರೆ, ಮೆಹದಿ ಮೆಹಬೂಬ್ ಬಿಸ್ವಾಸ್ ಎಂಬ ಹೆಸರು ಸುಳ್ಳಿರಬಹುದಾದ ಸಾಧ್ಯತೆಗಳು ಹೆಚ್ಚಿವೆ. ಇದು ಸುಳ್ಳು ಹೆಸರೋ ಅಥವಾ ಅಸಲಿಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹಾಗೆಯೇ, ಈತ ಬೆಂಗಳೂರಿನವನೋ ಅಥವಾ ಅಲ್ಲವೋ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ,” ಎಂದು ಅಧಿಕಾರಿಗಳು ಹೇಳಿದ್ದಾರೆ.
**

ಐಸಿಸ್ ಎಂದರೇನು? ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ದಿ ಲೆವಂಟ್ ಅಥವಾ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಎಸ್‌ಐಎಸ್ ಅಥವಾ ಐಸಿಸ್) ಎಂಬುದೊಂದು ಉಗ್ರ ಸಂಘಟನೆ. ಇರಾಕ್‌ನಲ್ಲಿ ಸದ್ದಾಂ ಹುಸ್ಸೇನ್‌ನನ್ನು ಹತ್ಯೆಗೈದ ಬಳಿಕ ಅಲ್ಲಿ ಶಿಯಾ ಪಂಗಡಕ್ಕೆ ಸೇರಿದ ನೂರ್ ಅಲ್ ಮಲಿಕಿ ಅವರಿಗೆ ದೇಶವನ್ನು ಪುನರ್ ನಿರ್ಮಿಸುವ ಹೊಣೆ ಹೊರಿಸಲಾಯಿತು. ಆದರೆ ಅವರು ಇರಾಕ್‌ನ ಅಲ್ಪಸಂಖ್ಯಾತ ಸುನ್ನಿ ಪಂಗಡದ ದಮನಕ್ಕೆ ನಿಂತಿದ್ದಾರೆ ಎಂದು ಆರೋಪಿಸಿ ಸುನ್ನಿ ಜಿಹಾದಿಗಳು ಸಂಘಟನೆ ಕಟ್ಟಿಕೊಂಡು ರಕ್ತಸಿಕ್ತ ಹೋರಾಟಕ್ಕೆ ನಿಂತರು. ಇರಾಕ್‌ನ ಬಹುಭಾಗ ಹಾಗೂ ಪಕ್ಕದ ಸಿರಿಯಾದ ಕೆಲ ಭಾಗಗಳನ್ನೂ ತಮ್ಮ ವಶಕ್ಕೆ ತೆಗೆದುಕೊಂಡು ಪ್ರತ್ಯೇಕ ದೇಶ ನಿರ್ಮಿಸಿಕೊಂಡರು. ಸುನ್ನಿಗಳಿಗಾಗಿ ಪ್ರತ್ಯೇಕ ದೇಶಗಳನ್ನು ನಿರ್ಮಿಸಿ ಅಲ್ಲಿ ಇಸ್ಲಾಂ ಕಾನೂನು ಜಾರಿ ಮಾಡುವುದು ಇವರ ಗುರಿಯಾಗಿದೆ. ಈಗ ಐಸಿಸ್ ಜಿಹಾದಿಗಳ ಕಬಂಧ ಬಾಹುಗಳು ಲಿಬಿಯಾ, ಈಜಿಪ್ತ್ ಸೇರಿದಂತೆ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ದಕ್ಷಿಣ ಹಾಗೂ ಆಗ್ನೇಯ ಏಷ್ಯಾದಲ್ಲಿಯೂ ಚಾಚುತ್ತಿವೆ. —–

ಮೆಹದಿ ಮೆಹಬೂಬ್ ಬಿಸ್ವಾಸ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ಖಾತೆಯನ್ನು ನಿರ್ವಹಣೆ ಮಾಡುತ್ತಿರುವ ಬಗ್ಗೆ ವಾಹಿನಿಯೊಂದರಿಂದ ಗೊತ್ತಾಗಿದೆ. ಆ ವ್ಯಕ್ತಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಎನ್ನುವ ಸಂಗತಿಯನ್ನೂ ವಾಹಿನಿ ಮೂಲಕವೇ ತಿಳಿದಿದೆ. ಹೀಗಾಗಿ ಆ ವ್ಯಕ್ತಿಯ ಪತ್ತೆಗೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು ಆ ತಂಡಗಳು ಕೆಲಸ ಆರಂಭಿಸಿವೆ * ಎಂ.ಎನ್.ರೆಡ್ಡಿ ನಗರ ಪೊಲೀಸ್ ಆಯುಕ್ತ

ಎಲ್ಲಾ ಕೋನಗಳಿಂದಲೂ ತನಿಖೆ ನಡೆಯುತ್ತಿದೆ. ಕೇಂದ್ರದ ಅಧಿಕಾರಿಗಳ ಜತೆಗೂ ಸಂಪರ್ಕದಿಂದಿದ್ದು ಪರಸ್ಪರ ಸಹಕಾರದಿಂದ ತನಿಖೆ ನಡೆಯುತ್ತಿದೆ. ಇದುವರೆಗೂ ಯಾವುದೇ ಖಚಿತವಾದ ಸುಳಿವು ಲಭ್ಯವಾಗಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದರು. * ಹೇಮಂತ್ ನಿಂಬಾಳ್ಕರ್‌ ತನಿಖಾ ತಂಡದ ಮುಖ್ಯಸ್ಥ

Write A Comment