ಕರ್ನಾಟಕ

ರಸ್ತೆ ಕಾಮಗಾರಿ ಅವ್ಯವಹಾರ: ಕ್ರಮಕ್ಕೆ ಶಿಫಾರಸು

Pinterest LinkedIn Tumblr

pvec13dec14hassembly-5

ಸುವರ್ಣಸೌಧ (ಬೆಳಗಾವಿ): ಬಿಬಿ­ಎಂಪಿಯ ರಸ್ತೆ ಮತ್ತು ಚರಂಡಿ ಕಾಮ­ಗಾರಿಗಳ ಸಂದರ್ಭಗಳಲ್ಲಿ ಇಬ್ಬರು ಹೆಚ್ಚುವರಿ ಆಯುಕ್ತರು ಹಾಗೂ ಇಬ್ಬರು ಜಂಟಿ ಆಯುಕ್ತರು ಸೇರಿದಂತೆ  ಸುಮಾರು 40 ಅಧಿಕಾರಿಗಳು ಕರ್ತವ್ಯ­ಲೋಪ ಎಸಗಿದ್ದು, ಅವ್ಯವಹಾರಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾ­ಯತ್‌ರಾಜ್ ಸಂಸ್ಥೆಗಳ ಸಮಿತಿಯ ಒಂಬತ್ತನೇ ವರದಿ ಶಿಫಾರಸು ಮಾಡಿದೆ.

ಸಮಿತಿಯ ವರದಿಯನ್ನು ವಿಧಾನ­ಸಭೆಯಲ್ಲಿ ಶುಕ್ರವಾರ ಮಂಡಿಸಲಾ­ಯಿತು. ಬಿಬಿಎಂಪಿಯ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿ ಬೊಟ್ಟು ಮಾಡಿತ್ತು. ಈ ವರದಿಯ ಸಮೀಕ್ಷೆ ನಡೆಸಿ ಸಮಿತಿ ವರದಿ ಸಲ್ಲಿಸಿದೆ.

ಹೆಚ್ಚುವರಿ ಆಯುಕ್ತ (ಪೂರ್ವ) ವೆಂಕಟರಮಣ ನಾಯಕ್, ರಾಜ­ರಾಜೇಶ್ವರಿ­ನಗರ ಹೆಚ್ಚುವರಿ ಆಯುಕ್ತ ಎಂ.ವಿ. ವೇದಮೂರ್ತಿ, ದಾಸರಹಳ್ಳಿ ಜಂಟಿ ಆಯುಕ್ತ ಕೆ.ರಾಮಚಂದ್ರ, ಪೂರ್ವ ವಿಭಾಗದ ಜಂಟಿ ಆಯುಕ್ತ ಶಿವಶಂಕರ್,  ಮುಖ್ಯ ಎಂಜಿನಿಯರ್ (ಪೂರ್ವ) ಅನಂತಸ್ವಾಮಿ, ಕಾರ್ಯ­ಪಾಲಕ ಎಂಜಿನಿಯರ್ (ಸಿ.ವಿ.ರಾಮನ್ ನಗರ) ಬಿ.ವಿ.ಜಯಶಂಕರ ರೆಡ್ಡಿ ಕರ್ತವ್ಯ­ಲೋಪ ಎಸಗಿದವರಲ್ಲಿ ಪ್ರಮುಖರು. ಹೆಚ್ಚಿನ ಅಧಿಕಾರಿಗಳು 3-4 ಕಾಮಗಾರಿ­ಗಳಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಸಮಿತಿ ಬಹಿರಂಗಪಡಿಸಿದೆ.

‘ಸಿಎಜಿಯವರು ಬೆಂಗಳೂರು ಪೂರ್ವ (ಪುಲಕೇಶಿನಗರ, ಸರ್ವಜ್ಞನಗರ, ಶಾಂತಿ­ನಗರ, ದಾಸರಹಳ್ಳಿ) ಹಾಗೂ ರಾಜ­ರಾಜೇಶ್ವರಿನಗರ (ಕೆಂಗೇರಿ, ರಾಜ­ರಾಜೇಶ್ವರಿನಗರ) ವಲಯಗಳ ಏಳು ವಿಭಾಗಗಳಿಗೆ ಸಂಬಂಧಿಸಿ 2008–-09ರಿಂದ 2010–-11ರ ವರೆಗೆ ಬಿಬಿಎಂಪಿ ಖರ್ಚು ಮಾಡಿರುವ ₨ 3,448 ಕೋಟಿ ಕಾಮಗಾರಿಯ ಪೈಕಿ ₨ 642 ಕೋಟಿ ಮೊತ್ತದ ರಸ್ತೆ ಹಾಗೂ ಚರಂಡಿ (ಶೇ 19), ಮಳೆ ನೀರು ಚರಂಡಿ ಕಾಮಗಾರಿಗಳ ಪರೀಕ್ಷಾ ತನಿಖೆ ನಡೆಸಿ­ದ್ದರು’ ಎಂದು ಸಮಿತಿ ತಿಳಿಸಿದೆ.

ಪಾಲಿಕೆಯಲ್ಲಿ ಅನುಮೋದನೆ ಪಡೆಯದ ಸ್ಥಳಗಳಲ್ಲಿ ಕಾಮಗಾರಿ ನಡೆಸಿ, ಟೆಂಡರ್ ಅಂತಿಮಗೊಳಿಸಲಾಗಿದೆ. ಅಕ್ರಮ­ವಾಗಿ ಬಿಲ್‌ಗಳನ್ನು ಪಾವತಿಸ­ಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದೆ. ಇದು ಸರಿಯಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಿಸಿ ಪರಿಸರ ಮಾಲಿನ್ಯ ನಿಯಂತ್ರಣ ಮಾಡಬೇಕು ಎಂಬ ಮಾರ್ಗಸೂಚಿ ಇದ್ದರೂ ಅದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸಿದ ಅಧಿ­ಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ರಸ್ತೆಗಿಂತ ಹೆಚ್ಚಿನ ಉದ್ದ ಥರ್ಮೊ ಪೇಂಟಿಂಗ್ ಮಾಡಲಾಗಿದೆ ಎಂದು ಅಂದಾಜು ಪಟ್ಟಿಯಲ್ಲಿ ತೋರಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾ­ರಣೆ ನಡೆಸಿ ಕ್ರಮ ಜರುಗಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಸಿಐಡಿ ಬಗ್ಗೆ ಅಸಮಾಧಾನ: ಪರೀಕ್ಷಾ ತನಿಖೆ ನಡೆಸಿದ ಮೂರು ವಲಯಗಳಲ್ಲಿ ರಾಜರಾಜೇಶ್ವರಿ ನಗರದ ಪೂರ್ಣ ಮಾಹಿತಿ ಸಿಐಡಿ ವಶದಲ್ಲಿದೆ. ದಾಸರಹಳ್ಳಿ ಹಾಗೂ ಕೆಂಗೇರಿ ವಿಭಾಗಗಳ ಹಲವು ಕಡತಗಳು ಕೂಡಾ ಸಿಐಡಿ ವಶದಲ್ಲಿವೆ. ಹೀಗಾಗಿ ಪೂರ್ಣ ಪ್ರಮಾಣದ ಉತ್ತರ ಸರ್ಕಾರದ ವತಿಯಿಂದ ಬಂದಿಲ್ಲ ಎಂದು ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ‘ಸಿಐಡಿ ವರದಿಯ ಶಿಫಾರಸುಗಳ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದೆ.

karta

ಮೂರನೇ ವ್ಯಕ್ತಿಯಿಂದ ತನಿಖೆಗೆ ಸೂಚನೆ: ಪಾಲಿಕೆಯ ರಸ್ತೆ ಕಾಮಗಾರಿ­ಗಳನ್ನು ಮೂರನೇ ವ್ಯಕ್ತಿಯಿಂದ ತನಿಖೆ ನಡೆಸಿ ಗುಣಮಟ್ಟ ಕಾಪಾಡಬೇಕು ಹಾಗೂ ಮೇಲ್ವಿಚಾರಣೆ ನಡೆಸಬೇಕು. ಈ ಬಗ್ಗೆ ಆಂತರಿಕ ಲೆಕ್ಕಪರಿಶೋಧನೆ ನಡೆಸ­ಬೇಕು ಎಂದು ಸಮಿತಿ ಸೂಚಿಸಿದೆ.
ಬಿಬಿಎಂಪಿಯ ಬಹುತೇಕ ಕಾಮಗಾರಿಗಳಲ್ಲಿ ನಿಯಮಾವಳಿ ಪಾಲಿಸಿಲ್ಲ. ಗುತ್ತಿಗೆದಾರರಿಗೆ ಲಾಭ ಆಗುವಂತೆ ಕಾಮಗಾರಿಗಳನ್ನು ನಡೆಸಲಾಗಿದೆ. ಈ ಮೂಲಕ ಅವರಿಗೆ ಪರೋಕ್ಷ ಸಹಾಯ ಮಾಡಲಾಗಿದೆ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

Write A Comment