ಕರ್ನಾಟಕ

ಬೆಂಗಳೂರಿನ ಮಲ್ಲೇಶ್ವರ ಮಾರುಕಟ್ಟೆ ವ್ಯಾಪಾರಿಗಳ ಸ್ಥಳಾಂತರ: 86 ವ್ಯಾಪಾರಿಗಳಿಗೆ ಬಿಬಿಎಂಪಿಯಿಂದ ಮಳಿಗೆ ನೀಡುವ ಭರವಸೆ ಪತ್ರ

Pinterest LinkedIn Tumblr

malleshwaram

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಹಯೋಗದಲ್ಲಿ ಮಲ್ಲೇಶ್ವರ ಮಾರುಕಟ್ಟೆ­ಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿರುವ ಬಿಬಿಎಂಪಿ, ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದ ಕೆಲವು ವ್ಯಾಪಾರಿಗಳನ್ನು ಪಕ್ಕದಲ್ಲೇ ನಿರ್ಮಿಸಲಾದ ತಾತ್ಕಾಲಿಕ ಮಳಿಗೆಗಳಿಗೆ ಗುರುವಾರ ಸ್ಥಳಾಂತರ ಮಾಡಿದೆ.

‘ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದ ಎಲ್ಲ ವ್ಯಾಪಾರಿ­ಗಳಿಗೆ ಸ್ಥಳಾಂತರ ಮಾಡಲು ವಾರದ ಹಿಂದೆ ನೋಟಿಸ್‌ ನೀಡಲಾಗಿತ್ತು. ಗಡುವು ಮುಗಿಯುತ್ತಾ ಬಂದಿ­ದ್ದರಿಂದ ಗುರುವಾರ ಕೆಲವರು ತಾತ್ಕಾಲಿಕ ಮಳಿಗೆ­ಗಳಿಗೆ ಸ್ಥಳಾಂತರಗೊಂಡಿದ್ದಾರೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಮಾರುಕಟ್ಟೆ) ಚನ್ನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ದಾಖಲೆ ಪುಸ್ತಕದಲ್ಲಿ ನಮೂದಾಗಿರುವ ಎಲ್ಲ 86 ವ್ಯಾಪಾರಿಗಳಿಗೆ ಹೊಸ ಮಾರುಕಟ್ಟೆಯಲ್ಲಿ ಮಳಿಗೆ ನೀಡುವ ಭರವಸೆ ಪತ್ರ ನೀಡಲಾಗಿದೆ. ಇನ್ನೂ ಹಲವರು ಅರ್ಜಿ ಕೊಟ್ಟಿದ್ದಾರೆ. ಅವರ ಅರ್ಜಿಯಲ್ಲಿನ ವಿವರ­ಗಳನ್ನು ಪರಿಶೀಲಿಸಿ, ಮಾರುಕಟ್ಟೆಯಲ್ಲಿ ಅವರು ವ್ಯಾಪಾರ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಮಳಿಗೆ ಒದಗಿಸುವ ಕುರಿತು ತೀರ್ಮಾನ ಮಾಡ­ಲಾಗುತ್ತದೆ’ ಎಂದು ಹೇಳಿದರು.

ಬಿಬಿಎಂಪಿ ಹಾಗೂ ಬಿಡಿಎ ಜಂಟಿ ಸಹಭಾಗಿತ್ವದಲ್ಲಿ ನಾಲ್ಕು ಮಾರುಕಟ್ಟೆಗಳನ್ನು ಅಭಿವೃದ್ಧಿ ಮಾಡಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಮಲ್ಲೇಶ್ವರ ಮಾರುಕಟ್ಟೆ ಅಲ್ಲದೆ, ಜಯ­ನಗರ ಶಾಪಿಂಗ್‌ ಕಾಂಪ್ಲೆಕ್ಸ್‌, ಶೇಷಾದ್ರಿಪುರ ಮಾರುಕಟ್ಟೆ ಹಾಗೂ ಕೆ.ಆರ್‌. ಪುರದ ಸಂತೆ ಮೈದಾನ ಮಾರುಕಟ್ಟೆ ಯೋಜನೆಯಲ್ಲಿ ಸೇರಿದ್ದವು.

ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ನ ಮರು ನಿರ್ಮಾಣ ಕಾಮಗಾರಿ ನಡೆದಿದ್ದರೆ, ಕೆ.ಆರ್‌. ಪುರ ಮತ್ತು ಶೇಷಾದ್ರಿಪುರ ಮಾರುಕಟ್ಟೆಗಳ ಹೊಸ ವಿನ್ಯಾಸ­ವನ್ನು ಬಿಡಿಎ ಈಗಾಗಲೇ ಸಿದ್ಧಪಡಿಸಿದೆ. ವ್ಯಾಪಾರಿಗಳು ಶಿವಣ್ಣ ಎಂಬುವವರ ಮೂಲಕ ಬಿಬಿಎಂಪಿ–ಬಿಡಿಎ ಯೋಜನೆ ವಿರುದ್ಧ ಹೈಕೋರ್ಟ್‌ ಮೆಟ್ಟಿಲು ಏರಿದ್ದರಿಂದ ಮಲ್ಲೇಶ್ವರ ಮಾರುಕಟ್ಟೆ ಅಭಿವೃದ್ಧಿ ಕಾರ್ಯ ನನೆ­ಗುದಿಗೆ ಬಿದ್ದಿತ್ತು.

ಮಲ್ಲೇಶ್ವರ ಮಾರುಕಟ್ಟೆಯಲ್ಲಿ 247 ವ್ಯಾಪಾರಿ­ಗಳು ವಹಿವಾಟು ನಡೆಸುತ್ತಿದ್ದಾರೆ ಎಂಬ ಮಾಹಿತಿ­ಯನ್ನು ಅರ್ಜಿದಾರರು ನೀಡಿದ್ದರು.
‘ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿದ ಬಳಿಕ ಮಾರುಕಟ್ಟೆ­ಯನ್ನು ಅಭಿವೃದ್ಧಿ ಮಾಡಬೇಕು’ ಎಂದು ಹೈಕೋರ್ಟ್‌, ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್‌ ಆದೇಶ­ದಂತೆ ಮಾರುಕಟ್ಟೆ ಪ್ರದೇಶದ ಪಕ್ಕದಲ್ಲೇ ಬಿಬಿಎಂಪಿ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಾಣ ಮಾಡಿದೆ.

ಮಲ್ಲೇಶ್ವರದ ಸಂಪಿಗೆ ರಸ್ತೆಯ 15ನೇ ಕ್ರಾಸ್‌ನಲ್ಲಿ­ರುವ ಮಾರುಕಟ್ಟೆ 2.30 ಎಕರೆ ವಿಸ್ತಾರವನ್ನು ಹೊಂದಿದೆ. ಹೊಸ ಯೋಜನೆ ಪ್ರಕಾರ, ಈ ಪ್ರದೇಶ­ದಲ್ಲಿ 250 ಮಳಿಗೆಗಳ ನಿರ್ಮಾಣ ಹಾಗೂ ಸುಮಾರು 750 ಕಾರುಗಳ ನಿಲುಗಡೆಗೆ ಪಾರ್ಕಿಂಗ್‌ ಸೌಲಭ್ಯ ಒದ­ಗಿ­ಸಲು ಉದ್ದೇಶಿಸಲಾಗಿದೆ. ₨ 132 ಕೋಟಿ ಮೊತ್ತದ ಯೋಜನೆ ಇದಾಗಿದೆ.

‘ಕೆಲಸ ಆರಂಭವಾದ ದಿನದಿಂದ 15 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಧರಿಸಲಾ­ಗಿದೆ. ಮಾರುಕಟ್ಟೆ ಅಭಿವೃದ್ಧಿ ದೃಷ್ಟಿಯಿಂದ ವ್ಯಾಪಾರಿ­ಗಳ ಸಹಕಾರ ಅಗತ್ಯವಾಗಿದೆ’ ಎಂದು ಬಿಬಿಎಂಪಿ ಮಾರು­ಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್‌. ನಂಜುಂಡಪ್ಪ ಹೇಳಿದರು.

ಮಾರುಕಟ್ಟೆ ಪ್ರದೇಶವನ್ನು ಖಾಲಿ ಮಾಡಲು ವಿಳಂಬ ಆಗುತ್ತಿರುವುದರಿಂದ ಕಾಮಗಾರಿ ವೆಚ್ಚ ಹೆಚ್ಚಾ­ಗು­ತ್ತಿದ್ದು, ಬಿಡಿಎ ಯೋಜನೆ ಮೇಲಿದ್ದ ಮೊದಲಿನ ಆಸಕ್ತಿಯನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ.

Write A Comment