ಮನೋರಂಜನೆ

ಬಜೆಟ್‌ನಲ್ಲಿ ಬಡವಾಗುವ ಚಿತ್ರಕಥೆ: ನಿರ್ದೇಶಕ ಮಹೇಶ್ ಲಿಮಯೆ ಅನುಭವ ನುಡಿ

Pinterest LinkedIn Tumblr

mahesh

ಬೆಂಗಳೂರು: ‘ಸಿನಿಮಾ ಮಾಡಲು ಆಯ್ದುಕೊಂಡ ಕಥೆ ಎಷ್ಟೇ ಶ್ರೀಮಂತವಾಗಿದ್ದರೂ ಬಹು­ತೇಕ ಸಮಯ ಬಜೆಟ್‌ ವಿಷಯಕ್ಕೆ ಬಂದಾಗ ಚಿತ್ರ ಬಡವಾಗಿಬಿಡುತ್ತದೆ. ನನ್ನ ಅದೃಷ್ಟಕ್ಕೆ ನನಗೆ ಸಿಕ್ಕ ನಿರ್ಮಾ­ಪಕರು ಅಂತಹ ಯಾವ ಕೊರತೆಯೂ ಎದುರಾಗದಂತೆ ನೋಡಿಕೊಂಡರು’ ಎಂದು ನಿರ್ದೇಶಕ ಮಹೇಶ್ ಲಿಮಯೆ ಹೇಳಿದರು.

ಏಳನೇ ಬೆಂಗಳೂರು ಅಂತರ­ರಾಷ್ಟ್ರೀಯ ಸಿನಿಮೋತ್ಸವದ ಅಂತಿಮ ದಿನವಾದ ಗುರುವಾರ ನಡೆದ ‘ನಿರ್ದೇಶಕರೊಂದಿಗೆ ಸಂವಾದ’ದಲ್ಲಿ ತಮ್ಮ ಸಿನಿಮಾ ಕಟ್ಟುವಿಕೆಯನ್ನು ಮುಕ್ತವಾಗಿ ಹಂಚಿಕೊಂಡರು. ತಾವು ಮೊದಲ ಬಾರಿ ಮರಾಠಿ ಭಾಷೆಯಲ್ಲಿ ನಿರ್ದೇಶಿಸಿದ ‘ಎಲ್ಲೊ’ ಚಿತ್ರದ ಅನುಭವಗಳನ್ನು ಹಂಚಿಕೊಳ್ಳುತ್ತ ‘ಎಲ್ಲೊ ವ್ಯಾವಹಾರಿಕ ಚಿತ್ರವಲ್ಲ­ದಿದ್ದರೂ ನಿರ್ಮಾಪಕರು ಸುರಕ್ಷಿತವಾಗಿದ್ದಾರೆ’ ಎಂದರು.

‘ಬುದ್ಧಿಮಾಂದ್ಯ ಬಾಲಕಿಯೊಬ್ಬಳ ಈಜಿನ ಯಶೋಗಾಥೆಯನ್ನು ಚಿತ್ರದ ಚೌಕಟ್ಟಿಗೆ ತರುವುದು ಕಷ್ಟವೇ ಆಗಿತ್ತು. ಪ್ರೇಕ್ಷಕರಿಗೆ ಕಣ್ಣೀರು ಹಾಕಿಸುವುದಕ್ಕಿಂತ ಅವರನ್ನೂ ಚಿತ್ರದಲ್ಲಿ ಒಳಗೊಳ್ಳುವಂತೆ ಮಾಡುವ ಸವಾಲು ನನ್ನೆದುರಿಗಿತ್ತು. ಬುದ್ಧಿಮಾಂದ್ಯ ಮಕ್ಕಳಿಗೆ ಸ್ಫೂರ್ತಿ ನೀಡುವ ಚಿತ್ರ ಇದಾಗಬೇಕು ಎಂಬ ಆಶಯವೂ ಇತ್ತು’ ಎಂದರು.

‘ಹರಿಯಾಣದ ಸರ್ಕಾರೇತರ ಸಂಸ್ಥೆ­ಯೊಂದು 2000 ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ನೀಡುತ್ತದೆ. ಈ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲು ಹೊರಟ ನಾನು ಅದನ್ನು ಎರಡು ಗಂಟೆಯ ಚಿತ್ರಕಥೆ­ಯನ್ನಾಗಿ ಮಾಡುವಂತಾ­ಯಿತು. ಮಾನವೀಯತೆಯೇ ನನ್ನ ಚಿತ್ರದ ಜೀವಾಳ. ಮುಖ್ಯವಾಗಿ ಇದೊಂದು ಪ್ರಯೋಗಾತ್ಮಕ ಚಿತ್ರ’ ಎಂದು ‘ಡ್ರೀಮ್ಸ್–ದ ಮೂವಿ’ ಕುರಿತು ಮಾತನಾಡಿದರು ಆ ಚಿತ್ರದ ನಿರ್ದೇಶಕಿ ಪಶ್ಚಿಮ ಬಂಗಾಳದ ಸುಮನಾ ಮುಖರ್ಜಿ.

ಮೊದಲ ಬಾರಿ ‘ಅನ್‌ಟು ದ ಡಸ್ಕ್’ ಚಿತ್ರವನ್ನು ನಿರ್ದೇಶಿಸಿ ಮಲಯಾಳಂನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ ಸಾಜಿನ್‌ ಬಾಬು ಅವರೂ ತಮ್ಮ ಚಿತ್ರಕಥೆ ಸಿನಿಮಾ ರೂಪ ಪಡೆದುದನ್ನು ವಿವರಿಸಿದರು. ‘ಇಡೀ ಚಿತ್ರದಲ್ಲಿ ಹೆಸರಿ­ರುವುದು ಒಂದೇ ಪಾತ್ರಕ್ಕೆ. ಅಲ್ಲದೇ ಚಿತ್ರದುದ್ದಕ್ಕೂ ಹಿನ್ನೆಲೆ ಸಂಗೀತ ಬರುವುದೇ ಇಲ್ಲ. ಆದರೂ ಇದು ಪ್ರಯೋಗಾತ್ಮಕ ಚಿತ್ರ ಅಲ್ಲ’ ಎಂದರು.

ನಿರ್ದೇಶಕಿ ಕವಿತಾ ಲಂಕೇಶ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ತಮ್ಮ ‘ಕರಿಯ ಕಣ್ಬಿಟ್ಟ’ ಚಿತ್ರವನ್ನು ಹಿನ್ನೆಲೆಯಾಗಿಟ್ಟುಕೊಂಡು ಅನುಭವ ಹಂಚಿಕೊಂಡರು. ‘ಪ್ರತಿ ಬಾರಿ ಚಿತ್ರ ನಿರ್ದೇಶಿಸುವಾಗಲೂ ಕಲಿಯುವುದು ಸಾಕಷ್ಟು ಇದ್ದೇ ಇರುತ್ತದೆ. ಆದರೆ ‘ಕರಿಯ ಕಣ್ಬಿಟ್ಟ’ ಚಿತ್ರ ನಿರ್ದೇಶಿಸುವಾಗ ಹಲವು ವಿಚಾರಗಳು ನನ್ನ ಗಮನಕ್ಕೆ ಬಂದವು.

ಹನ್ನೆರಡು ವರ್ಷದ ದಲಿತ ಬಾಲಕನ ಮೇಲೆ ನಡೆಯುವ ದೌರ್ಜನ್ಯವನ್ನು ಕಟ್ಟಿಕೊಡುವ ಚಿತ್ರ ಇದು ಎಂದಾಗ, ‘ಈಗಲೂ ಇಂತಹ ದೌರ್ಜನ್ಯಗಳು ನಡೆಯುತ್ತಿದೆಯೇ’ ಎಂಬ ಪ್ರಶ್ನೆಯನ್ನು ಹಲವರು ನನ್ನ ಎದುರಿಗೆ ಇಟ್ಟಿದ್ದರು. ನಿತ್ಯ ಪತ್ರಿಕೆಯಲ್ಲಿ ಬರುವ ಸುದ್ದಿಯನ್ನು ಇವರು ಗಮನಿಸು­ವುದೇ ಇಲ್ಲವೇ? ಅದರಲ್ಲೂ ನಗರದಲ್ಲಿ­ರುವವರು ಇಂತಹ ವಿಚಾರಗಳಿಗೆ ಕಣ್ಣುಮುಚ್ಚಿ ಕುಳಿತುಬಿಟ್ಟಿದ್ದಾರೆ’ ಎಂದು ವಿಷಾದದಿಂದ ನುಡಿದರು.

‘ಪಣ್ಣೈಯಾರುಮ್ ಪದ್ಮಿನಿ­ಯುಮ್’ ತಮಿಳು ಚಿತ್ರದ ನಿರ್ದೇಶಕ ಅರುಣ್ ಕುಮಾರ್, ‘ಯೆಲ್ಲೊ’ ಚಿತ್ರದ ನಿರ್ಮಾಪಕ ಉತ್ತುಂಗ್ ಠಾಕುರ್, ‘ಅನ್‌ಟು ದ ಡಸ್ಕ್’ ಚಿತ್ರದ ನಿರ್ಮಾಪಕ ಬಾಬಿ ಮೋಹನ್ ಸಂವಾದದಲ್ಲಿ ಪಾಲ್ಗೊಂಡಿದ್ದರು.

Write A Comment