ಕರ್ನಾಟಕ

ರಾಹುಲ್‌ ಗಾಂಧಿಗೆ ಮಂಡ್ಯ ಜಿಲ್ಲೆಯ ಕಾರ್ಯಕರ್ತರಿಂದ ಅಂಬರೀಷ್‌ ವಿರುದ್ಧ ಪತ್ರ

Pinterest LinkedIn Tumblr
ಕಿಸ್‌ ಆಫ್‌ ಲವ್‌ ಅಲ್ಲ...  ಅಂಬರೀಷ್‌ ಅವರು ಯುವತಿ­ಯೊಬ್ಬಳನ್ನು ಚುಂಬಿಸು­­ತ್ತಿ­ರುವ ಚಿತ್ರ ವಾಟ್ಸ್‌ಆ್ಯಪ್‌ನಲ್ಲಿ ಹರಿ­ದಾಡುತ್ತಿದೆ.
ಕಿಸ್‌ ಆಫ್‌ ಲವ್‌ ಅಲ್ಲ… ಅಂಬರೀಷ್‌ ಅವರು ಯುವತಿ­ಯೊಬ್ಬಳನ್ನು ಚುಂಬಿಸು­­ತ್ತಿ­ರುವ ಚಿತ್ರ ವಾಟ್ಸ್‌ಆ್ಯಪ್‌ನಲ್ಲಿ ಹರಿ­ದಾಡುತ್ತಿದೆ.

ಮಂಡ್ಯ: ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಅಂಬರೀಷ್‌ ಅವರ ಅತಿಯಾದ ಬೆಂಬಲಿಗರ ವ್ಯಾಮೋಹ ಹಾಗೂ ಅವರ ಇತ್ತೀಚಿನ ಪಕ್ಷ ವಿರೋಧಿ ಹೇಳಿಕೆಗಳಿಂದ ತೀವ್ರ ಬೇಸರಗೊಂಡಿರುವ ಜಿಲ್ಲೆಯ ಕಾಂಗ್ರೆಸ್‌ ಮತ್ತು ಅಹಿಂದ ಪ್ರಮುಖರು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ಗೆ ಅಂಬರೀಷ್‌ ವಿರುದ್ಧ ದೂರು ಸಲ್ಲಿಸಿದ್ದಾರೆ.

ಮೂರು ಪುಟಗಳ ಸುದೀರ್ಘ ಪತ್ರದ ಜತೆಗೆ, ಮದ್ಯದ ಗುಂಗಿನಲ್ಲಿ ಅಂಬರೀಷ್‌ ಹಾಗೂ ಅವರ ಆಪ್ತ ಬೆಂಬಲಿಗರು ನರ್ತಿಸುತ್ತಿರುವ ದೃಶ್ಯದ ತುಣುಕನ್ನು ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ (ಎಐಸಿಸಿ) ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಕಳುಹಿಸ­ಲಾಗಿದೆ. ಡಿ. 1ರಂದು ಪತ್ರದ ಜತೆಗೆ ಸಿ.ಡಿಯನ್ನು ಕಳುಹಿಸಲಾಗಿದ್ದು, ಅದರ ಪ್ರತಿಗಳನ್ನು ರಾಜ್ಯದ ಉಸ್ತುವಾರಿ­ಯಾಗಿರುವ ದಿಗ್ವಿಜಯ್‌ ಸಿಂಗ್‌, ಮುಖ್ಯಮಂತ್ರಿ ಸಿದ್ದ­ರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ. ಪರಮೇಶ್‌ ಅವರಿಗೆ ಸಲ್ಲಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಂಬರೀಷ್‌ ಪಕ್ಷಕ್ಕೆ ಮುಜುಗರ ಉಂಟು­ಮಾಡು­ವಂತಹ ರೀತಿ­ಯಲ್ಲಿ ವರ್ತಿಸುತ್ತಿ­ದ್ದಾರೆ ಹಾಗೂ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.‌ ‘ಅಂಬರೀಷ್‌ ಹಾಗೂ ಅವರ ಬೆಂಬಲಿಗರು ಮಂದ ಬೆಳಕಿನ ಬಾರ್‌ ಒಂದರಲ್ಲಿ ಕುಳಿತು ಮದ್ಯಪಾನ– ಧೂಮ­ಪಾನ ಮಾಡುತ್ತ ಹಾಡಿಗೆ ನರ್ತಿಸು­ತ್ತಿರುವ ವಿಡಿಯೊಗಳು ಸಾಮಾ­ಜಿಕ ಜಾಲತಾಣಗಳಲ್ಲಿ ಹರಿದಾಡು­ತ್ತಿವೆ. ಜತೆಗೆ, ಅಪರಿಚಿತ ಮಹಿಳೆ ಜತೆ ಅಂಬರೀಷ್‌ ನಿಂತಿರುವ ಹಾಗೂ ಚುಂಬಿಸುತ್ತಿರುವ ವಿಡಿಯೊಗಳು ಸಹ ಇವೆ. ಇದರಿಂದ ಪಕ್ಷಕ್ಕೆ ಮುಜುಗರ ಉಂಟಾ­ಗುತ್ತಿದೆ’ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಂಬರೀಷ್‌ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ರಾಜ್ಯ ಸರ್ಕಾರವು ₨ 1.25 ಕೋಟಿ ಭರಿಸಿತ್ತು. ಆದರೂ, ಪಕ್ಷದ ಮುಖಂಡರ ವಿರುದ್ಧದ ಅವರ ಹೇಳಿಕೆಗಳು ನಿಷ್ಠಾವಂತ ಕಾರ್ಯಕರ್ತರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಇದಕ್ಕಾಗಿ ಅಂಬರೀಷ್‌ ಅವರಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ರಾಹುಲ್‌ ಗಾಂಧಿ ಅವರಿಗೆ ದೂರಿನ ಮೂಲಕ ಮನವಿ ಮಾಡಲಾಗಿದೆ.

ಅಂಬರೀಷ್‌ ಕುದುರೆ ಜೂಜಿನಲ್ಲಿ ಪಾಲ್ಗೊಳ್ಳುವು­ದರ ವಿರುದ್ಧ ಹಿಂದಿನ ರಾಜ್ಯಪಾಲರಾದ ಹಂಸರಾಜ ಭಾರ­ದ್ವಾಜ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಅಂಶವನ್ನೂ ದೂರಿನಲ್ಲಿ ಗಮನ ಸೆಳೆಯಲಾಗಿದೆ. ಅಲ್ಲದೆ, ಶಾಸಕರಾದ ನಂತರ ಜನಸಾಮಾನ್ಯರ ಸಭೆ– ಸಮಾರಂಭ­ಗಳಲ್ಲಿ, ಪ್ರಮುಖ ಕಾರ್ಯ­ಕ್ರಮಗಳಲ್ಲಿ ಪಾಲ್ಗೊಳ್ಳದಿರುವುದು ಸಹ ಜಿಲ್ಲೆಯ ಜನರಲ್ಲಿ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಪತ್ರವನ್ನು ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ನಿಷ್ಠಾವಂತ ಕಾರ್ಯಕರ್ತರು ಮತ್ತು ಅಹಿಂದ ಯುವ ವೇದಿಕೆ ಹೆಸರಿನಲ್ಲಿ ಬರೆಯಲಾಗಿದೆ. 120 ಮಂದಿ ಕಾರ್ಯಕರ್ತರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್‌­ನಲ್ಲಿ ಈ ಪತ್ರ ತೀವ್ರ ಸಂಚಲನವನ್ನು ಉಂಟು ಮಾಡಿದೆ.

‘ಈ ವಯಸ್ಸಿನಲ್ಲಿ ನೋಡೋದು ಏನಿದೆ?’
ಸುವರ್ಣಸೌಧ (ಬೆಳಗಾವಿ): ‘ನಾನು ಸದನದಲ್ಲಿ ವಿಡಿಯೊ ನೋಡಿಲ್ಲ. ಈ ವಯಸ್ಸಿನಲ್ಲಿ ನೋಡೋದು ಏನಿದೆ?’ ಸದನದಲ್ಲಿ ಮೊಬೈಲ್‌ನಲ್ಲಿ ಆಕ್ಷೇ­ಪಾರ್ಹ­ವಾದ­ದ್ದನ್ನು ವೀಕ್ಷಿಸಿದ್ದಾಗಿ ತಮ್ಮ ಮೇಲೆ ಬಂದ ಆರೋಪಕ್ಕೆ ವಸತಿ ಸಚಿವ ಅಂಬರೀಷ್ ನೀಡಿದ ಸ್ಪಷ್ಟನೆ ಇದು.

ವಿಧಾನ ಪರಿಷತ್ತಿನ ಮೊಗಸಾಲೆ­ಯಲ್ಲಿ ಪತ್ರಕರ್ತ­ರೊಂದಿಗೆ ಮಾತ­ನಾಡಿದ ಅವರು, ‘ಬುಧವಾರ ಕಬ್ಬಿನ ವಿಚಾರದ ಕುರಿತು ಚರ್ಚೆ ನಡೆದ ನಂತರ ಶಾಸಕ ಎಸ್.ಎಸ್. ಮಲ್ಲಿ­ಕಾರ್ಜುನ ಅವರು ನನ್ನ ಬಳಿಗೆ ಬಂದು ಮೊಬೈಲ್‌ನಲ್ಲಿನ ಮೆಸೇಜ್ ತೋರಿಸಿದರು. ಅವರಿಗೆ ಅದನ್ನು ಓಪನ್ ಮಾಡಲು ಆಗಲಿಲ್ಲ. ನಾನು ಅದನ್ನು ನೋಡದೇ ವಾಪಸ್ ಕಳುಹಿಸಿಕೊಟ್ಟೆ’ ಎಂದರು.

ತಮ್ಮ ಕಾರ್ಯವೈಖರಿಗೆ ಅಸಮಾ­ಧಾನ ವ್ಯಕ್ತಪಡಿಸಿ ಮಂಡ್ಯದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿ­ರುವ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಹರಿದಾ­ಡು­ತ್ತಿರುವ, ಯುವತಿಗೆ ಮುತ್ತಿಕ್ಕುವ ಚಿತ್ರವನ್ನು ಕಳುಹಿ­ಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಳುಹಿಸಲಿ. ಸಂತೋಷ’ ಎಂದರು.

ಕುಣಿದಿದ್ದೇನೆ ಏನೀಗ?
ಇದು ನನ್ನ ಖಾಸಗಿ ವಿಚಾರ. ನಾನು ನಟನಾಗಿ­ದ್ದ-­ವನು. ಅನೇಕರ ಜೊತೆ ನಟಿಸಿದ್ದೇನೆ. ವೇದಿಕೆ­ಯಲ್ಲಿ ಡಾನ್ಸ್ ಮಾಡಿದ್ದೇನೆ. 350 ಇಟ್ಟು­ಕೊಂಡಿದ್ದೇನೆ. ಏನೀಗ?
– ಅಂಬರೀಷ್‌ (ವಾಟ್ಸ್‌ಆ್ಯಪ್‌ನಲ್ಲಿ ಹರಿದಾ­ಡುತ್ತಿ­ರುವ ದೃಶ್ಯಾವಳಿಗೆ ಪ್ರತ್ಯುತ್ತರ­ವಾಗಿ)

Write A Comment