ಕರ್ನಾಟಕ

ಬೆಳಗಾವಿ ಅಧಿವೇಶನ: ಸಿಎಂ-ಸಚಿವರ ನಡುವೆ ಅತ್ತೆ-ಸೊಸೆ ಸಂಬಂಧ!; ಮಾಜಿ ಸಚಿವ ಲಕ್ಷ್ಮಣ ಸವದಿ

Pinterest LinkedIn Tumblr

laxman

ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಂಪುಟ ಸದಸ್ಯರ ನಡುವಿನ ಸಂಬಂಧ ಅತ್ತೆ-ಸೊಸೆ ಸಂಬಂಧವೇ ಅಥವಾ ಅಣ್ಣ-ತಮ್ಮಂದಿರ ಸಂಬಂಧವೇ? ಹೀಗೊಂದು ಸ್ವಾರಸ್ಯಕರ ಚರ್ಚೆಗೆ ಮಾಜಿ ಸಚಿವ ಲಕ್ಷ್ಮಣ ಸವದಿ ನಾಂದಿ ಹಾಡಿದರು.

ಕಬ್ಬು ಬೆಳೆಗಾರರ ಬಾಕಿ ಪಾವತಿ ಕುರಿತಂತೆ ವಿಧಾನಸಭೆಯಲ್ಲಿ ಮಂಗಳವಾರ ಸುದೀರ್ಘ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿಯ ಸವದಿ, ಸರಕಾರವನ್ನು ಕಬ್ಬಿನ ಗಾಳದಿಂದ ತಿವಿಯುತ್ತಲೇ ಆಗೀಗ ಸಕ್ಕರೆ ಪಾನಕ ಕುಡಿಸುವ ಯತ್ನವನ್ನೂ ಮಾಡಿದರು.

”ರಾಜ್ಯ ಕಂಡ ಅಪರೂಪದ ಜನನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯ ಬದುಕಿನಲ್ಲಿ ಅನೇಕ ಏಳುಬೀಳು ಕಂಡವರು. ಮುಖ್ಯಮಂತ್ರಿಯಾಗಿ ಜನೋಪಯೋಗಿ ಕೆಲಸ ಮಾಡುವ ಸದಾಶಯ ಹೊಂದಿದ್ದಾರೆ. ಆದರೆ ಕಬ್ಬು ಬೆಳೆಗಾರರ ವಿಚಾರದಲ್ಲಿ ಮಾತ್ರ ಯಾಕೋ ಏನೋ ಹೆದರಿದಂತೆ ಕಾಣುತ್ತಿದ್ದಾರೆ,” ಎಂದೂ ಕಾಲೆಳೆದರು.

”ಸಹಕಾರ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಆಕಳಿನಂತಹ ಮನುಷ್ಯ. ಆದರೆ, ರೈತರ ಬಾಕಿ ಹಣ ಕೊಡುವಂತೆ ಕೇಳಿದರೆ ಸಿಎಂ ಕಡೆಗೆ ಬೆರಳು ಮಾಡುತ್ತಾರೆ. ಹೀಗಾಗಿ ಸಿದ್ದರಾಮಯ್ಯನವರು ತಮ್ಮ ಸಂಪುಟದ ಸದಸ್ಯರೊಂದಿಗೆ ಅತ್ತೆಯಂತೆ ವರ್ತಿಸುತ್ತಾರೆಯೇ ಎಂಬ ಸಂಶಯ ಕಾಡುತ್ತಿದೆ. ಸಚಿವರು ಸೊಸೆ ಹೆದರಿದಂತೆ ಹೆದರುತ್ತಾರೆ,” ಎಂದು ಅತ್ತೆ-ಸೊಸೆ ಸಂಬಂಧದ ಒಂದು ಕತೆಯನ್ನು ಹೇಳಿದರು.

ಇದಕ್ಕೆ ಥಟ್ ಅಂತ ಉತ್ತರ ಕೊಟ್ಟ ಗ್ರಾಮೀಣಾಭಿವದ್ಧಿ ಸಚಿವ ಎಚ್.ಕೆ.ಪಾಟೀಲ್ ”ಕೆಲ ಸರಕಾರಗಳಲ್ಲಿ ಸಿಎಂ ಹಾಗೂ ಸಚಿವರ ನಡುವೆ ಅತ್ತೆ-ಸೊಸೆ ಸಂಬಂಧ ಇರುತ್ತದೆ. ಆದರೆ ನಮ್ಮ ಸರಕಾರದಲ್ಲಿ ಸಿಎಂ ಹಾಗೂ ಸಚಿವರ ನಡುವೆ ಅಣ್ಣ-ತಮ್ಮಂದಿರ ಸಂಬಂಧ ಇದೆ. ಲಕ್ಷ್ಮಣ ಸವದಿ ಕೂಡ ಸಚಿವರಾಗಿದ್ದರು. ಅವರು ಅತ್ತೆ-ಸೊಸೆ ಸಂಬಂಧ ಯಾವ ಸರಕಾರದಲ್ಲಿ ಇತ್ತು ಎಂಬುದನ್ನು ಚೆನ್ನಾಗಿ ಬಲ್ಲರು,” ಎಂದು ತಿರುಗೇಟು ನೀಡಿದರು. ಆಗ ಸದನದಲ್ಲಿ ನಗುವಿನ ಅಲೆ ಉಕ್ಕಿತು.

ಇದರಿಂದ ವಿಚಲಿತರಾಗದ ಸವದಿ ”ಸದ್ಯದ ಸರಕಾರದಲ್ಲಿ ಅಣ್ಣ-ತಮ್ಮಂದಿರ ಸಂಬಂಧ ಇರುವುದು ನಿಜವೇ ಆದರೆ ಸಿದ್ದರಾಮಯ್ಯ ಅವರಿಂದ ರೈತರ ಬಾಕಿ ಹಣ 1,756 ಕೋಟಿ ರೂ. ಕೊಡಿಸಬೇಕು. ಒಂದು ವೇಳೆ ಸರಕಾರ ಕಾರ್ಖಾನೆಯಿಂದ ಆಗಲಿ, ಅಥವಾ ಸರಕಾರದಿಂದಲೇ ಆಗಲಿ, ಹಣ ಬಿಡುಗಡೆ ಮಾಡಿದರೆ ಎಚ್.ಕೆ.ಪಾಟೀಲರ ಮಾತು ನಿಜವಾಗುತ್ತದೆ. ಇಲ್ಲದಿದ್ದರೆ, ಅತ್ತೆ-ಸೊಸೆ ಸಂಬಂಧವೇ ನಿಜವಾಗುತ್ತದೆ,” ಎಂದು ಚಾಟಿ ಬೀಸಿದರು. ಆಗ ಪ್ರತಿಪಕ್ಷದ ಸಾಲಿನಲ್ಲಿ ನಗೆ ಉಕ್ಕಿ ಬಂದರೂ, ಆಡಳಿತ ಕಾಂಗ್ರೆಸ್ ಶಾಸಕರು ಸುಮ್ಮನಾಗಬೇಕಾಯಿತು.

ಕಬ್ಬು ಬಾಕಿ ನೀಡುವಂತೆ ಮಾತನಾಡಿದ ಗೋವಿಂದ ಕಾರಜೋಳ, ಪಿ.ರಾಜೀವ್, ಎನ್.ಎಚ್.ಕೋನರಡ್ಡಿ ಮತ್ತಿತರರು ಸಕ್ಕರೆ ಕಾರ್ಖಾನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು, ಅಗತ್ಯಬಿದ್ದರೆ ಎಸ್ಮಾ ಕಾಯಿದೆ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.

Write A Comment