ಬೆಳಗಾವಿ: ಇಲ್ಲಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಮಂಗಳವಾರ ಆರಂಭಗೊಂಡಿತಾದರೂ ಸೌಧದ ಹೊರಗಡೆ ಪ್ರತಿಭಟನೆ ಬಿಸಿ ಏರಿತ್ತು. ಪೊಲೀಸರು, ಸಾರ್ವಜನಿಕರು ಇನ್ನಿಲ್ಲದಂತೆ ಪರದಾಡಿದರು. ರಾಷ್ಟ್ರೀಯ ಹೆದ್ದಾರಿ ಬಳಿ ಬಂದೋಬಸ್ತ್‌ಗೆ ನಿಯೋಜಿತರಾಗಿದ್ದ ಪೊಲೀಸರಿಗೆ ಒದಗಿಸಿದ ಊಟ ಪ್ರತಿಭಟನೆ ನಿರತ ರೈತರ ಪಾಲಾಯಿತು.
ನಿಗದಿತ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗೆ ಊಟದ ಪೊಟ್ಟಣ ಪೂರೈಸಲಾಯಿತು. ಆದರೆ ಪ್ರತಿಭಟನೆಯ ಕಾವಿನಿಂದಾಗಿ ಚದುರಿ ಹೋಗಿದ್ದ ಪೊಲೀಸರಿಗೆ ಊಟ ದೊರೆಯಲಿಲ್ಲ. ಸುವರ್ಣಸೌಧದ ಎದುರು ಪೊಲೀಸರಿಗೆ ಊಟದ ಪೊಟ್ಟಣಗಳು ಆಗಮಿಸುತ್ತಿದ್ದಂತೆಯೇ ಪ್ರತಿಭಟನೆ ನಿರತರ ಜತೆಗಿದ್ದ ಒಂದು ಗುಂಪು ಮುಗಿಬಿದ್ದು ಕಸಿದುಕೊಂಡಿತು. ಹಾಗಾಗಿ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಊಟ, ನೀರು ಇಲ್ಲದೆ ಕರ್ತವ್ಯ ನಿಭಾಯಿಸಿದರು.
ಹೆದ್ದಾರಿಯಲ್ಲೇ ಪ್ರತಿಭಟನೆ ಆರಂಭವಾಗಿದ್ದರಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 4 ಗಂಟೆ ಸಂಚಾರಕ್ಕೆ ಭಾರಿ ವ್ಯತ್ಯಯ ಉಂಟಾಯಿತು. ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡಿದರು. ತುರ್ತು ಕೆಲಸಕ್ಕೆ ಹೊರಟವರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದರು. 4 ಕಿ.ಮೀ ಉದ್ದಕ್ಕೂ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದಾಗಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ಗೆ ಹೆಣಗಬೇಕಾಯಿತು.
ಎಂದಿಗಿಂತ ಈ ವರ್ಷ ಅಧಿವೇಶನದ ಮೊದಲ ದಿನವೇ ಪ್ರತಿಭಟನೆಗಳ ಕಾವು ಜೋರಾಗಿತ್ತು. ಸುವರ್ಣಸೌಧದ ಆವರಣದಲ್ಲೇ 6,000 ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜಿತರಾಗಿದ್ದರು. ಪೊಲೀಸ್ ಆಯುಕ್ತ ಎಸ್.ರವಿ, ನಾಲ್ವರು ಜಿಲ್ಲಾ ಎಸ್ಪಿ, ಒಬ್ಬ ಮಹಿಳಾ ಎಸ್ಪಿ ಮತ್ತು ಹಿರಿಯ ಪೊಲೀಸ್ ಅಕಾರಿಗಳು ಉಸ್ತುವಾರಿ ವಹಿಸಿದ್ದರು. 30 ಕೆಎಸ್‌ಆರ್‌ಪಿ ತುಕಡಿ, 18 ಡಿಎಆರ್ ತುಕಡಿ, 4 ಆರ್‌ಎಎಫ್. 5 ಕ್ಯೂಆರ್‌ಟಿ ತುಕಡಿ ಅಲ್ಲದೆ ಹೋಮ್ ಗಾರ್ಡ್‌ಗಳ ಪೈಕಿ ಮುಕ್ಕಾಲು ಪೊಲೀಸ್ ಸಿಬ್ಬಂದಿ ಸುವರ್ಣಸೌಧದ ಸುತ್ತಮುತ್ತಲ ಪ್ರದೇಶದಲ್ಲಿ ಬಂದೋಬಸ್ತ್ ನೋಡಿಕೊಳ್ಳುತ್ತಿದ್ದರು.
ರಸ್ತೆಯಲ್ಲೇ ನೂಕಾಟ, ತಳ್ಳಾಟ
ಬಾಕಿ ಪಾವತಿಸದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಜತೆ ಮಾತನಾಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ರೈತರು, ಮುಖಂಡ ಕುರುಬೂರು ಶಾಂತಕುಮಾರ ನೇತತ್ವದಲ್ಲಿ ರಸ್ತೆಯಲ್ಲೇ ಧರಣಿ ಕುಳಿತರು. ಸ್ಥಳಕ್ಕೆ ಆಗಮಿಸಿದ ಸಕ್ಕರೆ ಸಚಿವ ಮಹಾದೇವಪ್ರಸಾದ್, ರೈತ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದರೂ ರೈತರು ಪಟ್ಟು ಸಡಿಲಿಸಲಿಲ್ಲ. ಗಲಾಟೆ ತಡೆಯಲು ನೂಕುನುಗ್ಗಲು ಉಂಟಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಆಯತಪ್ಪಿ ಕೆಳಕ್ಕೆ ಬಿದ್ದು ಗಾಯಗೊಂಡರು. ಸಂಚಾರಕ್ಕೆ ವ್ಯತ್ಯಯ ಉಂಟಾಗಿ ಎರಡೂ ಕಡೆ ವಾಹನಗಳು ಸಾಲುಗಟ್ಟಿದ್ದವು. ಉಪವಾಸದಲ್ಲೇ ಕರ್ತವ್ಯ ನಿರ್ವಹಿಸಿದರೂ ಪೊಲೀಸರು ಸಹನೆ ಕಳೆದುಕೊಳ್ಳಲಿಲ್ಲ.
