ಕರ್ನಾಟಕ

ನಂದಿತಾ ಸಾವಿಗೆ ಇಂಗ್ಲಿಷ್ ಕಾರಣ: ಮಾಧ್ಯಮ ಬದಲಾವಣೆಯಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ: ಸಿಐಡಿ ವರದಿ(updated news)

Pinterest LinkedIn Tumblr

nanditha

ಬೆಂಗಳೂರು : ತೀರ್ಥಹಳ್ಳಿಯ ವಿದ್ಯಾರ್ಥಿನಿ ನಂದಿತಾ ನಿಗೂಢ ಸಾವಿನ ರಹಸ್ಯ ಭೇದಿಸಿರುವ ಸಿಐಡಿ ಪೊಲೀಸರು, ಇದು ಕೊಲೆ ಅಲ್ಲ, ಆತ್ಮಹತ್ಯೆ ಎಂಬ ಅಂಶವನ್ನು ತನಿಖೆಯಿಂದ ಹೊರಹಾಕಿದ್ದಾರೆ.

ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಬಳಿಕ ಎಂಟನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಲಾಗಿತ್ತು. ಈ ಬದಲಾವಣೆಯಿಂದ ಖಿನ್ನತೆಗೊಳಗಾಗಿ ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬುದು ಸಿಐಡಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

”ಶೇ.70ರಷ್ಟು ತನಿಖೆ ಪೂರ್ಣಗೊಂಡಿದೆ. ಸರಕಾರಕ್ಕೆ ಮಧ್ಯಾಂತರ ವರದಿ ಸಲ್ಲಿಸಿದ್ದೇವೆ. ಶಾಲಾ ವಿದ್ಯಾರ್ಥಿನಿ ನಂದಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಖಚಿತಗೊಂಡಿದೆ. ಆಕೆಗೆ ಬಲವಂತವಾಗಿ ವಿಷಪ್ರಾಶನ ಮಾಡಿಸಿ, ಕೊಲೆ ಅಥವಾ ಲೈಂಗಿಕ ದೌರ್ಜನ್ಯವನ್ನಾಗಲಿ ನಡೆಸಿಲ್ಲ,” ಎಂದು ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

”ತೀರ್ಥಹಳ್ಳಿ ತಾಲೂಕಿನಲ್ಲಿ ಅ.31 ರಂದು ವಿದ್ಯಾರ್ಥಿನಿ ನಂದಿತಾ ನಿಗೂಢವಾಗಿ ಮೃತಪಟ್ಟಿದ್ದಳು. ಸರಕಾರ ಪ್ರಕರಣದ ತನಿಖೆ ಕೈಗೊಳ್ಳುವಂತೆ ನ.5 ರಂದು ಆದೇಶಿಸಿತ್ತು. ಪ್ರಕರಣದ ತನಿಖೆಗೆ ಐಜಿಪಿ ಪ್ರಣಣ್ ಮಹಾಂತಿ ಮತ್ತು ಡಿಐಜಿ ಸೌಮೇಂದು ಮುಖರ್ಜಿ ಮಾರ್ಗದರ್ಶಿದಲ್ಲಿ ಐದು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿ ಅಂತಿಮವಾಗಿ ನಂದಿತಾಳದ್ದು ಆತ್ಮಹತ್ಯೆ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಮಾಹಿತಿಯನ್ನೇ ಸರಕಾರಕ್ಕೆ ಎರಡು ದಿನಗಳ ಹಿಂದೆ ಮಧ್ಯಾಂತರ ವರದಿಯಲ್ಲಿ ತಿಳಿಸಿದ್ದೇವೆ,” ಎಂದು ಹೇಳಿದರು.
ಮಾಧ್ಯಮ ಬದಲಾವಣೆ ಯಡವಟ್ಟಾಯ್ತಾ?
ನಂದಿತಾ ಮನೆ ಹತ್ತಿರದ ಸೇಂಟ್ ಮೇರಿಸ್ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಳು. ಎಂಟನೇ ತರಗತಿ ಓದಲು ತೀರ್ಥಹಳ್ಳಿಯ ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಆಕೆಯ ಪೋಷಕರು ದಾಖಲಿಸಿದರು. ಏಳನೇ ತರಗತಿವರೆಗೆ ಉತ್ತಮ ಅಂಕ ಗಳಿಸಿ ಶಾಲೆಗೆ ಪ್ರಥಮ ವಿದ್ಯಾರ್ಥಿ ಎನಿಸಿದ್ದ ಆಕೆ, 8ನೇ ತರಗತಿಯಲ್ಲಿ ಎ ಶ್ರೇಣಿಯಿಂದ ಸಿ-ಡಿ ಶ್ರೇಣಿಗಿಳಿದಿದ್ದಾಳೆ. ತನ್ನ ಶೈಕ್ಷಣಿಕ ಪ್ರಗತಿ ಕುಂಠಿವಾಗಿದ್ದರಿಂದ ನಂದಿತಾಳಲ್ಲಿ ಬೇಸರ ಮೂಡಿತ್ತು. ಪೋಷಕರು ಆಂಗ್ಲ ಮಾಧ್ಯಮಕ್ಕೆ ಬಲವಂತವಾಗಿ ಸೇರಿಸಿದ್ದ ಬಗ್ಗೆ ಆಕೆ ಸಹಪಾಠಿಗಳ ಜತೆ ನೋವು ತೋಡಿಕೊಂಡಿದ್ದಳು. ಇದರಿಂದ ಕ್ರಮೇಣ ಆಕೆ ಖಿನ್ನತೆಗೊಳಗಾಗಿದ್ದಾಳೆ. ಈ ನೋವಿನ ಹಿನ್ನೆಲೆಯಲ್ಲಿ ಅ.31 ರಂದು ಮನೆ ಸಮೀಪದ ಆನಂದಗಿರಿ ಬೆಟ್ಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವುದು ಲಭ್ಯವಾದ ಸಾಕ್ಷಾಧಾರಗಳಿಂದ ವ್ಯಕ್ತವಾಗಿದೆ,” ಎಂದು ಸಿಐಡಿ ಡಿಜಿಪಿ ವಿವರಿಸಿದರು.

”ಆತ್ಮಹತ್ಯೆಗೆ ನಿರ್ಧರಿಸಿದ ಬಳಿಕ ನಂದಿತಾ, ಡೆತ್ ನೋಟ್ ಬರೆದಿಟ್ಟಿದ್ದಾಳೆ. ಆದರೆ ಈ ಪತ್ರದ ಬರಹಗಳ ಬಗ್ಗೆ ಆಕೆಯ ತಂದೆ ಕೃಷ್ಣಮೂರ್ತಿ ಅನುಮಾನ ವ್ಯಕ್ತಪಡಿಸಿದ್ದರು. ತಮ್ಮ ಮಗಳ ಬರವಣಿಗೆಯಲ್ಲ. ಇದನ್ನು ಪೊಲೀಸರೇ ಬರೆದಿದ್ದಾರೆಂದು ಆರೋಪಿಸಿದ್ದರು. ಹೀಗಾಗಿ ಡೆತ್‌ನೋಟ್ ಅನ್ನೂ ಪರಿಶೀಲನೆಗೆ ಬೆಂಗಳೂರಿನ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್‌ಗೆ)ರವಾನಿಸಲಾಗಿತ್ತು. ಎಫ್‌ಎಸ್‌ಎಲ್ ತಜ್ಞರು ಡೆತ್‌ನೋಟ್‌ನಲ್ಲಿ ಬರಹ ನಂದಿತಾಳದ್ದು ಎಂಬುದನ್ನು ಖಚಿತಪಡಿಸಿದ್ದಾರೆ,” ಎಮದು ಬಿಪಿನ್ ಹೇಳಿದರು.

”ಸಾವಿಗೂ ಮುನ್ನ ನಂದಿತಾ ನೀಡಿದ ಹೇಳಿಕೆಯ ಅನುಸಾರ ಆಕೆಯ ತಂದೆ ಕೃಷ್ಣಮೂರ್ತಿ ತಮ್ಮ ಮಗಳನ್ನು ಯಾರೋ ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಲೈಂಗಿಕ ಕಿರುಕುಳ, ಕೊಲೆ ಮತ್ತು ಪೋಕ್ಸೋ ಕಾಯಿದೆಯಡಿ ಆಗ ಪ್ರಕರಣ ದಾಖಲಾಗಿತ್ತು,” ಎಂದು ತಿಳಿಸಿದರು.

ನೂರಕ್ಕೂ ಹೆಚ್ಚು ಜನರ ವಿಚಾರಣೆ
”ವಿದ್ಯಾರ್ಥಿನಿ ಸಾವಿನ ಪ್ರಕರಣ ಸಂಬಂಧ ಮೃತಳ ಕುಟುಂಬದವರು, ಶಾಲಾ ಶಿಕ್ಷಕರು, ಸ್ಥಳೀಯರು ಮತ್ತು ಸಹಪಾಠಿಗಳು ಸೇರಿದಂತೆ 100ಕ್ಕೂ ಅಧಿಕ ಜನರನ್ನು ವಿಚಾರಣೆಗೊಳಪಡಿಸಿ ಅವರಿಂದ ಹೇಳಿಕೆ ಪಡೆಯಲಾಗಿದೆ. ಕೃತ್ಯದಲ್ಲಿ ಆರೋಪಕ್ಕೆ ಗುರಿಯಾಗಿದ್ದವರನ್ನು ಪ್ರಶ್ನಿಸಲಾಗಿದೆ. ಮೊಬೈಲ್ ಕರೆಗಳು ಹಾಗೂ ಸಿಸಿಟಿವಿಗಳ ದೃಶ್ಯಾವಳಿ ಪರಿಶೀಲಿಸಿ ಮಾಹಿತಿ ಕಲೆ ಹಾಕಲಾಗಿದೆ. ಇವುಗಳಿಂದ ದೊರೆತಿರುವ ಮಾಹಿತಿಗಳಿಂದ ಆರೋಪ ಹೊತ್ತಿದ್ದವರು ಘಟನೆ ನಡೆದ ವೇಳೆ ಘಟನಾ ಸ್ಥಳದಲ್ಲಿರಲ್ಲಿಲ್ಲ ಎಂಬುದು ಖಚಿತಗೊಂಡಿದೆ. ಶೀಘ್ರವೇ ಅಂತಿಮ ವರದಿ ಸಲ್ಲಿಸುತ್ತೇವೆ,” ಎಂದರು.

ಗೊಂದಲಗಳಿಗೆ ತೆರೆ
ಐಜಿಪಿ ಪ್ರಣವ್ ಮೊಹಂತಿ ಮಾತನಾಡಿ ”ತೀರ್ಥಹಳ್ಳಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದ ವೇಳೆ ನಂದಿತಾ, ತನ್ನನ್ನು ಕಾರಿನಲ್ಲಿ ಅಪಹರಿಸಿದ ದುಷ್ಕರ್ಮಿಗಳು ಆನಂದ ಗಿರಿ ಬೆಟ್ಟಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ ಬಾಟಲಿನಲ್ಲಿ ವಿಷಪ್ರಾಷನ ಮಾಡಿಸಿದ್ದರೆಂಬ ಹೇಳಿಕೆ ನೀಡಿದ್ದಳು. ವೈದ್ಯರು ಇದನ್ನು ಆಸ್ಪತ್ರೆ ಡೈರಿಯಲ್ಲೂ ಬರೆದಿಟ್ಟಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗೆ ಶಿಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದಾಗ ಈ ಬಗ್ಗೆ ತಿಳಿಸಿರಲಿಲ್ಲ,” ಎಂದು ಹೇಳಿದರು.

”ತೀರ್ಥಹಳ್ಳಿಯಲ್ಲಿ ವೈದ್ಯರಿಗೆ ತನ್ನ ಅಜ್ಜಿ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದ ನಂದಿತಾ, ಮೆಗ್ಗಾನ್ ಆಸ್ಪತ್ರೆ ಡಾಕ್ಟರ್‌ಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದಾಗಲಿ ಅಥವಾ ವಿಷ ಪ್ರಾಷನ ಮಾಡಿಸಿದ್ದಾಗಲಿ ಯಾವುದನ್ನೂ ಹೇಳಿರಲಿಲ್ಲ. ಹೀಗಾಗಿ ನಂದಿತಾಳ ಸಾವಿನ ಸುತ್ತ ಸಾಕಷ್ಟು ಗೊಂದಲಗಳು ಉಂಟಾಗಿದ್ದವು,” ಎಂದು ಹೇಳಿದರು.

Write A Comment