ಸುವರ್ಣಸೌಧ (ಬೆಳಗಾವಿ): ತೀರ್ಥಹಳ್ಳಿಯ ಬಾಲಕಿ ನಂದಿತಾ ಸಾವಿನ ಪ್ರಕರಣ ಬಳಸಿಕೊಂಡು ಕೋಮು ದ್ವೇಷ ಬಿತ್ತಲು ಪ್ರಯತ್ನಿಸಿರುವುದಕ್ಕಾಗಿ ಬಿಜೆಪಿಯವರು ರಾಜ್ಯದ ಕ್ಷಮೆ ಯಾಚಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಆಗ್ರಹಿಸಿದರು.
ಬಾಲಕಿಯ ಸಾವು ಆತ್ಮಹತ್ಯೆ ಎಂದು ಸಿಐಡಿ ವರದಿ ಸಲ್ಲಿಸಿದ ಬಳಿಕ ಇಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ಈ ಪ್ರಕರಣದಲ್ಲಿ ಅಪಪ್ರಚಾರದ ಮೂಲಕ ನನಗೆ ಮತ್ತು ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಬಿಜೆಪಿ ಯತ್ನ ಕೈಗೂಡಿಲ್ಲ’ ಎಂದರು.
ಬಾಲಕಿಯ ಕುಟುಂಬದ ಮುಗ್ಧತೆ ದುರ್ಬಳಕೆ ಮಾಡಿ ಕೊಂಡ ಬಜರಂಗ ದಳದ ಮುಖಂಡ ಸಂತೋಷ ಪೂಜಾರಿ ಮತ್ತು ಬಿಜೆಪಿ ಮುಖಂಡರಾದ ಆರಗ ಜ್ಞಾನೇಂದ್ರ ಹಾಗೂ ಸಂದೇಶ್ ಜವಳಿ ಕ್ಷೇತ್ರದಲ್ಲಿ ಗಲಭೆ ಸೃಷ್ಟಿಸಲು ಯತ್ನಿಸಿದರು. ಬಿಜೆಪಿಯ ರಾಜ್ಯಮಟ್ಟದ ಕೆಲವು ನಾಯಕರು ಅವರಿಗೆ ಬೆಂಬಲ ನೀಡಿದ್ದರು ಎಂದು ಆರೋಪಿಸಿದರು.
‘ಬಿಜೆಪಿ ಮುಖಂಡರು ಒಂದು ನಿರ್ದಿಷ್ಟ ಕೋಮಿನ ವಿರುದ್ಧ ಜನರನ್ನು ಎತ್ತಿಕಟ್ಟಲು ಯತ್ನಿಸಿದ್ದರು. ಕೋಮು ದ್ವೇಷ ಬಿತ್ತುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇರಾದೆ ಅವರಲ್ಲಿತ್ತು. ಈಗ ಸಿಐಡಿ ಪೊಲೀಸರು ಸಲ್ಲಿಸಿರುವ ವರದಿ ಯಿಂದ ಅವರ ಮುಖವಾಡ ಕಳಚಿಬಿದ್ದಿದೆ’ ಎಂದರು.
‘ಬಾಲಕಿಯ ಸಾವಿನ ಬಗ್ಗೆ ನಮಗೂ ದುಃಖವಿದೆ. ಆಕೆಯ ತಂದೆಯ ಲೋಪ ಸಾವಿಗೆ ಮುಖ್ಯ ಕಾರಣ. ಮಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡುವುದರಲ್ಲಿ ವಿಫಲರಾದ ಅವರು, ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಸಾರ್ವಜನಿಕರ ಎದುರು ಸುಳ್ಳುಗಳನ್ನು ಹೇಳುತ್ತಾ ಹೋದರು’ ಎಂದು ದೂರಿದರು.
ಕ್ಷೇತ್ರದಲ್ಲಿ ಪಾದಯಾತ್ರೆ: ‘ಸತ್ಯ ಹೊರಬಂದಿದೆ. ಅಧಿವೇಶನ ಬಳಿಕ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿ ಇದನ್ನು ಜನರ ಗಮನಕ್ಕೆ ತರುತ್ತೇನೆ’ ಎಂದರು.
