ಕರ್ನಾಟಕ

ಕಂಬಳ ನಿಷೇಧ ವಾಪಸಿಲ್ಲ: ಕಾನೂನು ಸಚಿವ ಟಿ.ಬಿ.ಜಯಚಂದ್ರ

Pinterest LinkedIn Tumblr

JAYACHANDRA

ಸುವರ್ಣಸೌಧ (ಬೆಳಗಾವಿ): ರಾಜ್ಯ­ದಲ್ಲಿ ಕಂಬಳ ಕ್ರೀಡೆಯನ್ನು ಮುಂದು­ವರಿಸುವ ಯಾವುದೇ ಉದ್ದೇಶ ಸರ್ಕಾ­ರಕ್ಕೆ ಇಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿಯ ವಿ.ಸುನೀಲ್ ಕುಮಾರ್ ಹಾಗೂ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ‘ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಪತ್ರದ ಆಧಾರದಲ್ಲಿ ಕಂಬಳ ನಿಷೇಧಿಸಲಾಗಿದೆ. ಆದರೆ, ಕುದುರೆ ರೇಸನ್ನು ನಿಷೇಧಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ’ ಎಂದರು.

ಪೊಲೀಸರಿಗೆ ಅಧಿಕಾರ
ಸುವರ್ಣಸೌಧ (ಬೆಳಗಾವಿ): ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ -1975ರಡಿ ಭಿಕ್ಷುಕರನ್ನು ಬಂಧಿಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ನೀಡಿ ಅಧಿಸೂಚನೆ ಹೊರಡಿಸಬೇಕು ಎಂದು ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ. ಸಮಿತಿಯ ಅನುಪಾಲನಾ ವರದಿಯನ್ನು ಅಧ್ಯಕ್ಷೆ ಶಕುಂತಲಾ ಶೆಟ್ಟಿ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು.

ಶಿಫಾರಸು: ರಾಜ್ಯದಲ್ಲಿ ಈಗಿರುವ ಭಿಕ್ಷುಕರ ಪುನರ್ವಸತಿ ಕೇಂದ್ರಗಳಲ್ಲಿ ಭಿಕ್ಷುಕರ ದಾಖಲಾತಿ ಪ್ರಮಾಣ ಹೆಚ್ಚಿಸ­ಬೇಕು. ಇಂಥ ಇನ್ನಷ್ಟು ಕೇಂದ್ರಗಳನ್ನು ತೆರೆಯಬೇಕು. ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆಯ ಜೊತೆ ವಸೂಲಿ ಮಾಡಿರುವ ಶೇ 3 ರಷ್ಟು ಭಿಕ್ಷುಕರ ಕರವನ್ನು ಕೇಂದ್ರ ಪರಿಹಾರ ಸಮಿತಿಗೆ ಶೀಘ್ರ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದಿದೆ.

ಬಾಲಭವನ ಭೇಟಿ ಕಡ್ಡಾಯ:
ಸರ್ಕಾರಿ ಶಾಲೆಗಳ ಮಕ್ಕಳು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಬಾಲಭವನಗಳಿಗೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಗೆ ಕೂಡಲೇ ಸಮಾಲೋಚನೆ ನಡೆಸಬೇಕು ಎಂದು ಸಮಿತಿ ತಿಳಿಸಿದೆ.

Write A Comment