ಸಿರಿಮನೆ ನಾಗರಾಜ್- ನೂರ್ ಜುಲ್ಫಿಕರ್
ಚಿಕ್ಕಮಗಳೂರು: ಸಮಾಜದ ಮುಖ್ಯವಾಹಿನಿಗೆ ಮರಳಿ ಬಂದಿರುವ ನಕ್ಸಲೀಯರಾದ ಶೃಂಗೇರಿ ತಾಲ್ಲೂಕಿನ ಸಿರಿಮನೆ ನಾಗರಾಜ್ ಸದ್ಯಕ್ಕೆ ಸ್ವತಂತ್ರ ಹಕ್ಕಿ! ಆದರೆ, ನಾಲ್ಕು ಗಂಭೀರ ಸ್ವರೂಪದ ಪ್ರಕರಣ ಎದುರಿಸುತ್ತಿರುವ ಮತ್ತೊಬ್ಬ ನಕ್ಸಲ್ ಮುಖಂಡ ಚಿತ್ರದುರ್ಗದ ನೂರ್ ಜುಲ್ಫಿಕರ್‌ಗೆ ಡಿ.23ರವರೆಗೆ ನ್ಯಾಯಾಂಗ ಬಂಧನ.
ಕೊಪ್ಪ ತಾಲ್ಲೂಕಿನ ಜೆಎಂಎಫ್ ನ್ಯಾಯಾಲಯ ಸಿರಿಮನೆ ನಾಗರಾಜ್‌ಗೆ ಡಿ. 23ರವರೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಮಂಗಳವಾರ ಸಂಜೆ ಬಿಡುಗಡೆ ಮಾಡಿದರೆ, ನೂರ್ ಜುಲ್ಫಿಕರ್‌ಗೆ ಡಿ. 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪೊಲೀಸ್ ಬಿಗಿ ಭದ್ರತೆಯಲ್ಲಿ ಎನ್.ಆರ್.ಪುರ ಜೈಲಿಗೆ ಕಳುಹಿಸಿದೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಇದೇ 23ಕ್ಕೆ ನಿಗದಿಪಡಿಸಿದೆ.
ನಕ್ಸಲ್ ಚಟುವಟಿಕೆ ತೊರೆದು ಸೋಮವಾರ ಜಿಲ್ಲಾಡಳಿತದ ಎದುರು ಹಾಜರಾಗಿ ಮುಖ್ಯವಾಹಿನಿಗೆ ಬಂದ ಈ ಇಬ್ಬರು ನಕ್ಸಲೀಯರಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವ ಹೇಳಿಕೆ ಪಡೆದು, ಕಾನೂನು ಪ್ರಕ್ರಿಯೆಗೆ ಒಳಪಡಿಸಿದರು. ಸಂಜೆ ಇಬ್ಬರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ರಾತ್ರಿ ಪೊಲೀಸ್ ಭದ್ರತಾ ವ್ಯವಸ್ಥೆಯ ರಹಸ್ಯ ಕೊಠಡಿಯೊಂದರಲ್ಲಿ ಇಡಲಾಗಿತ್ತು. ಮಂಗಳವಾರ ಪೊಲೀಸ್ ವಾಹನದಲ್ಲಿ ಕೊಪ್ಪ ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಮಧ್ಯಾಹ್ನ 3 ಗಂಟೆಗೆ ಹಾಜರುಪಡಿಸಲಾಯಿತು.
2002ರಲ್ಲಿ ಶೃಂಗೇರಿ ಠಾಣೆಯಲ್ಲಿ ಸಿರಿಮನೆ ನಾಗರಾಜ್ ವಿರುದ್ಧ ದಾಖಲಾಗಿದ್ದ ಸರ್ಕಾರದ ವಿರುದ್ಧ ಕರಪತ್ರ ಹಂಚಿ, ಗಲಾಟೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪ ಜೆಎಂಎಫ್ಸಿ ನ್ಯಾಯಾಧೀಶ ರಾಜು ಅವರು, ನಾಗರಾಜ್‌ಗೆ ನಾಲ್ಕು ಷರತ್ತುಗಳನ್ನು ವಿಧಿಸಿ ಸಂಜೆ 5.30ಕ್ಕೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಆದೇಶಿಸಿದರು.
₨ 5 ಸಾವಿರ ನಗದು ಪಾವತಿಸಬೇಕು; ₨50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ಒದಗಿಸಬೇಕು; ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗವ-ಹಿಸಬಾರದು; ಈ ಪ್ರಕರಣದ ವಿಚಾರಣೆ ಮುಗಿಯುವರೆಗೆ ಶೃಂಗೇರಿ ಪೊಲೀಸ್ ಠಾಣೆಗೆ ವಾರಕ್ಕೊಮ್ಮೆ ಹಾಜರಾಗುವಂತೆ ಷರತ್ತು ವಿಧಿಸಿದರು.
ನೂರ್ ಜುಲ್ಫಿಕರ್ ಯಾನೆ ಶ್ರೀಧರ್ ವಿರುದ್ಧ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಗಂಭೀರ ಪ್ರಕರಣಗಳ ವಿಚಾರಣೆ ನಡೆಯಬೇಕಿದೆ. ಶೃಂಗೇರಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಸುಟ್ಟ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಜು, ನೂರ್‌ಗೆ ಜಾಮೀನು ನೀಡಲು ನಿರಾಕರಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರು.
ಈ ಪ್ರಕರಣದಲ್ಲಿ ಸರ್ಕಾರದ ಪರ ವಾದಿಸಿದ ಸಹಾಯಕ ಸರ್ಕಾರಿ ಅಭಿಯೋಜಕರಾದ ವಾಣಿ, ತಲೆಮರೆಸಿಕೊಂಡಿದ್ದ ಆರೋಪಿಗಳು ಇಷ್ಟೊಂದು ದೀರ್ಘ ಅವಧಿಯ ನಂತರ ನ್ಯಾಯಾಲಯದ ಎದುರು ಬಂದಿದ್ದಾರೆ. ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದರು.
ಸಿರಿಮನೆ ಮತ್ತು ನೂರ್ ಪರ ವಾದ ಮಂಡಿಸಿದ ವಕೀಲ ನಟಶೇಖರ್, ‘ನಮ್ಮ ಕಕ್ಷಿದಾರರು ಎಲ್ಲಿಗೂ ಓಡಿ ಹೋಗಿರಲಿಲ್ಲ. ನಾಗರಿಕ ಸಮಾಜಕ್ಕೆ ವಾಪಸ್ ಬರುತ್ತಿರುವುದಾಗಿ ಜಿಲ್ಲಾಡಳಿತದ ಎದುರು ಹಾಜರಾಗಿ, ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ನಾಗರಿಕ ಸಮಾಜದ ನಡುವೆ ಗೌರವದ ಬದುಕು ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಇಬ್ಬರೂ ಎಲ್ಲಿಗೂ ಓಡಿ ಹೋಗುವುದಿಲ್ಲ. ಇಬ್ಬರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಬೇಕು’ ಎಂದು ನ್ಯಾಯಾಧೀಶರ ಎದುರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಆಪಾದನೆ ಪ್ರಕರಣದ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ನೂರ್ ಜುಲ್ಫಿಕರ್ ವಿರುದ್ಧ ‘ಬಾಡಿ ವಾರೆಂಟ್’ಗೆ ಜಯಪುರ ಠಾಣೆ ಪಿಎಸ್‌ಐ ಸಿ.ಎಲ್. ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಈ ಇಬ್ಬರು ನಕ್ಸಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆ ಇದ್ದಿದ್ದರಿಂದ ಕೊಪ್ಪ ನ್ಯಾಯಾಲಯದ ಆವರಣ ವಿವಿಧ ಪಕ್ಷಗಳ ಮುಖಂಡರು, ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಗಿರಿಜನ ಸಂಘಟನೆಗಳ ಕಾರ್ಯಕರ್ತರಿಂದ ಕಿಕ್ಕಿರಿದಿತ್ತು.
ಪೊಲೀಸರು ಬಿಗಿ ಭದ್ರತೆಯಲ್ಲಿ ನೂರ್ ಮತ್ತು ಸಿರಿಮನೆಯವರನ್ನು ಬೆಳಿಗ್ಗೆ 11 ಗಂಟೆಗೆ ಕೊಪ್ಪ ನ್ಯಾಯಾಲಯಕ್ಕೆ ಕರೆತಂದಿದ್ದರು. ಆದರೆ, ಶೃಂಗೇರಿ ನ್ಯಾಯಾಲಯದಿಂದ ಈ ಇಬ್ಬರ ಪ್ರಕರಣದ ಕಡತಗಳು ಬರುವುದು ವಿಳಂಬವಾಗಿ, ಮಧ್ಯಾಹ್ನ 2.30ಕ್ಕೆ ನ್ಯಾಯಾಲಯ ತಲುಪಿದವು. 3 ಗಂಟೆಗೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ಅವಕಾಶ ನೀಡಿದರು. ನಂತರ ವಾದ, ಪ್ರತಿವಾದ ಆಲಿಸಿ, ಸಂಜೆವರೆಗೂ ಆದೇಶ ಕಾಯ್ದಿರಿಸಿದ್ದರು.
ಸಂಜೆ 5.30ಕ್ಕೆ ಸರಿಯಾಗಿ ಆದೇಶ ಹೊರಡಿಸಿದರು. ಜಾಮೀನು ಮಂಜೂರಾ ಗುತ್ತಿದ್ದಂತೆ ಸಿರಿಮನೆ ನಾಗರಾಜ್ ತಮ್ಮ ಹಿತೈಷಿಗಳು ಮತ್ತು ಕುಟುಂಬದ ಸದಸ್ಯರನ್ನು ಬಿಗಿತಪ್ಪಿಕೊಂಡು ‘ಸ್ವತಂತ್ರ ಹಕ್ಕಿ’ಯಂತೆ ಸಂತಸಪಟ್ಟರು. ನಿರೀಕ್ಷಿತ ಆದೇಶವನ್ನು ಮೊದಲೇ ಊಹಿಸಿದಂತಿದ್ದ ನೂರ್ ಜುಲ್ಫಿಕರ್ ನಿರಾಳ ಭಾವದಲ್ಲೇ ಮಾಧ್ಯಮ ಪ್ರತಿನಿಧಿಗಳ ಮುಂದೆ ಸಂದರ್ಶನಕ್ಕೆ ಎದುರಾದರು.
