ಮನೋರಂಜನೆ

ಎಲ್ಲ ವರ್ಗದ ಪ್ರೇಕ್ಷಕರ ಅಭಿರುಚಿಗೆ ತಕ್ಕ ಚಿತ್ರ ನಿರ್ಮಾಣ ಅಸಾಧ್ಯ: ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ

Pinterest LinkedIn Tumblr

pvec101214Film-02

ಬೆಂಗಳೂರು ಅಂತರರಾಷ್ಟ್ರೀಯ ಸಿನಿ­ಮೋತ್ಸವದ ಅಂಗವಾಗಿ ಸೋಮವಾರ ಇಲ್ಲಿ ನಡೆದ ‘ಹೊಸ ಅಲೆಯ ಚಿತ್ರಗಳು– ಹೊಸ ತಲೆಮಾರಿನ ನಿರ್ದೇ­ಶ­ಕರು’ ಕುರಿತ ಸಂವಾದದಲ್ಲಿ ‘ಹೊಸ ಅಲೆಯ ಚಿತ್ರಗಳು ಸಾಲುಸಾಲಾಗಿ ಬರುತ್ತಿದ್ದರೂ ಅವು ಎಲ್ಲ ವರ್ಗದ ಪ್ರೇಕ್ಷಕರನ್ನು ಏಕೆ ಸೆಳೆಯುತ್ತಿಲ್ಲ’ ಎಂಬ ಸಿನಿಮಾಸಕ್ತರೊಬ್ಬರ ಪ್ರಶ್ನೆಯು ಚರ್ಚೆಗೆ ಕಾರಣವಾಯಿತು.

‘ತಂತ್ರಜ್ಞಾನದಿಂದ ಚಿತ್ರ ನಿರ್ಮಾಣ ಸುಲಭವಾಗಿದೆ. ಕಥೆ ಹೇಳುವ ವಿಧಾನವೂ ಬದಲಾಗಿದೆ. ಆದರೆ ಎಲ್ಲ ವರ್ಗದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರ ನಿರ್ಮಾಣ ಮಾಡುವುದು ಅಸಾಧ್ಯ’ ಎಂದು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಹೇಳಿದರೆ, ‘ಗಟ್ಟಿಯಾದ ಕಥೆ ಇಲ್ಲದೇ ಹೋದರೆ ಸಿನಿಮಾ ಗೆಲುವು ಕಾಣುವುದು ಸಂಶಯ’ ಎಂದು ಮಹಾರಾಷ್ಟ್ರದ ಯುವ ನಿರ್ದೇಶಕ ಶ್ರೀಹರಿ ಸಾಠೆ ಪ್ರತಿಪಾದಿಸಿದರು. ಸಿದ್ಧ­ಸೂತ್ರಗಳಿಲ್ಲದೇ ಮಾಡುವ ಸಿನಿಮಾ, ಜನರನ್ನು ಕ್ರಮೇಣ ಸೆಳೆಯಲಿವೆ ಎಂಬ ಅಸ್ಸಾಮಿನ ನಿರ್ಮಾಪಕಿ ಹಾಗೂ ನಿರ್ದೇಶಕಿ ರಜನಿ ಬಸುಮತಾರಿ ಅವರ ವಿಶ್ವಾಸದ ನುಡಿಗೆ ಕೇರಳದ ನಿರ್ದೇಶಕ ಸಿದ್ಧಾರ್ಥ ಶಿವ ಸಮ್ಮತಿ ಸೂಚಿಸಿ, ‘ಹೊಸ ಬಗೆಯ ಚಿತ್ರಗಳಿಗೆ ಬಂಡವಾಳ ಹಾಕಲು ಸಿನಿಮಾಪ್ರಿಯರು ಮುಂದಾ­ಗುತ್ತಿದ್ದಾರೆ ಎಂಬುದೇ ಆಶಾದಾಯಕ ಬೆಳವಣಿಗೆ’ ಎಂದರು.

ಆನ್‌ಲೈನ್‌ ಪ್ರೇಕ್ಷಕರು: ಮಲ್ಟಿಫ್ಲೆಕ್ಸ್, ಎ, ಬಿ ಹಾಗೂ ಸಿ ಸೆಂಟರ್ ಪ್ರೇಕ್ಷಕರು ಎಂದು ವರ್ಗೀಕರಿಸಿರುವ ಬಗೆಯನ್ನು ರಕ್ಷಿತ್ ಶೆಟ್ಟಿ ವಿವರಿಸಿ, ತಾವು ‘ಉಳಿದ­ವರು ಕಂಡಂತೆ’ ಚಿತ್ರವನ್ನು ಮೊದಲಿನ ಎರಡು ವರ್ಗದವರಿಗೆ ನಿರ್ಮಿಸಿದ್ದಾಗಿ ಹೇಳಿದರು. ‘ಚಿತ್ರರಂಗದಲ್ಲಿನ ಎಲ್ಲ ನಿಯಮ–ಸೂತ್ರಗಳನ್ನೂ ಮುರಿದ ಪವನಕುಮಾರ್, ಲೂಸಿಯಾ ಚಿತ್ರ ನಿರ್ಮಿಸಿದರು. ಅದು ಸಾಂಪ್ರದಾಯಿಕ ವರ್ಗಗಳ ಜತೆಗೆ ಆನ್‌ಲೈನ್‌ ಪ್ರೇಕ್ಷಕರ ಗುಂಪನ್ನೂ ಸೃಷ್ಟಿಸಿತು’ ಎಂದು ಹೇಳಿದರು.

ಭಾರತ ಹಾಗೂ ಚೀನಾ ಹೊರತುಪಡಿಸಿ ಜಾಗತಿಕ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ ಒಂದು ದೊಡ್ಡ ವರ್ಗದ ಜನರು ಆನ್‌ಲೈನ್‌ ವಿಧಾನ ಅವಲಂಬಿಸಿದ್ದು, ಹೊಸ ತಲೆಮಾರಿನ ತಂತ್ರಜ್ಞರಿಗೆ ಇದು ಅನುಕೂಲ ಕಲ್ಪಿಸಿದೆ ಎಂದು ಶ್ರೀಹರಿ ಹೇಳಿದರು.

ರಜನಿ ಬಸುಮತಾರಿ, ‘ತಂತ್ರಜ್ಞಾನ ಸುಲಭವಾಗಿ ಕೈಗೆ ಸಿಕ್ಕ ಮೇಲೆ ನಿರ್ದೇ­ಶ­ಕರ ಮನೋಭಾವ ಕೂಡ ಬದಲಾಗಿದೆ. ವಿವಿಧ ತಾಂತ್ರಿಕ ಕೆಲಸಗಳನ್ನು ಕೆಲವರೇ ನಿರ್ವಹಿಸುತ್ತಿದ್ದ ಮನೋಭಾವ ಈಗಿಲ್ಲ. ನಿರ್ದೇಶಕನೇ ಈಗೆಲ್ಲ ಸಂಗೀತ, ಅಭಿನಯ, ಸಂಕಲನ ಇತ್ಯಾದಿ ಕ್ಷೇತ್ರ­ಗಳಲ್ಲೂ ಕೆಲಸ ಮಾಡುವಂತಾಗಿದೆ’ ಎಂದು ನುಡಿದರು.

ಪ್ರಾದೇಶಿಕ ಭಾಷೆ: ಹೊಸ ಅಲೆಯ ಚಿತ್ರಗಳು ಒಂದೇ ಬಗೆಯ ಭಾಷೆ ಬಳಸುವ ಕುರಿತು ಸಭಿಕರ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್ ಶೆಟ್ಟಿ, ‘ಮಂಡ್ಯ ಹಾಗೂ ಬೆಂಗಳೂರಿನ ಭಾಷೆ ಈಗ ಸಿನಿಮಾಗಳಲ್ಲಿ ಹೆಚ್ಚಾಗಿ ಬಳಕೆ­ಯಾಗುತ್ತಿದೆ. ನನ್ನ ಊರಿನ ಭಾಷೆ­ಯಿದ್ದ ‘ಉಳಿದವರು ಕಂಡಂತೆ’ ಚಿತ್ರ ಉತ್ತರ ಕರ್ನಾಟಕದವರಿಗೆ ಅಷ್ಟೊಂದು ಅರ್ಥವಾಗಲಿಲ್ಲ. ಪ್ರಾದೇಶಿಕ ಭಾಷೆ­ಯುಳ್ಳ ಐದಾರು ಸಿನಿಮಾಗಳು ಪ್ರತಿ ವರ್ಷವೂ ಬಂದರೆ ಪ್ರೇಕ್ಷಕರಿಗೆ ಎಲ್ಲ ಭಾಷೆಗಳ ಪರಿಚಯವಾಗಬಹುದು’ ಎಂದು ಅಭಿಪ್ರಾಯಪಟ್ಟರು.

ಕೇರಳ ಸಿನಿಮಾಗಳಲ್ಲಿ ಪ್ರಾದೇಶಿಕ ಭಾಷೆ ಅಷ್ಟೊಂದು ಪ್ರಾಮುಖ್ಯ ಪಡೆ­ದಿಲ್ಲ ಎಂದ ಸಿದ್ಧಾರ್ಥ ಶಿವ ಅವರು, ‘ನಿರ್ದೇ­ಶಕ­ನೊಬ್ಬ ತನ್ನಲ್ಲಿರುವ ಚಿತ್ರಕಥೆ ಯಾವುದು ಎಂದು ಹೇಳುವುದಕ್ಕಿಂತ ತನ್ನಲ್ಲಿ ಯಾವ ನಟನ ಕಾಲ್‌ಶೀಟ್‌ ಇದೆ ಎಂಬುದಕ್ಕಷ್ಟೇ ಮಹತ್ವ ಕೊಡು­ತ್ತಾನೆ’ ಎಂದು ಹೇಳಿ ನಗೆಯುಕ್ಕಿಸಿದರು.

Write A Comment