ಕರ್ನಾಟಕ

ಬೈಕ್ ಅಪಘಾತ: 4 ವಿದ್ಯಾರ್ಥಿಗಳ ದಾರುಣ ಸಾವು

Pinterest LinkedIn Tumblr

bike

ಮಧುಗಿರಿ: ಒಂದೇ ತರಗತಿಯಲ್ಲಿ ಓದುತ್ತಿದ್ದ 10ನೇ ಇಯತ್ತೆಯ ನಾಲ್ವರು ಗೆಳೆಯರು ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮುಂಭಾಗದಿಂದ ಬಂದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿ ಶನಿವಾರ ನಡೆದಿದೆ.

ಪಟ್ಟಣದ ಕಪ್ಪಣ್ಣ ಬೀದಿಯ ಶಿಕ್ಷಕ ರಾಜ್‌ಕುಮಾರ್ ಪುತ್ರ ಯದುನಂದನ್, ಕೆಆರ್ ಬಡಾವಣೆಯ ದಾದಿ ಪುತ್ರ ಅಭಿಜಿತ್, ಬೂರ‌್ಕನಹಟ್ಟಿಯ ರೈತನ ಮಗ ಹೇಮಂತ್ ಹಾಗೂ ಚೌಡೇಶ್ವರಿ ಗುಡಿ ಬೀದಿಯ ಪಾನಿಪುರಿ ವ್ಯಾಪಾರಿ ಚಂದ್ರಶೇಖರ್ ಪುತ್ರ ಶಶಿಧರ್ ಮೃತ ದುದೈವಿಗಳು. ಸೀಮಾಂಧ್ರದ ಮಡಕಶಿರಾ ತಾಲೂಕಿನ ಭಕ್ತರಹಳ್ಳಿ ಆಂಜನೇಯ ಹಾಗೂ ಜಿಲ್ಲಡಗುಂಟೆ ನರಸಿಂಹಸ್ವಾಮಿ ಜಾತ್ರೆಗೆ ತೆರಳಿ ವಾಪಸಾಗುತ್ತಿದ್ದಾಗ ಈ ದಾರುಣ ಘಟನೆ ಸಂಭವಿಸಿದೆ.

ಮೃತ ದೇಹಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ತರುವ ವೇಳೆಗಾಗಲೇ ಭಾರಿ ಸಂಖ್ಯೆಯ ಜನ ಜಮಾಯಿಸಿದ್ದರು. ಮತ ವಿದ್ಯಾರ್ಥಿಗಳ ಕುಟುಂಬದವರು ಹಾಗೂ ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನೆ ವಿವರ:
ತಾವು ಓದುತ್ತಿದ್ದ ಜೂಪಿಟರ್ ಶಾಲೆಗೆ ರಜಾ ಇದ್ದ ಕಾರಣ ಸ್ನೇಹಿತರೆಲ್ಲ ಒಗ್ಗೂಡಿ ಮನೆಯವರಿಗೂ ತಿಳಿಸದೆ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿಕೊಂಡು ಹೊಸಕೆರೆಯಲ್ಲಿರುವ ಸ್ನೇಹಿತ ತಮಿಳ್‌ಸೆಲ್ವನ್ ಮನೆಯಲ್ಲಿ ಮಧ್ಯಾಹ್ನ ಊಟ ಮಾಡಿ ಮಧುಗಿರಿಯತ್ತ ಪ್ರಯಾಣಿಸಿದ್ದರು. ಆರೇನಹಳ್ಳಿ-ಜಡೇಗೊಂಡನಹಳ್ಳಿ ಮಧ್ಯದಲ್ಲಿ ಬರುವ ಸೇತುವೆ ಸಮೀಪ ಲಾರಿಯನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾಗ ಮಧುಗಿರಿಯಿಂದ ಸೀಮಾಂದ್ರದ ಅಗಳಿ ಕಡೆ ತೆರಳುತ್ತಿದ್ದ ಶ್ರೀ ಗಣೇಶ್ ಬಸ್ ಬರುತ್ತಿದ್ದನ್ನು ಇವರು ಗಮನಿಸಿಲ್ಲ. ಇವರ ಬೈಕ್, ಬಸ್ಸಿನ ಮುಂಭಾಗದ ಬಂಪರ್‌ಗೆ ಡಿಕ್ಕಿ ಹೊಡೆದಿದೆ.

ಆಸ್ಪತ್ರೆಯಲ್ಲಿ ಜನ ಸಾಗರ :
ಘಟನಾ ಸ್ಥಳಕ್ಕೆ ಸಿಪಿಐ ಸಿ.ಗಿರೀಶ್‌ನಾಯ್ಕ, ಪಿಎಸ್‌ಐ ಎಂ.ಅಂಬರೀಶ್ ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್‌ಪಿ ಜಿ.ಗುರುಸ್ವಾಮಿ, ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ, ಸದಸ್ಯರಾದ ಎಂ.ಪಿ.ಗಣೇಶ್, ಶ್ರೀನಿವಾಸಮೂರ್ತಿ, ಮುಖಂಡ ಆರ್.ಎ.ನಾರಾಯಣ್, ಜೂಪಿಟರ್ ಸಂಸ್ಥೆಯ ಅಧ್ಯಕ್ಷ ಡಾ.ಜಿ.ಕೆ.ಜಯರಾಂ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪ್ರತಿಭಾವಂತ ಗೆಳೆಯರು
ಈ ನಾಲ್ವರು ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿದ್ದು, ಕಬ್ಬಡಿ, ಖೊ-ಖೋ ಮತ್ತು ಅಥ್ಲೆಟಿಕ್ಸ್‌ನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

Write A Comment