ಕರ್ನಾಟಕ

ಭವಿಷ್ಯದ ಚಿಂತೆ: ಹೆತ್ತ ಮಗು ಬೇಡವೆಂದ ಅವಿವಾಹಿತೆ

Pinterest LinkedIn Tumblr

baby

ಕುಷ್ಟಗಿ: ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಒಳಗಾದ ಆಕೆ, ತಾನು ಹೆತ್ತ ಶಿಶುವನ್ನು ಮನೆಗೆ ಕೊಂಡೊಯ್ಯಲು ನಿರಾಕರಿಸಿಬಿಟ್ಟಳು. ಕಾರಣ ಆಕೆ ಇಪ್ಪತ್ತು ವರ್ಷದ ಅವಿವಾಹಿತೆ. ಕರುಳ ಕುಡಿಯನ್ನು ಜತೆಗಿಟ್ಟುಕೊಂಡು ಸಮಾಜವನ್ನು ಎದುರಿಸಲಾಗದ ಅಸಹಾಯಕತೆ. ಈ ಒಂದು ವಿಚಾರವಾಗಿ ತನ್ನ ಮುಂದಿನ ಇಡೀ ಬದುಕು ಅಪಮಾನ ಅನುಭವಿಸಬೇಕಾದ ದುರ್ಗತಿ ನೆನೆದು ಕಣ್ಣೀರಿಟ್ಟಳು. ಕೊನೆಗೂ ಒಂದು ದೃಢ ನಿಶ್ಚಯಕ್ಕೆ ಬಂದಳು. ಒಂದು ನಿಮಿಷದ ಆಸೆಯಿಂದ ಜನಿಸಿದ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಇಡೀ ಬದುಕು ನರಳುವುದಿಲ್ಲ ಎಂಬ ಗಟ್ಟಿ ಮನಸ್ಸು ಮಾಡಿದಳು. ಕೋಡಿ ಹರಿಯುತ್ತಿದ್ದ ದುಃಖಕ್ಕೆ ಲಗಾಮು ಹಾಕಿ ತನ್ನ ಹಸುಳೆಯನ್ನು ಮಕ್ಕಳ ಆರೈಕೆ ಕೇಂದ್ರದ ಸುಪರ್ದಿಗೆ ಒಪ್ಪಿಸಿದಳು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಆಸ್ಪತ್ರೆಯಲ್ಲಿ ಮನಮಿಡಿಯುವ ಈ ಘಟನೆ ನಡೆಯಿತು. ಹೆರಿಗೆ ನೋವಿನ ಹಿನ್ನೆಲೆಯಲ್ಲಿ ಡಿ.4ರಂದು ಇಲ್ಲಿನ ತಾಲೂಕು ಆಸ್ಪತ್ರೆಗೆ ಸ್ಥಳೀಯ ಅವಿವಾಹಿತ ಯುವತಿಯೊಬ್ಬರು ದಾಖಲಾಗಿದ್ದರು. ಅದೇ ದಿನ ಸಂಜೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆಯಾಗುತ್ತಿದ್ದಂತೆ, ಮಗು ತನಗೆ ಬೇಡ ಎಂದು ಆಕೆ ರಚ್ಚೆ ಹಿಡಿದಳು. ಜತೆಗೆ ಬಂದಿದ್ದ ಆಕೆಯ ಸಹೋದರಿಯೂ ಕೈಚೆಲ್ಲಿದಳು.

ಬೇರೆ ಏನಾದರೂ ದಾರಿ ಹುಡುಕದಿದ್ದರೆ ಮಗುವಿನ ಜೀವಕ್ಕೆ ಅಪಾಯ ಎಂದುಕೊಂಡ ವೈದ್ಯಾಧಿಕಾರಿ ಡಾ.ಕೆ.ಎಸ್.ರೆಡ್ಡಿ ಅವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರು. ಮಕ್ಕಳ ಕಲ್ಯಾಣ ಸಮಿತಿಯವರು ಮತ್ತು ಸಿಡಿಪಿಒ ಕಚೇರಿ ಸಿಬ್ಬಂದಿ ಮಗುವಿನ ತಾಯಿ, ಸಹೋದರಿಯೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರೂ ಫಲ ಸಿಗಲಿಲ್ಲ. ಹಾಗಾಗಿ ಡಿ.6ರಂದು ಬೆಳಗ್ಗೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ಸಮ್ಮುಖದಲ್ಲಿ ಮಗುವನ್ನು ವಿಜಯಪುರದ ಮಕ್ಕಳ ಆರೈಕೆ ಕೇಂದ್ರಕ್ಕೆ ಒಪ್ಪಿಸಲಾಯಿತು.

ಆ ಯುವತಿ ಜತೆ ಚಾಲಕನೊಬ್ಬ ದೈಹಿಕ ಸಂಬಂಧ ಬೆಳೆಸಿದ್ದ. ಆದರೆ ಬಳಿಕ ಮದುವೆಯಾಗಲು ನಿರಾಕರಿಸಿದ ಎನ್ನಲಾಗಿದೆ. ಆಕೆಯ ತಾಯಿ ಚಿಂದಿ ಆಯ್ದು ಜೀವನ ನಡೆಸುತ್ತಿದ್ದಾಳೆ. ತಂದೆ ಬದುಕಿಲ್ಲ. ಈಕೆಗೆ ಒಬ್ಬ ಗಂಡು ಮತ್ತು ಮಗು ಹೆತ್ತ ಈ ಯುವತಿ ಸೇರಿ ಆರು ಪುತ್ರಿಯರಿದ್ದಾರೆ.
—–

ಇಂತಹ ಸಂಕೀರ್ಣ ಸಂದರ್ಭದಲ್ಲಿ ಮಗುವಿನ ರಕ್ಷಣೆಯತ್ತ ಸಮಿತಿ ಮೊದಲ ಆದ್ಯತೆ ನೀಡುತ್ತದೆ. ತಾಯಿಗೆ ಬೇಡವಾದ ಮಗು ಬೀದಿ ಪಾಲಾಗದಿರಲಿ ಎಂಬ ಉದ್ದೇಶದಿಂದ ಮಕ್ಕಳ ಆರೈಕೆ ಕೇಂದ್ರಕ್ಕೆ ಕೊಡುತ್ತಿದ್ದೇವೆ. ಅಲ್ಲಿ 60 ದಿನಗಳ ಆರೈಕೆಯ ಬಳಿಕ ಕಾನೂನುಬದ್ಧವಾಗಿ ಮಗುವನ್ನು ದತ್ತು ನೀಡಲಾಗುತ್ತದೆ.
* ಮಹಾಲಿಂಗಪ್ಪ ದೋಟಿಹಾಳ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ, ಕುಷ್ಟಗಿ

Write A Comment