ಕರ್ನಾಟಕ

ರಾಜ್ಯ ಹೆದ್ದಾರಿಗಳಲ್ಲಿನ ಪಯಣಕ್ಕೂ ಇನ್ನು ಸುಂಕ: ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ

Pinterest LinkedIn Tumblr

higyಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಸಿಯೇ ಓಡಾಡಬೇಕಾಗಿದ್ದ ಪರಿಸ್ಥಿತಿ ಇನ್ನು ಮುಂದೆ ಖಾಸಗಿ-ಸರಕಾರಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸುವ ರಾಜ್ಯ ಹೆದ್ದಾರಿಗಳಲ್ಲೂ ಜಾರಿಗೆ ಬರಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಖಾಸಗಿ-ಸಾರ್ವಜನಿಕ ಸಹಭಾಗಿತ್ವದಡಿ ಅಭಿವೃದ್ಧಿಪಡಿಸುವ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಪದ್ಧತಿ ಅನುಷ್ಠಾನಗೊಳಿಸಲು ಸಮ್ಮತಿ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ಪ್ರಸ್ತಾವನೆಯಲ್ಲಿ ಜಿಲ್ಲಾ ಮುಖ್ಯರಸ್ತೆ(ಜಿಮುರ)ಗಳಲ್ಲೂ ಟೋಲ್ ಸಂಗ್ರಹಿಸಲು ಅನುಮತಿ ಕೋರಲಾಗಿತ್ತು. ಅದನ್ನು ಸ್ಪಷ್ಟವಾಗಿ ಸರಕಾರ ನಿರಾಕರಿಸಿದ್ದು, ರಾಜ್ಯ ಹೆದ್ದಾರಿಗಳಲ್ಲಿ ಮಾತ್ರ ಟೋಲ್ ವಸೂಲಿಗೆ ಸಮ್ಮತಿ ಸೂಚಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಚಿವ ಸಂಪುಟ ಸಭೆಯ ನಿರ್ಣಯಗಳ ಕುರಿತು ವಿವರ ನೀಡಿದ ಕಾನೂನು ಸಚಿವ ಟಿ ಬಿ ಜಯಚಂದ್ರ, ”ರಸ್ತೆ ವ್ಯವಸ್ಥೆ ಸುಧಾರಣೆಗೆ ಬೃಹತ್ ಅನುದಾನ ಬೇಕಾಗಿರುವುದರಿಂದ ಸರಕಾರ ಎಲ್ಲವನ್ನೂ ಭರಿಸಲು ಸಾಧ್ಯವಿಲ್ಲ. ಖಾಸಗಿ ಸಹಭಾಗಿತ್ವದ ಬಂಡವಾಳವನ್ನೂ ಬಳಸಿಕೊಳ್ಳಬೇಕಾಗುತ್ತದೆ. ಈಗಾಗಲೇ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ನಡೆಯುತ್ತಿದೆ. ಬದಲಾದ ಕಾಲಘಟ್ಟದಲ್ಲಿ ರಸ್ತೆಗೆ ಬಳಕೆ ಶುಲ್ಕ ವಿಧಿಸುವುದು ಅನಿವಾರ್ಯ. ಅದಕ್ಕಾಗಿ ಕರ್ನಾಟಕ ರಸ್ತೆ ಬಳಕೆ ಶುಲ್ಕ (ಬಳಕೆ ಶುಲ್ಕ ದರ ನಿರ್ಧಾರ ಹಾಗೂ ಸಂಗ್ರಹಣೆ) ನಿಯಮಗಳಿಗೆ ತಿದ್ದುಪಡಿ ತರಬೇಕಾಗಿದೆ,” ಎಂದರು.

”ವಿಧೇಯಕವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗುವುದು. ಯಾವ ರಸ್ತೆಯನ್ನು ಟೋಲ್ ಸಂಗ್ರಹಕ್ಕೆ ಒಳಪಡಿಸಬೇಕು, ಎಷ್ಟು ಶುಲ್ಕ ನಿಗದಿ ಮಾಡಬೇಕು ಎಂಬುದನ್ನು ಲೋಕೋಪಯೋಗಿ ಇಲಾಖೆ ನಿರ್ಧರಿಸಿ ಪ್ರತ್ಯೇಕ ಆದೇಶ ಹೊರಡಿಸಿದೆ. ನೀತಿಯ ಬದಲಾವಣೆಗಷ್ಟೇ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. ಎಲ್ಲಾ ರಾಜ್ಯ ಹೆದ್ದಾರಿಗಳನ್ನೂ ಟೋಲ್ ವ್ಯಾಪ್ತಿಗೆ ಒಳಪಡಿಸಲಾಗುವುದು,” ಎಂದರು.

ರೈತರಿಗೆ ಹೆಚ್ಚು ಪರಿಹಾರ
ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದ ಬಳಿಕ ಪರಿಷ್ಕೃತ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದು, ಸರಕಾರ ಭೂಮಿ ಸ್ವಾಧೀನಪಡಿಸಿಕೊಳ್ಳುವ ರೈತರಿಗೆ ನಾಲ್ಕು ಪಟ್ಟು ಹೆಚ್ಚಿನ ಪರಿಹಾರ ಸಿಗಲಿದೆ ಎಂದು ಜಯಚಂದ್ರ ಹೇಳಿದರು.

ಪ್ರಮುಖ ನಿರ್ಣಯಗಳು
-ಪಿರಿಯಾಪಟ್ಟಣ, ಹಳಿಯಾಳ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ

-ಕಾಡುಗೊಲ್ಲ, ಹಟ್ಟಿ ಗೊಲ್ಲ ಸಮುದಾಯಗಳನ್ನು ಎಸ್‌ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು

-ಕರ್ನಾಟಕ ನ್ಯಾಯಾಂಗ ಸೇವೆ(ನೇಮಕ)ನಿಯಮಗಳು-2014ಗೆ ತಿದ್ದುಪಡಿ ತಂದು ಜಿಲ್ಲಾ ನ್ಯಾಯಾಧೀಶ ಹುದ್ದೆಗಿಂತ ಕೆಳಹಂತದ ನ್ಯಾಯಾಧೀಶರ ನೇಮಕದಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್, ಕೋರ್ಟ್‌ನ ಸಿಬ್ಬಂದಿ, ವಿಕಲಚೇತನರಿಗೆ ನ್ಯಾಯಾಧೀಶರಾಗಲು ಅವಕಾಶ

-ಕಡೂರು-ಚಿಕ್ಕಮಗಳೂರು-ಸಕಲೇಶಪುರ ರೈಲು ಮಾರ್ಗದ ಸರಸ್ವತಿಪುರ ಮಾರ್ಗದ ಚೈನೇಜ್ 6350ರಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಮೇಲುರಸ್ತೆ

-ಮೈಸೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳಿಗೆ 100 ಕೋಟಿ ರೂ. ಅನುದಾನ, ಜಲದರ್ಶಿನಿ ಅತಿಥಿಗೃಹದಲ್ಲಿ ವಿಐಪಿಗಳಿಗಾಗಿ ವಿಶೇಷ ಕೊಠಡಿ ನಿರ್ಮಾಣ

-ಉಡುಪಿ ಜಿಲ್ಲೆ ಕೊಡೇರಿ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರಿಕೆ ಪ್ರೋತ್ಸಾಹಿಸಲು 33 ಕೋಟಿ ರೂ. ವೆಚ್ಚದಲ್ಲಿ ಬ್ರೇಕ್‌ವಾಟರ್ ನಿರ್ಮಾಣ ಕಾಮಗಾರಿಗೆ ಅನುಮೋದನೆ

-ಯಲಹಂಕದಿಂದ ಆಂಧ್ರಪ್ರದೇಶದ ಗಡಿವರೆಗಿನ ರಾಜ್ಯ ಹೆದ್ದಾರಿ-09ರಲ್ಲಿ ದೊಡ್ಡಬಳ್ಳಾಪುರ-ಗೌರಿಬಿದನೂರು ಮಾರ್ಗವಾಗಿ 152 ಕೋಟಿ ರೂ. ವೆಚ್ಚದಲ್ಲಿ ಸುಮಾರು 76 ಕಿ.ಮೀ. ರಸ್ತೆಯನ್ನು ಚತುಷ್ಪಥವಾಗಿಸುವ ಕಾಮಗಾರಿಗೆ ಒಪ್ಪಿಗೆ

-ಸಚಿವಾಲಯ ಸುಧಾರಣೆಗೆ 10-30 ಸದಸ್ಯರಿರುವ ಸಲಹಾ ಸಮಿತಿ ರಚನೆಗೆ ತೀರ್ಮಾನ. ಮೊದಲ ಹಂತದಲ್ಲಿ ಕಾನೂನು ಮತ್ತು ಸಂಸದೀಯ ಇಲಾಖೆಯಲ್ಲಿ ರಚನೆಗೆ ಸಂಪುಟ ಸಭೆ ಅನುಮೋದನೆ. ಬಳಿಕ ಎಲ್ಲಾ ಸಚಿವಾಲಯಗಳಲ್ಲೂ ಜಾರಿ

-ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಕಬಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹುಲ್ಲಹಳ್ಳಿ ಅಣೆಕಟ್ಟೆ ಅಡಿಯಲ್ಲಿ ಹುಲ್ಲಹಳ್ಳಿ ನಾಲೆಯ ಆಧುನೀಕರಣಕ್ಕೆ 99 ಕೋಟಿ ರೂ.ಗಳ ಸಮಗ್ರ ಯೋಜನಾ ವರದಿಗೆ ಸಹಮತ

-ಹೊಸದಾಗಿ 100 ಪಶುಚಿಕಿತ್ಸಾಲಯ ಆರಂಭ ಹಾಗೂ 100 ಪ್ರಾಥಮಿಕ ಪಶು ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ

-ಬೆಳಗಾವಿ, ಮೈಸೂರು, ಕಲಬುರಗಿ, ತುಮಕೂರಿನಲ್ಲಿ ಜಾನುವಾರು ಚಿಕಿತ್ಸೆಗಾಗಿ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರಿನ ಕಂಟೋನ್ಮೆಂಟ್ ಬಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಹೆಬ್ಬಾಳದ ನಾಲ್ಕು ಎಕರೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಪಶುಭವನ ನಿರ್ಮಾಣ

-ಪಶ್ಚಿಮ ಬಂಗಾಳದ ದಿಯೋಚ-ಪಚಾಮಿಯಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿರುವ ಕಲ್ಲಿದ್ದಲು ನಿಕ್ಷೇಪದ ಅಭಿವೃದ್ಧಿಗಾಗಿ ದಿಯೋಚ ಪಚಾಮಿ ಕೋಲ್ ಲಿಮಿಟೆಡ್ ಸ್ಥಾಪಿಸಲು ತೀರ್ಮಾನ

-ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ, ನಾನಾ ಕೋರ್ಸ್ ಆರಂಭಿಸಲು ಸಮ್ಮತಿ

-ಪಶು ವೈದ್ಯಕೀಯ ವಿವಿಯ ಆಡಳಿತ ಮಂಡಳಿ ಸದಸ್ಯರ ನೇಮಕದಲ್ಲಿ ರಾಜ್ಯಪಾಲರಿಗೆ ನಾಲ್ಕು ಹಾಗೂ ಸರಕಾರಕ್ಕೆ ನಾಲ್ಕು ಸದಸ್ಯರ ನೇಮಿಸುವ ಅಧಿಕಾರ ನೀಡಲು ಕಾಯಿದೆ ತಿದ್ದುಪಡಿ.

Write A Comment