ಕರ್ನಾಟಕ

ಅಂಬೇಡ್ಕರ್ 58 ನೇ ಮಹಾ ಪರಿ­ನಿರ್ವಾಣ ದಿನ: ಅನುದಾನ ದುರ್ಬಳಕೆ ತಡೆಗೆ ಕ್ರಮ: ರಾಜ್ಯ ಪರಿ­ಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಬಸಣ್ಣ ಛಲವಾದಿ

Pinterest LinkedIn Tumblr

pvec7decsBRA 02

 

ಬೆಂಗಳೂರು: ‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ನೀಡಲಾಗುತ್ತಿರುವ ಅನು­ದಾನ ದುರ್ಬಳಕೆ ಆಗುತ್ತಿದ್ದು, ಅದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಪರಿ­ಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಬಸಣ್ಣ ಛಲವಾದಿ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಡಾ.ಬಿ.­ಆರ್‌.­ಅಂಬೇಡ್ಕರ್ ಅವರ 58 ನೇ ಮಹಾ ಪರಿ­ನಿರ್ವಾಣ ದಿನದ ಅಂಗವಾಗಿ ನಗರದಲ್ಲಿ ಶನಿ­ವಾರ ಏರ್ಪಡಿಸಿದ್ದ ‘ಸಮರ್ಪಣಾ ಸಮಾವೇಶ’­ದಲ್ಲಿ ಅವರು ಮಾತನಾಡಿದರು.

‘ಅನುದಾನ ದುರ್ಬಳಕೆ ಬಗ್ಗೆ ಸಾಕಷ್ಟು ದೂರು­ಗಳು ಬಂದಿವೆ. ಅಲ್ಲದೇ, ಬಿಡುಗಡೆ­ಯಾಗಿರುವ ಅನು­ದಾನ ಸಹ ಸಮರ್ಪಕವಾಗಿ ಬಳಕೆ­ಯಾ­ಗುತ್ತಿಲ್ಲ. ದಲಿತರ ಹೆಸರಿನಲ್ಲಿ ಮೇಲ್ವರ್ಗದವರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ರಾಜ್ಯದಾ­ದ್ಯಂತ ಪ್ರವಾಸ ಮಾಡಿ ಅದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕಂಬಾಲಪಲ್ಲಿಯಲ್ಲಿ ದಲಿತರ ಸಜೀವ ದಹನ ಪ್ರಕರಣಕ್ಕೆ ಸಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. ದಲಿತರು ಸಂಘಟಿತರಾಗದಿರುವುದು ಇದಕ್ಕೆ ಕಾರಣ. ಹೀಗಾಗಿ ಎಲ್ಲ ಸಂಘಟನೆಗಳು ಒಂದಾಗಿ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು.

ಸಮಿತಿಯ ರಾಜ್ಯ ಘಟಕದ ಸಂಚಾಲಕ ಡಿ.ಜಿ.ಸಾಗರ್‌ ಮಾತನಾಡಿ, ‘ಅಂಬೇಡ್ಕರ್‌ ಅವರು ಬೌದ್ಧ ಧರ್ಮ ಸೇರಿದರು ಎಂಬ ಕಾರಣಕ್ಕೆ ಬುದ್ಧನ ಉದಾತ್ತ ಚಿಂತನೆಗಳನ್ನು ಕಡೆಗಣಿಸಲಾಗುತ್ತಿದೆ. ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ದಲಿತರ ಸ್ಥಿತಿ ಬದಲಾಗಿಲ್ಲ. ಅಸಮಾನತೆ, ಅಸ್ಪೃಶ್ಯತೆ ಆಚರಣೆಗಳು ಇಂದಿಗೂ ಜೀವಂತವಾಗಿವೆ’ ಎಂದರು.

‘ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಅಭಿ­ಯಾನ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಅದರ ಜೊತೆಗೆ ಬಡತನ, ನಿರು­ದ್ಯೋಗ, ಅಸ್ಪೃಶ್ಯತೆಯಂತಹ ಸಮಸ್ಯೆಗಳನ್ನು ಹೋಗ­ಲಾಡಿಸಲು ಯೋಜನೆ ರೂಪಿಸಬೇಕು’ ಎಂದರು.

ಮಹಾ ಪರಿನಿರ್ವಾಣ ದಿನಾಚರಣೆ
ಡಾ.ಬಿ.ಆರ್.ಅಂಬೇಡ್ಕರ್‌ ಅವರ 58ನೇ ಮಹಾ ಪರಿನಿರ್ವಾಣ ದಿನವನ್ನು ನಗರದಲ್ಲಿ ವಿವಿಧ ಸಂಘಟನೆಗಳು ಶನಿವಾರ ಆಚರಿಸಿದವು.
ದಲಿತ ಸಂರಕ್ಷ ಸಮಿತಿಯ ಸದಸ್ಯರು ಬೈಕ್‌ ಜಾಥಾ ನಡೆಸುವ ಮೂಲಕ ಅಂಬೇಡ್ಕರ್‌ ಅವರ ಸಂದೇಶಗಳನ್ನು ಸಾರಿದರು. ಬಹುಜನ ವಿದ್ಯಾರ್ಥಿ ಸಂಘದ (ಬಿವಿಎಸ್‌) ಸದಸ್ಯರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಪರಿ­ನಿರ್ವಾಣ ದಿನವನ್ನು ಆಚರಿಸಿದರು. ಬೆಂಗ­ಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.­ಅಂಬೇ­ಡ್ಕರ್‌ ಅಧ್ಯಯನ ಕೇಂದ್ರದ ವತಿಯಿಂದ ಆಯೋ­ಜಿ­ಸಿದ್ದ ಕಾರ್ಯಕ್ರಮದಲ್ಲಿ ‘ಪ್ರಜ್ಞಾ’ ವಿಶೇಷ ತ್ರೈ­ಮಾಸಿಕ ಸಂಚಿಕೆಯನ್ನು ಬಿಡುಗಡೆ ಮಾಡ­ಲಾ­ಯಿತು. ಕೇಂದ್ರದ ನಿರ್ದೇಶಕ ಡಾ.ಸಿದ್ದ­ಲಿಂಗಯ್ಯ ಅವರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದಲಿತ ಸಂಘರ್ಷ ಸಮಿತಿಯ (ಸಮತಾವಾದ)­ವತಿಯಿಂದ ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನವನ್ನು ‘ಸ್ವಾಭಿಮಾನಿ ಸಂಕಲ್ಪ’ ದಿನವನ್ನಾಗಿ ಆಚರಿಸಲಾಯಿತು.  ಕಾರ್ಯಕ್ರಮದ ಅಂಗವಾಗಿ  ಸಮಿತಿಯ ಸದಸ್ಯರು ಮೈಸೂರು ಬ್ಯಾಂಕ್‌ ವೃತ್ತದಿಂದ ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ಸಂಘಟನೆಯ ಸದಸ್ಯರು ನಗರದ ಜೈಭೀಮ್‌ ಭವನದಲ್ಲಿ ಪರಿನಿರ್ವಾಣ ದಿನವನ್ನು ಆಚರಿಸಿ­ದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ­ಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ಮಟ್ಟು ಅವರು ‘ಖಾಸಗೀಕರಣ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು. ಗ್ರಾಮಭಾರತ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸೇರಿ ವಿವಿಧ ಸಂಘಟನೆಗಳ ಸದ­ಸ್ಯರು ಸಹ ಮಹಾಪರಿನಿರ್ವಾಣ ದಿನವನ್ನು ಆಚರಿಸಿದವು.

Write A Comment