ಕರ್ನಾಟಕ

ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳ ಅಧ್ಯಯನ: ಕಾರ್ಯಪಡೆ ರಚನೆಗೆ ಸರ್ಕಾರಕ್ಕೆ ಶಿಫಾರಸು

Pinterest LinkedIn Tumblr

pvec7decsGGK 10

ಬೆಂಗಳೂರು: ಹವಾಮಾನ ಬದಲಾವಣೆಯಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ, ಸೂಕ್ತ ಸಲಹೆಗಳನ್ನು ನೀಡಲು ಅಂತರ ಇಲಾಖಾ ಹಸಿರು ಬೆಳವಣಿಗೆ ಕಾರ್ಯಪಡೆ ರಚಿಸಲು ಬೆಂಗಳೂರು ಹವಾಮಾನ ಬದಲಾವಣೆ ಸಂಸ್ಥೆ (ಬಿಬಿಸಿಸಿಐ–ಕೆ) ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬಿಸಿಸಿಐ–ಕೆ ಮತ್ತು ಜಾಗತಿಕ ಹಸಿರು ಬೆಳವಣಿಗೆ ಸಂಸ್ಥೆ (ಜಿಜಿಜಿಐ) ಜಂಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ‘ಹಸಿರು ಅಭಿವೃದ್ಧಿಯ ಪಥ’ ಎನ್ನುವ ವರದಿಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ಈ ಅಂಶವನ್ನು ಪ್ರಸ್ತಾಪಿಸಲಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿಯನ್ನು ಬಿಡುಗಡೆ ಮಾಡಿದರು.
‘ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುವುದಕ್ಕೂ ಮುನ್ನ ಅದರಿಂದ ಪರಿಸರದ ಮೇಲೆ ಏನೆಲ್ಲ ಪರಿಣಾಮಗಳು ಆಗುತ್ತವೆ ಎಂಬುದನ್ನು ಈ ಕಾರ್ಯಪಡೆ ಅಧ್ಯಯನ ನಡೆಸಲಿದೆ. ಬಳಿಕ ಪರಿಸರಕ್ಕೆ ಹೆಚ್ಚು ಹಾನಿಯಾಗದಂತೆ ಯಾವ ರೀತಿಯಲ್ಲಿ ಅಂತಹ ಯೋಜನೆಗಳನ್ನು ಜಾರಿ ಮಾಡಬಹುದು ಎಂಬುದಕ್ಕೆ ಇದು ಸಲಹೆಗಳನ್ನೂ ನೀಡಲಿದೆ. ಇದು ಕಾರ್ಯಕಾರಿ ಸಮಿತಿಯ ಹಾಗೆ ಕಾರ್ಯನಿರ್ವಹಿಸಲಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ರಾಜ್ಯದಲ್ಲಿ ಹಸಿರು ಬೆಳವಣಿಗೆಗೆ ಖಾಸಗಿ ಸಂಸ್ಥೆಗಳ ಸಹಕಾರ ಅಗತ್ಯ ಇದೆ’ ಎಂದು ಅಭಿಪ್ರಾಯಪಟ್ಟರು.
ಇಂಧನ ಸಚಿವ ಡಿ.ಕೆ.ಶಿವಕುಮಾರ ಮಾತನಾಡಿ, ‘ಹಸಿರು ಉಳಿಸುವ ಸಲುವಾಗಿ ನಮ್ಮ ಸರ್ಕಾರ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಆದ್ಯತೆ ನೀಡಿದೆ. ಸೌರ ವಿದ್ಯುತ್‌ ಉತ್ಪಾದನೆಗೆ 11,700 ರೈತರು ಅರ್ಜಿ ಸಲ್ಲಿಸಿದ್ದು, ಇದರಿಂದ 20 ಸಾವಿರ ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಬಹುದು’ ಎಂದರು.

ವಿಧಾನ ಪರಿಷತ್‌ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಜಿಜಿಜಿಐ ಮುಖ್ಯಸ್ಥ ಸಿದ್ದಾರ್ಥ ಬಾಲಸುಬ್ರಹ್ಮಣ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ಎಚ್‌. ಮಹೇಶಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಬೆಂಗಳೂರು ಹವಾಮಾನ ಬದಲಾವಣೆ ಸಂಸ್ಥೆ ಅಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್‌ ಸ್ವಾಗತಿಸಿದರು.

ವರದಿಯಲ್ಲಿನ ಪ್ರಮುಖ ಅಂಶಗಳು
* ಹಸಿರು ಬೆಳವಣಿಗೆ ಯೋಜನೆಗಳ ಅನುಷ್ಠಾನಕ್ಕೆ ಸಂಶೋಧನಾ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸಹಕಾರ ಪಡೆಯುವುದು.

*  ಹಸಿರು ಮನೆ ಅನಿಲ (ಜಿಎಚ್‌ಜಿ) ಇದೇ ಸ್ಥಿತಿಯಲ್ಲಿ ಹೆಚ್ಚಾದರೆ 2030ರ ವೇಳೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿನ ತಾಪಮಾನ 1.5ರಿಂದ 2 ಡಿಗ್ರಿ ಸೆಲ್ಷಿಯಸ್‌ನಷ್ಟು ಹೆಚ್ಚಾಗಲಿದೆ.

*  ಸೇವಾ ವಲಯಗಳ ಅಧಿಕ ಬೆಳವಣಿಗೆಯಿಂದ ಬೆಂಗಳೂರಿನ ವಾಣಿಜ್ಯ ಕಟ್ಟಡಗಳ ವಿಸ್ತೀರ್ಣ 2030ರ ಹೊತ್ತಿಗೆ 100 ದಶಲಕ್ಷ ಚದರ ಅಡಿ ತಲುಪಲಿದೆ.

* ಆಧುನಿಕ ತಂತ್ರಜ್ಞಾನದಿಂದ ವಿದ್ಯುತ್‌ ಬೇಡಿಕೆಯನ್ನು ಕಡಿಮೆ ಮಾಡುವುದರ ಕಡೆ ಗಮನಹರಿಸಬೇಕು.

*  2030ರ ವೇಳೆಗೆ ರಾಜ್ಯದ 35 ದಶಲಕ್ಷ ಜನರು ನಗರಗಳಲ್ಲಿ ವಾಸಿಸುತ್ತಿರುತ್ತಾರೆ.

*  2030ರ ವೇಳೆಗೆ ರಾಜ್ಯದ ವಿದ್ಯುತ್‌ ಬೇಡಿಕೆ ನಾಲ್ಕು ಪಟ್ಟು ಹೆಚ್ಚಲಿದೆ. ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡದಿದ್ದರೆ ಕಲ್ಲಿದ್ದಲಿನಿಂದ ವಿದ್ಯುತ್‌ ಉತ್ಪಾದಿಸುವ ಪ್ರಮಾಣ ಹೆಚ್ಚಿಸಬೇಕಾಗುತ್ತದೆ. ಇದರಿಂದ ಪರಿಸರದ ಮೇಲೂ ಪರಿಣಾಮ ಬೀರಲಿದೆ.

*  ಅಕಾಲಿಕ ಮಳೆ ಮತ್ತು ಪದೇ ಪದೇ ಎದುರಾಗುವ ಬರಗಾಲದಿಂದ ಕೃಷಿ ಉತ್ಪಾದನೆ ಕುಂಠಿತವಾಗಲಿದೆ.

Write A Comment