ಕರ್ನಾಟಕ

ಹೆಗ್ಗಣಗಳ ಪಾಲಾದ ಲೆವಿ ಭತ್ತ: ಪಡಿತರ ವಿತರಣೆಗಾಗಿ ಸಂಗ್ರಹಿಸಿದ್ದ 5 ಲಕ್ಷ ಕ್ವಿಂಟಲ್‌

Pinterest LinkedIn Tumblr

pvec05dec2014mnd1

ಮಂಡ್ಯ: ಪಡಿತರ ಮೂಲಕ ವಿತರಿಸಲೆಂದು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದ್ದ 4.94 ಲಕ್ಷ ಕ್ವಿಂಟಲ್‌ ಭತ್ತವು ಜಿಲ್ಲೆಯ 93 ಗೋದಾಮುಗಳಲ್ಲಿ ಈ ವರ್ಷದ ಮಾರ್ಚ್‌ನಿಂದ ಬಳಕೆಯಾ­ಗದೆ ಹಾಗೆಯೇ ಉಳಿದಿದ್ದು, ತೇವಾಂಶ­ದಿಂದಾಗಿ ಒಂದಷ್ಟು ಹಾಳಾ­ಗಿದ್ದರೆ, ಇನ್ನಷ್ಟು ಇಲಿ, ಹೆಗ್ಗಣಗಳ ಪಾಲಾ­ಗುತ್ತಿದೆ.

ರಾಜ್ಯ ಸರ್ಕಾರವು ಆಹಾರ ನಿಗಮದ ಮೂಲಕ ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ರೂ. 1,600ರಂತೆ ರೂ. 86,56 ಕೋಟಿ ವೆಚ್ಚದಲ್ಲಿ ಭತ್ತ ಖರೀದಿಸಿದೆ. ಆದರೆ, ಅದನ್ನು ಅಕ್ಕಿಯಾಗಿ ಬಳಸಿಕೊಳ್ಳದೇ ಗೋದಾಮು­ಗಳಲ್ಲಿಯೇ ಬಿಡಲಾಗಿದೆ. ಕಳೆದ ವರ್ಷ ಮುಕ್ತ ಮಾರುಕಟ್ಟೆ­ಯಲ್ಲಿ ಪ್ರತಿ ಕ್ವಿಂಟಲ್‌ಗೆ ರೂ. 1,300ರಿಂದ ರೂ. 1,400 ದರದಲ್ಲಿ ಭತ್ತ ಮಾರಾಟ­ವಾಗುತ್ತಿತ್ತು.

ರಾಜ್ಯ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ರೂ. 1,600 ಬೆಂಬಲ ಬೆಲೆ ಕೊಟ್ಟು ಖರೀದಿಸಲಾರಂಭಿಸಿದ್ದರಿಂದ 5.41 ಲಕ್ಷ ಕ್ವಿಂಟಲ್‌ ಭತ್ತ ಸಂಗ್ರಹ­ವಾಗಿತ್ತು. ಅದರಲ್ಲಿ ಕೇವಲ 47 ಸಾವಿರ ಕ್ವಿಂಟಲ್‌ನಷ್ಟು ಭತ್ತವನ್ನು ಹಲ್ಲಿಂಗ್‌ (ಭತ್ತವನ್ನು ಅಕ್ಕಿ ಮಾಡುವುದು) ಮಾಡಿಸಲಾಗಿದೆ.
ಜಿಲ್ಲೆಯ 93 ಗೋದಾಮುಗಳಲ್ಲಿ ಭತ್ತ ಸಂಗ್ರಹಿಸಿಡಲಾಗಿದೆ. ಸಂಗ್ರಹಕ್ಕೆ ಜಾಗವಿಲ್ಲ ಎಂಬ ಕಾರಣಕ್ಕೆ ಕೊನೆ ದಿನಗಳಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಯನ್ನೇ ನಿಲ್ಲಿಸಲಾಗಿತ್ತು. ಖಾಸಗಿ ಗೋದಾಮುಗಳಲ್ಲಿ ಭತ್ತವನ್ನು ಸಂಗ್ರಹಿ­ಸಿ­ಡಲಾಗಿದ್ದು, ವರ್ಷದಿಂದ ಎಷ್ಟು ಬಾಡಿಗೆ ಪಾವತಿ ಮಾಡಲಾಗಿದೆ ಎಂಬುದು ಅಧಿಕಾರಿಗಳಿಗೂ ಗೊತ್ತಿಲ್ಲ.

patttoiouhhgdjcfjgj

ಪ್ರತಿ ಕ್ವಿಂಟಲ್‌ ಭತ್ತವನ್ನು ಅಕ್ಕಿ ಮಾಡಲು ರಾಜ್ಯ ಸರ್ಕಾರವು ರೂ. 120 ರೂಪಾಯಿ ನೀಡುತ್ತಿತ್ತು.  ಅದನ್ನು ರೂ. 10ಕ್ಕೆ ಇಳಿಸಲಾಯಿತು. ಇದನ್ನು ವಿರೋಧಿಸಿ ಭತ್ತದ ಮಿಲ್‌ ಮಾಲೀಕರು ಹಲ್ಲಿಂಗ್‌ ಮಾಡುವುದರಿಂದ ಹಿಂದೆ ಸರಿದರು. ಭತ್ತ ಗೋದಾಮಿನಲ್ಲಿದ್ದರಿಂದ ಆಹಾರ ನಿಗಮದ ಅಧಿಕಾರಿಗಳೂ ಸಮಸ್ಯೆ ಪರಿಹಾರಕ್ಕೆ ಮುಂದಾಗಲಿಲ್ಲ. ಭತ್ತದ ಸ್ಥಿತಿ ಏನಿದೆ ಎಂಬುದನ್ನು ನೋಡಲಿಕ್ಕೂ ಹೋಗಲಿಲ್ಲ. ಈಗ ಮುಂಗಾರು ಹಂಗಾಮಿನ ಭತ್ತ ಕೊಯ್ಲಿಗೆ ಬಂದಿದೆ. ಮತ್ತೆ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ಗೋದಾ­ಮುಗಳು ಬೇಕಾಗಿರುವುದ­ರಿಂದ ಗೋದಾಮು ಖಾಲಿ ಮಾಡಲು ಇನ್ನಿಲ್ಲದ ಪ್ರಯತ್ನ ಆರಂಭಿಸಿದ್ದಾರೆ.

‘ಪ್ರತಿ ಕ್ವಿಂಟಲ್‌ ಭತ್ತಕ್ಕೆ ರೂ. 75 ನೀಡಿದರೆ ಮಾತ್ರ ಭತ್ತವನ್ನು ಹಲ್ಲಿಂಗ್‌ ಮಾಡಲಾಗುವುದು ಇಲ್ಲದಿದ್ದರೆ ಇಲ್ಲ’ ಎನ್ನುವುದು ಅಕ್ಕಿ ಗಿರಣಿ ಮಾಲೀಕರ ಪಟ್ಟು. ಇದಕ್ಕಾಗಿ ಪ್ರತಿಭಟನೆಯನ್ನು ನಡೆಸಿ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರವು ರೈಸ್‌ಮಿಲ್‌ ಮಾಲೀಕರ ಮನವಿಗೆ ಸ್ಪಂದಿಸಿಲ್ಲ. ಹೆಚ್ಚಳ ಮಾಡುವವರೆಗೂ ಹಲ್ಲಿಂಗ್‌ ಮಾಡು­ವುದಿಲ್ಲ ಎಂದು ರೈಸ್‌ಮಿಲ್‌ನ ಬಹುತೇಕ ಮಾಲೀಕರು ಪಟ್ಟು ಹಿಡಿದಿದ್ದಾರೆ.

‘ಪ್ರತಿ ಕ್ವಿಂಟಲ್‌ ಹಲ್ಲಿಂಗ್‌ ಮಾಡಲು ರೂ. 10 ನಿಗದಿ ಮಾಡಿರುವುದರಿಂದ ಕೆಲವೇ ಕೆಲ ಮಾಲೀಕರು ಮಾತ್ರ ಮುಂದೆ ಬಂದಿದ್ದು, ಅವರಿಗೆ ಭತ್ತವನ್ನು ನೀಡಲಾಗುತ್ತಿದೆ’ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಪಂಚೇಗೌಡ.
‘ಸರ್ಕಾರ ನಿಗದಿಪಡಿಸಿರುವ ದರ ಬಹಳ ಕಡಿಮೆಯಾಗಿದೆ. ಈ ದರದಲ್ಲಿ ಹಲ್ಲಿಂಗ್‌ ಮಾಡಲು ಸಾಧ್ಯವಿಲ್ಲ ಎಂದು ಬಹುತೇಕರು ಹಿಂದೆ ಸರಿದಿದ್ದಾರೆ. ಪ್ರತಿ ಕ್ವಿಂಟಲ್‌ಗೆ ರೂ. 50 ಆದರೂ ನಿಗದಿ ಮಾಡಬೇಕು’ ಎನ್ನುವುದು ರೈಸ್‌ಮಿಲ್‌ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಅವರ ಆಗ್ರಹ.

Write A Comment