ಕರ್ನಾಟಕ

ಲೋಕ ಅದಾಲತ್‌ಗೆ ಬಾರದ ಜನ: ಕಂದಾಯ ವಿಭಾಗದ ದೂರುಗಳೇ ಹೆಚ್ಚು

Pinterest LinkedIn Tumblr

pvec05dec14rjADALAT 01

ಬೆಂಗಳೂರು: ಕಾನೂನು ಸೇವೆಗಳ ಪ್ರಾಧಿ­ಕಾರ ಹಾಗೂ ಬೃಹತ್‌ ಬೆಂಗ­ಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ನಗರದ ಪ್ರಮುಖ ಪ್ರದೇಶಗಳ (ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯ) ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಗುರು­ವಾರ ನಡೆದ ಲೋಕ ಅದಾಲತ್‌ಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ.

ಅದಾಲತ್‌ನಲ್ಲಿ ಪ್ರತಿ ವಲಯಕ್ಕೆ ಒಂದರಂತೆ ಮೂರು ಪ್ರತ್ಯೇಕ ಕೇಂದ್ರ­ಗಳನ್ನು ತೆರೆಯಲಾಗಿತ್ತು. ಆದರೆ, ದಿನದ ಕಲಾಪದ ಅಂತ್ಯಕ್ಕೆ 265 ಪ್ರಕರಣಗಳಷ್ಟೇ ಇತ್ಯರ್ಥಗೊಂಡವು. ಮೂರೂ ವಲಯಗಳಿಗೆ ಸಂಬಂಧಿಸಿಂತೆ ಸಾವಿರಾರು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ ಎಂದು ಅಧಿಕಾರಿಗಳು ಲೆಕ್ಕ ಹಾಕಿದ್ದರು. ಜನ ಅಷ್ಟಾಗಿ ಬರಲಿಲ್ಲ. ಎರಡು ದಿನಗಳ ಈ ಅದಾಲತ್‌ನಲ್ಲಿ ಕನಿಷ್ಠ 2 ಸಾವಿರ ಪ್ರಕರಣಗಳು ಇತ್ಯರ್ಥ­ಗೊಳ್ಳಲಿವೆ ಎಂಬುದು ಬಿಬಿಎಂಪಿ ನಿರೀಕ್ಷೆ.

ಕಂದಾಯ ವಿಭಾಗಕ್ಕೆ ಸಂಬಂಧಿಸಿದ ವ್ಯಾಜ್ಯಗಳೇ ಹೆಚ್ಚಾಗಿದ್ದವು. ಖಾತೆ ನೋಂದಣಿ, ನಕ್ಷೆ ಮಂಜೂರಾತಿ, ಜನನ–ಮರಣ ಪ್ರಮಾಣ ಪತ್ರ, ರಸ್ತೆ ಅಗೆತದಂತಹ ಪ್ರಕರಣಗಳನ್ನು ಸಾರ್ವಜನಿಕರು ಬಗೆಹರಿಸಿಕೊಂಡರು. ಲೋಕ ಅದಾಲತ್‌ ಉದ್ಘಾಟಿಸಿದ ಹೈಕೋರ್ಟ್‌ ನ್ಯಾಯಮೂರ್ತಿ ಎನ್‌.ಕೆ. ಪಾಟೀಲ್‌, ‘ವ್ಯಾಜ್ಯ ಇತ್ಯರ್ಥಕ್ಕೆ ಇದೊಂದು ಒಳ್ಳೆಯ ದಾರಿ’ ಎಂದು ಹೇಳಿದರು. ‘ಕಳೆದ ವರ್ಷ ರಾಜ್ಯದಾ­ದ್ಯಂತ ನಡೆಸಿದ ಲೋಕ ಅದಾಲತ್‌­ಗಳಲ್ಲಿ 2.25 ಲಕ್ಷ ಪ್ರಕರಣಗಳು ಇತ್ಯರ್ಥವಾಗಿದ್ದವು. ಈ ಸಲವೂ ಅಂತ­ಹದ್ದೇ ಸ್ಪಂದನೆ ಸಿಗುವ ಆಶಾವಾದ ಇದೆ’ ಎಂದು ತಿಳಿಸಿದರು.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಲ್ಲಿ ನಡೆಸಿದ ಎರಡು ದಿನಗಳ ಅದಾಲತ್‌ನಲ್ಲಿ ಸಾವಿರಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಳ್ಳುವ ನಿರೀಕ್ಷೆ ಇತ್ತು. ಆದರೆ, 532 ಪ್ರಕರಣಗಳಷ್ಟೇ ಬಗೆಹರಿದವು. ಇಂತಹ ಅದಾಲತ್‌ಗಳ ಪ್ರಯೋಜನವನ್ನು ಜನ ಹೆಚ್ಚಾಗಿ ಪಡೆಯಲು ಪ್ರಚಾರದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಎನ್‌. ಶಾಂತಕುಮಾರಿ, ‘ಸಮಯ ಹಾಗೂ ಹಣ ಉಳಿತಾಯದ ದೃಷ್ಟಿ­ಯಿಂದ ಅದಾಲತ್‌ಗಳ ಸದ್ಬಳಕೆ ಹೆಚ್ಚಬೇಕು’ ಎಂದು ಆಶಿಸಿದರು.

ಐದು ವಲಯಗಳ ದೂರು ಇಂದು ಇತ್ಯರ್ಥ
ಬೊಮ್ಮನಹಳ್ಳಿ, ಯಲಹಂಕ, ಆರ್‌.ಆರ್‌.ನಗರ, ದಾಸರಹಳ್ಳಿ ಹಾಗೂ ಮಹದೇವಪುರ ವಲಯ­ಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಶುಕ್ರವಾರ ಇತ್ಯರ್ಥಪಡಿ­ಸಲಾಗು­ತ್ತದೆ. ಮಲ್ಲೇಶ್ವರ 16ನೇ ಕ್ರಾಸ್‌ನ ಐಪಿಪಿ ಕೇಂದ್ರದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 5ರವರೆಗೆ ಈ ಲೋಕ ಅದಾಲತ್‌ ನಡೆಯಲಿದೆ.

Write A Comment