ಕರ್ನಾಟಕ

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ; ಶೀಘ್ರವೇ ಚಲನಚಿತ್ರ ನೀತಿ: ಸಿ.ಎಂ ಪ್ರಕಟ(UPdated news)

Pinterest LinkedIn Tumblr

pvec05BRYo  Biffes 06

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು. ನಟಿ ಸುಹಾಸಿನಿ ಮಣಿರತ್ನಂ, ನಟ ಯಶ್‌, ಸಚಿವ ರೋಷನ್‌ ಬೇಗ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು, ನಟಿ ಮೇಘನಾ ರಾಜ್‌, ಸಚಿವೆ ಉಮಾಶ್ರೀ ಮತ್ತಿತರರು ಚಿತ್ರದಲ್ಲಿದ್ದಾರೆ -–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿ­ಸಿದಂತೆ ಮುಂದಿನ ಐದು ವರ್ಷಗಳ­ವರೆಗೆ ಜಾರಿಯಲ್ಲಿರುವಂತೆ ಶೀಘ್ರದಲ್ಲೇ ನೂತನ ಚಲನಚಿತ್ರ ನೀತಿ ರೂಪಿಸಲಾ­ಗುವುದು’ ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದರು.

ವಾರ್ತಾ ಇಲಾಖೆಯು ಕರ್ನಾಟಕ ಚಲನ­­ಚಿತ್ರ ಅಕಾಡೆಮಿ ಸಹಯೋಗ­ದೊಂದಿಗೆ ಆಯೋಜಿ­ಸಿರುವ ಏಳನೇ ಬೆಂಗ­ಳೂರು ಅಂತರರಾಷ್ಟ್ರೀಯ ಸಿನಿ­ಮೋ­ತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ಪರಿಣತರೊಂದಿಗೆ ಚರ್ಚಿಸಿ ಸಲಹೆ ಮತ್ತು ಅಭಿಪ್ರಾಯ ಪಡೆದು ಚಲನಚಿತ್ರ ನೀತಿ ರೂಪಿಸ­ಲಾ­ಗುವುದು. ಸ್ಪರ್ಧೆಗೆ ತಯಾರಿ ನಡೆಸಲು ಕನ್ನಡ ಸಿನಿಮಾಗಳಿಗೆ ಈ ನೀತಿಯಿಂದ ಸ್ಫೂರ್ತಿ ಸಿಗಬೇಕು’ ಎಂದು ಹೇಳಿದರು.
‘ಸಿನಿಮೋತ್ಸವ ವ್ಯವಸ್ಥಿತವಾಗಿ ನಡೆ­ಯ­ಬೇಕು. ಅದಕ್ಕಾಗಿ ‘ಶಾಶ್ವತ ಸಿನಿ­ಮೋ­ತ್ಸವ ಘಟಕ’ ಸ್ಥಾಪಿಸಲಾಗುವುದು’ ಎಂದರು.

ಮಲ್ಟಿಪ್ಲೆಕ್ಸ್‌ ಸ್ಥಾಪನೆ: ‘ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಅಂತರ­ರಾಷ್ಟ್ರೀಯ ಕನ್ವೆನ್ಷನ್‌ ಸೆಂಟರ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸೆಂಟರ್‌­ನಲ್ಲಿ ಮುಂದಿನ ವರ್ಷಗಳಲ್ಲಿ ಸಿನಿ­ಮೋತ್ಸವ ಆಯೋಜಿಸಲಾಗು­ವುದು. ಈ ಸೆಂಟರ್‌ ಸಮೀಪ ಆರು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದು ವಾರ್ತಾ ಸಚಿವ ರೋಷನ್‌ ಬೇಗ್‌ ತಿಳಿಸಿದರು.

‘ಇಂಟರ್ನೆಟ್‌, ಡಿ.ವಿ.ಡಿ ಸೇರಿದಂತೆ ವಿವಿಧ ಮಾಧ್ಯಮಗಳ ಅಬ್ಬರದ ಈ ಕಾಲದಲ್ಲಿ ಸಿನಿಮೋತ್ಸವ ಏಕೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಸಿನಿಮಾವೆಂದರೆ ಕೇವಲ ಮನರಂಜನೆ ಅಲ್ಲ. ಸಂಸ್ಕೃತಿ, ಕಲೆ, ತಂತ್ರಜ್ಞಾನ ಇದರಲ್ಲಿ ಅಡಗಿದೆ. ಇಂಥ ಉತ್ಸವಗಳ ಮೂಲಕ ಚರ್ಚಿಸಬಹುದು, ಸಂವಾದ ನಡೆಸಬಹುದು’ ಎಂದು ನಿರ್ದೇಶಕ ಗೋವಿಂದ ನಿಹಲಾನಿ ಹೇಳಿದರು.

ಕನ್ನಡ ಸಿನಿಮಾ ರಕ್ಷಿಸಿ
‘ಕನ್ನಡ ಸಿನಿಮಾವು ಕೃತಕ ಉಸಿರಾಟದ ನೆರವಿನಿಂದ ಬದುಕುತ್ತಿದೆ. ಯಾವುದೇ ನೀತಿಯೂ ಇಲ್ಲ. ನೂತನ ಚಲನಚಿತ್ರ ನೀತಿ ಜಾರಿಗೆ ತರುವ ಮೂಲಕ ಕನ್ನಡ ಸಿನಿಮಾ­ವನ್ನು ಬದುಕಿಸಿ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಮನವಿ ಮಾಡಿದರು.

ನಟಿ ಸುಹಾಸಿನಿ ಮಣಿರತ್ನಂ ಮಾತನಾಡಿ, ‘ಪುಟ್ಟಣ್ಣ ಕಣಗಾಲ್‌ ಸೇರಿದಂತೆ ದೇಶ ಕಂಡ ಅತ್ಯುತ್ತಮ ನಿರ್ದೇಶಕರು ಈ ನಾಡಿನಿಂದ ಬಂದಿದ್ದಾರೆ. ಅದ್ಭುತ ಸಿನಿಮಾಗಳು ಮೂಡಿ­ಬಂದಿವೆ. ಕನ್ನಡ ಸಿನಿಮಾ ದೇಶದ ಸಿನಿ­ಮಾದ ಹೃದಯವಿದ್ದಂತೆ. ಹಾಗಾಗಿ ಕೃತಕ ಉಸಿ­­ರಾಟದ ನೆರವಿನಿಂದ ಬದುಕುತ್ತಿದೆ ಎನ್ನಬೇಡಿ’ ಎಂದು ಹೇಳಿದರು.

170 ಚಿತ್ರಗಳ ಪ್ರದರ್ಶನ
ಡಿ.11ರವರೆಗೆ ನಡೆಯಲಿರುವ ಸಿನಿಮೋತ್ಸವದಲ್ಲಿ 44 ದೇಶಗಳ 170 ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಕನ್ನಡದ 10 ಸಿನಿಮಾಗಳನ್ನು ಪ್ರದರ್ಶಿಸಲಾಗುವುದು.

Write A Comment