ಕರ್ನಾಟಕ

ಅಣಶಿ ರಸ್ತೆ ಅಭಿವೃದ್ಧಿ ಅನಧಿಕೃತ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಆಕ್ಷೇಪ

Pinterest LinkedIn Tumblr

pvec041214dandeli illigal road

ಬೆಂಗಳೂರು: ಅಣಶಿ ದಾಂಡೇಲಿ ಹುಲಿ ಅಭಯಾ­ರಣ್ಯದ ನಡುವೆ ಹಾದು­ಹೋಗುವ ರಾಜ್ಯ ಹೆದ್ದಾರಿಯನ್ನು ವಿಸ್ತರಣೆ ಮಾಡುವ ಸಂದರ್ಭದಲ್ಲಿ ಕಾನೂನು ಪಾಲಿಸಿಲ್ಲ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿ­ಕಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದು­ಕೊಂಡಿದೆ.

ಲೋಂಡಾದಿಂದ ಆರಂಭವಾಗಿ ಹುಲಿ ಅಭಯಾರಣ್ಯದ ಮೂಲಕ ಹಾದು ಸದಾಶಿವಗಡದಲ್ಲಿ ರಾಜ್ಯ ಹೆದ್ದಾರಿ– ೯೫ ಅಂತ್ಯವಾಗುತ್ತದೆ. ಇದರ ಪೈಕಿ ಕಾಡಿನ ಮಧ್ಯದಲ್ಲಿ ಹಾದುಹೋಗುವ ರಸ್ತೆಯನ್ನು ಮೇಲ್ದ­ರ್ಜೆಗೆ ಏರಿಸುವಲ್ಲಿ ಸರ್ಕಾರವೇ ಕಾಯ್ದೆ­ಗಳನ್ನು ಗಾಳಿಗೆ ತೂರಿದೆ ಎಂಬ ಅಂಶ­ವನ್ನು ಪ್ರಾಧಿಕಾರದ ಸಹಾಯಕ ಅರಣ್ಯ ಮಹಾನಿರ್ದೇಶಕಸಿ.ಎಂ.­ಶಿವ­ಕುಮಾರ್‌ ವರದಿ­ಯಲ್ಲಿ  ವಿವರಿಸಿ­ದ್ದಾರೆ.

೨೦೧೪ರ ಫೆಬ್ರುವರಿಯಲ್ಲಿ ತಮಗೆ ಬಂದ ದೂರಿನ ಅನ್ವಯ ಸ್ಥಳ ಪರಿಶೀಲನೆ ನಡೆಸಿದ ಅವರು ರಸ್ತೆ ಅಭಿವೃದ್ಧಿಯಲ್ಲಿ, ೨೦೦೦ ಮತ್ತು ೨೦೦೫ರಲ್ಲಿ ಸುಪ್ರೀಂ­ಕೋರ್ಟ್‌ ನೀಡಿದ ಆದೇಶಗಳು, ಅರಣ್ಯ ಸಂರಕ್ಷಣಾ ಕಾಯ್ದೆ– ೧೯೮೦ರ ಅಡಿ ಪರಿಸರ ಮತ್ತು ಅರಣ್ಯ ಸಚಿವಾಲಯ ನೀಡಿದ ಸೂಚನೆ, ೨೦೦೯ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನೀಡಿದ ಸಲಹೆ ಹಾಗೂ ೧೯೭೨ ವನ್ಯಜೀವಿ ಸಂರಕ್ಷಣಾ ಕಾಯ್ದೆ-– ಈ ಎಲ್ಲವನ್ನೂ ಉಲ್ಲಂಘಿಸಲಾಗಿದೆ ಎಂದಿದ್ದಾರೆ.

ಇದರ ಜೊತೆಯಲ್ಲಿ ತಮ್ಮ ಕಣ್ಣಿನ ಎದುರೇ ಕಾನೂನು ಉಲ್ಲಂಘನೆ­ಯಾಗು­ತ್ತಿದ್ದರೂ ಅರಣ್ಯ ಇಲಾಖೆಯ ಸಿಬ್ಬಂದಿ ಕಾಮಗಾರಿ ತಡೆಯಲು ಯಾವುದೇ ಪ್ರಯತ್ನ ನಡೆಸಿಲ್ಲ. ಕಾಮ­ಗಾ­ರಿಗೆ ತಡೆಯೊಡ್ಡದಂತೆ ಸ್ಥಳೀಯ ಸಚಿವರು ಅಥವಾ ಸ್ಥಳೀಯ ರಾಜ­­ಕಾರ­ಣಿಗಳ ಒತ್ತಡ ಇರಬಹುದು ಎನ್ನುವ ಅನು­ಮಾನವನ್ನು ವ್ಯಕ್ತಪಡಿಸಿದ್ದಾರೆ.

ವಿವರ: ಹುಲಿ ಅಭಯಾರಣ್ಯದ ಹೃದಯ ಭಾಗದಲ್ಲಿ ಹಾದುಹೋಗುವ ಸುಮಾರು ೨೮ ಕಿ.ಮೀ ರಸ್ತೆ ಅಭಿವೃದ್ಧಿಯನ್ನು  ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ (ಕೆ– ಶಿಪ್‌) ಮೂಲಕ ಕೈಗೆತ್ತಿಕೊಳ್ಳಲು ಯೋಜಿಸ­ಲಾಗಿತ್ತು. ಈ ಹಿನ್ನೆಲೆಯಲ್ಲಿ ೨೦೦೩ರಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಲಿಯ ಅನುಮತಿ ಹಾಗೂ ೨೦೦೫ರಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆಯಲಾಗಿತ್ತು. ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿಯ ಅನುಮತಿಯ ನಂತರ ಕಾಮಗಾರಿ ಕೈಗೊಳ್ಳಬಹುದು ಎನ್ನುವ ಷರತ್ತನ್ನು  ಅರಣ್ಯ ಸಚಿವಾಲಯ ವಿಧಿಸಿತ್ತು. ಆದರೆ ನ್ಯಾಯಾಲಯದ ಅನುಮತಿ ದೊರಕದ ಹಿನ್ನೆಲೆಯಲ್ಲಿ ಕೆ–ಶಿಪ್‌ ೨೦೧೦ರಲ್ಲಿ ಹಿಂದೆ ಸರಿದು ಲೋಕೋಪಯೋಗಿ ಇಲಾಖೆಗೆ ಯೋಜನೆಯನ್ನು ಮರಳಿಸಿತು.

ಇದೇ ವರ್ಷದಲ್ಲಿ ಲೋಕೋಪಯೋಗಿ ಇಲಾಖೆ ಸಹ ಕಾಮಗಾರಿಗೆ ಕೇಂದ್ರ ಉನ್ನತಾಧಿಕಾರ ಸಮಿತಿಯ ಅನುಮತಿ ಪಡೆಯಲು ವಿಫಲವಾಯಿತು. ಇದಾದ ನಂತರ ೨೦೧೦ರ ಮಾರ್ಚ್‌ನಲ್ಲಿ ದಾಂಡೇಲಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯು ಪ್ರಾಧಿಕಾರಕ್ಕೆ ಪತ್ರವನ್ನು ಬರೆದು ರಸ್ತೆ ಅಭಿವೃದ್ಧಿಗೆ ಅಗತ್ಯವಾದ ಅನುಮತಿ ನೀಡುವಂತೆ ಕೋರಿದ್ದರು. ಇದಕ್ಕೆ ೨೦೧೧ರ ಜನವರಿಯಲ್ಲಿ ಉತ್ತರ ನೀಡಿದ ಪ್ರಾಧಿಕಾರ ಅರಣ್ಯದೊಳಗೆ ಕಾಮಗಾರಿ ನಡೆಸಲು ಅಗತ್ಯವಿರುವ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿತು.

ಆದರೆ ಈ ಎಲ್ಲಾ ಎಚ್ಚರಿಕೆಗಳನ್ನು ಗಾಳಿಗೆ ತೂರಿರುವ ಲೋಕೋಪಯೋಗಿ ಇಲಾಖೆಯು ೨೦೧೧ರಿಂದ ಇಲ್ಲಿಯವರೆಗೆ ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ನಡೆಸಿದೆ ಎನ್ನುವ ವರದಿಯನ್ನು ಸಹಾಯಕ ಅರಣ್ಯ ಮಹಾನಿರ್ದೇಶಕರು ನೀಡಿದ್ದಾರೆ. ಅಣಶಿ ಪ್ರದೇಶದಲ್ಲಿ ರಸ್ತೆಯನ್ನು ೩.೭ ಮೀಟರ್‌ನಿಂದ ೫.೭ ಮೀಟರ್‌ವರೆಗೆ ವಿಸ್ತರಿಸಲಾಗಿದೆ. ಜೊತೆಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಚರಂಡಿಯನ್ನು ಸಹ ನಿರ್ಮಿಸಲಾಗಿದೆ. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಗೈರು ಹಾಜರಾಗಿದ್ದರು ಎನ್ನುವ ಆಕ್ಷೇಪವನ್ನು ಎತ್ತಿದ್ದಾರೆ.

ಈ ರಸ್ತೆಯ ಜೊತೆಯಲ್ಲಿ ಗುಂದ್‌– ಮಿಂಗೇರಿ ರಸ್ತೆ ಅಭಿವೃದ್ಧಿ ಮತ್ತು ಕಾನೇರಿಯಿಂದ ಕಾನೇರಿ ಸೇತುವೆವರೆಗೆ ಕೊಳವೆ ಅಳವಡಿಸುವಲ್ಲಿಯೂ ನಿಯಮ ಉಲ್ಲಂಘಿಸಲಾಗಿದೆ ಎನ್ನುವ ಅಂಶವನ್ನೂ ಅವರು ಪತ್ತೆ ಮಾಡಿದ್ದಾರೆ. ಹುಲಿ ಅಭಯಾರಣ್ಯದಲ್ಲಿ ಕಾಮಗಾರಿ ನಡೆಸುವಾಗ ತೆಗೆದುಕೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎನ್ನುವ ಅಂಶವನ್ನು ಸಹ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Write A Comment