ಮೈಸೂರು: ಲೈಂಗಿಕ ಕಿರುಕುಳ ನೀಡಿದ ಬೀದಿ ಕಾಮಣ್ಣನನ್ನು ಥಳಿಸಿ ಸಾಹಸ ಮೆರೆದಿದ್ದ ಇಲ್ಲಿನ ಚಾಮುಂಡಿಪುರಂನ ಚೈತ್ರಾ, ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತೊಬ್ಬ ವ್ಯಕ್ತಿಯನ್ನು ಹಿಡಿದು ಬುಧವಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಲಷ್ಕರ್ ಮೊಹಲ್ಲಾದ ನಿವಾಸಿ ಜಮೀರ್ ಅಹಮ್ಮದ್ ಬಂಧಿತ ವ್ಯಕ್ತಿ. ಲೈಂಗಿಕ ಪ್ರಚೋದನೆ ನೀಡಿದ ಆರೋಪದ ಮೇಲೆ ಈತನ ವಿರುದ್ಧ ಇಲ್ಲಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಬುಧವಾರ ಮಧ್ಯಾಹ್ನ ಚೈತ್ರಾ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು. ಚಾಮುಂಡೇಶ್ವರಿಯ ದರ್ಶನ ಪಡೆದು ಮನೆಗೆ ಮರಳಲು ನಗರ ಸಾರಿಗೆ ಬಸ್ ಏರಿದ್ದಾರೆ. ಕೆ.ಆರ್. ಆಸ್ಪತ್ರೆಯ ಮಾರ್ಗವಾಗಿ ಸಂಚರಿಸುವ ಬಸ್ ಯುವತಿಯನ್ನು ಹಾರ್ಡಿಂಜ್ ವೃತ್ತದಲ್ಲಿ ಇಳಿಸಿದೆ. ಅಲ್ಲಿಂದ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ನಡೆದು ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸಾಗುತ್ತಿರುವಾಗ ಈ ಘಟನೆ ನಡೆದಿದೆ.
ಘಟನೆಯ ವಿವರ: ‘ರಾಜಪಥದ ಪಾದಚಾರಿ ಮಾರ್ಗದಲ್ಲಿ ಹಾಡುಕೇಳುತ್ತಾ ಹೆಜ್ಜೆಹಾಕುತ್ತಿದ್ದೆ. ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬರು ಹಿಂಬಾಲಿಸುತ್ತಿರುವ ಅನುಮಾನ ಕಾಡತೊಡಗಿತು. ಚಾಮರಾಜೇಂದ್ರ ಒಡೆಯರ್ ವೃತ್ತ ದಾಟಿದಾಗಲೂ ಬೈಕ್ ನನ್ನ ಹಿಂದೆಯೇ ಇತ್ತು. ಇದು ನನ್ನ ಗಮನಕ್ಕೆ ಬಂದಿರುವುದನ್ನು ಅರಿತ ಜಮೀರ್ ಹತ್ತಿರಕ್ಕೆ ಬಂದನು. ನಿಮ್ಮನ್ನು ಎಲ್ಲೋ ನೋಡಿದ ಹಾಗಿದೆ ಎಂದು ಮಾತು ಶುರುಮಾಡಿದ. ಮೂರು ವರ್ಷಗಳ ಹಿಂದೆ ‘ಎಟಿಎಸ್’ ಇಂಡಸ್ಟ್ರೀಸ್ ನಲ್ಲಿ ಪರಿಚಯವಾಗಿದ್ದೀರಿ ಎಂದಾಗ ಸಂಶಯ ವ್ಯಕ್ತವಾಯಿತು. ಆಗ ನಾನು ಬೆಂಗಳೂರಿನ ಕಾಂತಿ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೆ’ ಎಂದು ಚೈತ್ರಾ ಮಾಹಿತಿ ನೀಡಿದರು.
‘ಮನಸ್ಸಿಗೆ ಬೇಜಾರಾಗಿದೆ ದ್ವಿಚಕ್ರ ವಾಹನದಲ್ಲಿ ಬರುವಿರಾ’ ಎಂಬ ಆಹ್ವಾನ ನೀಡಿದ. ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾದ ಪರಿಣಾಮ ಅನತಿ ದೂರದ ಗರುಡಾ ಮಾಲ್ ಬಳಿ ವಾಹನ ನಿಲುಗಡೆ ಮಾಡಿದ. ಅಲ್ಲಿಗೆ ತೆರಳಿ ಬೈಕಿನ ಕೀ ಕಿತ್ತುಕೊಂಡೆ. ಆಗ ಗಾಬರಿಯಾದ ಆರೋಪಿ ಎತ್ತರದ ಧ್ವನಿಯಲ್ಲಿ ಕೂಗಾಡಿದ. ಅಲ್ಲೇ ಸಮೀಪದಲ್ಲಿದ್ದ ಆಟೊ ಚಾಲಕರು ನೆರವಿಗೆ ಬಂದರು. ಆತನನ್ನು ಹಿಡಿದು, ಸಂಚಾರ ಪೊಲೀಸರಿಗೆ ಒಪ್ಪಿಸಿದರು’ ಎಂದು ಘಟನೆಯನ್ನು ವಿವರಿಸಿದರು.
‘ಮಹಿಳೆಯರ ಸಹನೆಯನ್ನೇ ಬಂಡ ವಾಳ ಮಾಡಿಕೊಂಡ ಅನೇಕರು ಈ ರೀತಿ ಅನುಚಿತವಾಗಿ ವರ್ತಿಸುತ್ತಿ ದ್ದಾರೆ. ಯುವತಿಯರು ಧೈರ್ಯದಿಂದ ವರ್ತಿಸಿದರೆ ಕಾಮುಕರಿಗೆ ತಕ್ಕಪಾಠ ಕಲಿಸಬಹುದು.’ ಎಂದು ಚೈತ್ರಾ ಅಭಿಪ್ರಾಯಪಟ್ಟರು.
ಸಂಶಯದ ನಡೆ: ಕೈಹಿಡಿದು ಎಳೆದ ಸಮೀರ್ ಎಂಬ ಬೀದಿ ಕಾಮಣ್ಣನನ್ನು ಥಳಿಸಿದ್ದ ಚೈತ್ರಾ, ಎರಡು ದಿನಗಳ ಬಳಿಕ ಮತ್ತೊಬ್ಬನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವುದು ಹಲವು ಅನುಮಾನ ಗಳನ್ನು ಹುಟ್ಟುಹಾಕಿದೆ. ಯುವತಿಯ ನಡೆಯನ್ನು ಪೊಲೀಸರೇ ಸಂಶಯದಿಂದ ನೋಡುತ್ತಿದ್ದಾರೆ. ಪೊಲೀಸರಿಗೆ ಯುವತಿ ಹಲವು ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ.
