ಕರ್ನಾಟಕ

ವಿಶ್ವ ಅಂಗವಿಕಲರ ದಿನಾಚರಣೆ: ವಿಶೇಷ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಪ್ರದಾನ;‘ಸ್ವಾಮೀಜಿಗಳೇ ಎಲ್ಲಿದ್ದೀರಿ? ಇತ್ತ ನೋಡಿ…’

Pinterest LinkedIn Tumblr

News

ಬೆಂಗಳೂರು: ‘ರೀ ಸ್ವಾಮೀಜಿಗಳೇ,  ದೇವ ಮಾನವರೇ ಎಲ್ಲಿದ್ದೀರಿ…? ಕಷ್ಟದಲ್ಲಿರುವ ಈ ಅಂಗವಿಕಲ ಮಕ್ಕಳತ್ತ ನಿಮ್ಮ ದೃಷ್ಟಿ ಹರಿಸಿ.  ಇಂಥ ಅಂಗವಿಕಲ ಮಕ್ಕಳಿಗೆ ಸಹಾಯ ಮಾಡದ ನೀವು ಏನು  ಮಾಡುತ್ತಿದ್ದೀರಿ? ಬನ್ನಿ ಕಾಪಾಡಿ’
–ಈ ರೀತಿ ವ್ಯಂಗ್ಯವಾಗಿ ಹೇಳಿದ್ದು ವಾರ್ತಾ ಸಚಿವ ರೋಷನ್‌ ಬೇಗ್‌. ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋ­ಜಿಸಿದ್ದ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಂಕಷ್ಟದಲ್ಲಿರುವ ಇಂಥ ಮಕ್ಕಳಿಗೆ ಸಹಾಯ ಕಲ್ಪಿಸದಿದ್ದರೆ ಯಾವ ಪಕ್ಷ, ಯಾವ ಧರ್ಮ, ಯಾವ ಜಾತಿ ಅಧಿಕಾರದಲ್ಲಿದ್ದರೇನು ಪ್ರಯೋ­ಜನ? ಸ್ವಾಮೀಜಿಗಳು, ದೇವ ಮಾನವರು ಏನು ಮಾಡುತ್ತಿದ್ದಾರೆ? ಈ ಮಕ್ಕಳಿಗೆ ಸಹಾಯ ಮಾಡಲು ನಿಮ್ಮ ಕೈಯಿಂದ ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸಿದ ಸ್ವಯಂ­ ಸೇವಾ ಸಂಸ್ಥೆಗಳು, ಶಿಕ್ಷಕರು ಹಾಗೂ ವಿಶೇಷ ಸಾಧನೆ ಮಾಡಿದವರಿಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರೋಷನ್‌ ಬೇಗ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ವಿಶಿಷ್ಟ ಸಾಧನೆ ಮಾಡಿರುವ ಎರಡು ಸಂಸ್ಥೆಗಳಿಗೆ ತಲಾ  ರೂ.50 ಸಾವಿರ, ಎಂಟು ವಿವಿಧ ಸಂಸ್ಥೆಗಳಿಗೆ ತಲಾ ರೂ.25 ಸಾವಿರ, ನಾಲ್ವರು ವಿಶೇಷ ಶಿಕ್ಷಕರಿಗೆ ತಲಾ ರೂ.10 ಸಾವಿರ ಹಾಗೂ 15 ಮಂದಿಗೆ ವೈಯಕ್ತಿಕ ಪ್ರಶಸ್ತಿ ತಲಾ ರೂ. 15 ಸಾವಿರ ನಗದು ಹಾಗೂ ಫಲಕ ನೀಡಲಾಯಿತು.

ಅಶ್ವಿನ್‌ ಕಾರ್ತಿಕ್‌ಗೆ ಸನ್ಮಾನ: ಅಂಗವೈಕಲ್ಯ ಮೆಟ್ಟಿ­-ನಿಂತು ಎಂಜಿನಿಯರಿಂಗ್‌ ಪದವಿ ಪೂರೈಸಿ ಎಂಫಸಿಸ್‌ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿ­ಯಾಗಿರುವ ಅಶ್ವಿನ್‌ ಕಾರ್ತಿಕ್‌ ಹಾಗೂ ಅವರ ತಾಯಿ ಪ್ರಭಾ ನಾಗರಾಜ್‌ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮಕ್ಕಳಿಗೆ ಪ್ರಶಸ್ತಿ ಅರ್ಪಣೆ: ಸಂಸ್ಥೆಗಳಿಗೆ ನೀಡುವ ವಿಶೇಷ ಪ್ರಶಸ್ತಿ ಸ್ವೀಕರಿಸಿದ ಸಮರ್ಥನಂ ಅಂಗವಿಕಲರ ಸಂಸ್ಥೆಯ ಮಾಲ್ತೇಶ್‌ ಅವರು ಪ್ರಶಸ್ತಿಯನ್ನು ಅಂಗವಿಕಲ ಮಕ್ಕಳಿಗೆ ಅರ್ಪಿಸಿದರು.

ಚಿತ್ರ ಬಿಡಿಸುತ್ತಾ ಕನಸು ಕಂಡೆ…: ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮಂಗಳೂರಿನ ಕೆ.ಎಸ್‌.ಸುಧಾರತ್ನ ಅವರಿಗೆ ಎರಡೂ ಕಾಲುಗಳಲ್ಲಿ ಸ್ವಾಧೀನ ಇಲ್ಲ. ಎರಡೂ ಕೈಗಳು ಊನವಾಗಿವೆ. ಆದರೆ, ಚಿತ್ರಕಲೆಯಲ್ಲಿ ಇವರು ಎತ್ತಿದ ಕೈ.

‘ಎಡಗೈ ಕಿರುಬೆರಳು ಹಾಗೂ ಹೆಬ್ಬೆರಳ ಸಹಾಯ­ದಿಂದ ಚಿತ್ರ ಬಿಡಿಸುತ್ತೇನೆ. ಚಿತ್ರ ಬಿಡಿಸು­ತ್ತಲೇ ಹಲವು ಕನಸು ಕಂಡೆ. ಚಿತ್ರಗಳನ್ನು ನೋಡಿ ಗಣ್ಯ ವ್ಯಕ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೊಡ್ಡ ಕಲಾವಿದೆಯಾಗಬೇಕೆಂಬ ಆಸೆ ಇದೆ’ ಎಂದರು.

18 ವರ್ಷದವರೆಗೆ ಆರ್‌ಟಿಐ ವಿಸ್ತರಣೆ: ‘ಅಂಗ­ವಿಕಲ ಮಕ್ಕಳಿಗೆ 18 ವರ್ಷದವರೆಗೆ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಉಚಿತ ಹಾಗೂ ಕಡ್ಡಾಯ ಶಿಕ್ಷಣ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ’ ಎಂದು ಸಚಿವೆ ಉಮಾಶ್ರೀ ಪ್ರಕಟಿಸಿದರು.

‘ಈಗ 6ರಿಂದ 14 ವರ್ಷ ವಯಸ್ಸಿನೊಳಗಿನ ಅಂಗವಿಕಲ ಮಕ್ಕಳು ಆರ್‌ಟಿಐ ಸೌಲಭ್ಯ ಪಡೆಯು­ತ್ತಿದ್ದಾರೆ. ಅದನ್ನು 18 ವರ್ಷದವರೆಗೆ ವಿಸ್ತರಿಸಲಾ­ಗುವುದು. ಶಾಲಾ ಎಸ್‌ಡಿಎಂಸಿ ಸಮಿತಿಯಲ್ಲಿ ಅಂಗವಿಕಲ ಮಕ್ಕಳ ತಂದೆಯೊಬ್ಬರು ಸದಸ್ಯರಾ­ಗಲು ಅವಕಾಶ ಕಲ್ಪಿಸಲಾಗುವುದು’ ಎಂದರು.

ಎರಡೂವರೆ ಗಂಟೆ ಕಾದ ಮಕ್ಕಳು
ಕಾರ್ಯಕ್ರಮಕ್ಕೆ ಬೆಳಿಗ್ಗೆ 9 ಗಂಟೆಗೆ ಬರಲು ಸಂಘಟಕರು ವಿವಿಧ ಅಂಗವಿಕಲರ ಸಂಸ್ಥೆಗಳಿಗೆ ಸೂಚನೆ ನೀಡಿದ್ದರು. ಅದರಂತೆ  ಹೇಳಿದ ಸಮಯಕ್ಕೆ ಮಕ್ಕಳನ್ನು ಕರೆದುಕೊಂಡು ಬಂದು ಆಸೀನರಾಗಿದ್ದರು. 10 ಗಂಟೆಗೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ, ಸಚಿವರು ಬಂದಿದ್ದು 11.30ಕ್ಕೆ. ಇದರಿಂದಾಗಿ ದೂರದ ಪ್ರದೇಶಗಳಿಂದ ಬಂದಿದ್ದ ಅಂಗವಿಕಲ ಮಕ್ಕಳು ಸುಮಾರು ಎರಡೂವರೆ ಗಂಟೆ ಕಾಯಬೇಕಾಯಿತು.

Write A Comment