ಬೆಂಗಳೂರು: ಮೂರು ವರ್ಷದೊಳಗೆ ರಾಜ್ಯದ ಎಲ್ಲ ಕೃಷಿ ಜಮೀನುಗಳ ಮಣ್ಣಿನ ತಪಾಸಣೆ ಮಾಡಿ ಸಮಗ್ರ ಮಾಹಿತಿಯುಳ್ಳ ‘ಮಣ್ಣಿನ ಆರೋಗ್ಯ ಕಾರ್ಡ್’ಗಳನ್ನು ರೈತರಿಗೆ ವಿತರಿಸಲಾಗು ವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಳುವರಿ ಸುಧಾರಣೆಗಾಗಿ ಮಣ್ಣಿನ ಆರೋಗ್ಯ ಪರೀಕ್ಷೆ ಅಭಿಯಾನ ಹಮ್ಮಿಕೊಳ್ಳ ಲಾಗಿದೆ. ರೈತರ ಜಮೀನುಗಳಿಗೆ ತೆರಳಿ, ಮಣ್ಣಿನ ಮಾದರಿ ಸಂಗ್ರಹಿಸ ಲಾಗುವುದು. ಅದನ್ನು ಪರೀಕ್ಷಿಸಿದ ಬಳಿಕ ಮಣ್ಣಿನಲ್ಲಿರುವ ವಿವಿಧ ಅಂಶಗಳ ಪ್ರಮಾಣದ ಸಮಗ್ರ ಮಾಹಿತಿಯನ್ನು ಕಾರ್ಡ್ನಲ್ಲಿ ಮುದ್ರಿಸಿ ನೀಡಲಾಗುವುದು’ ಎಂದರು.
ರೂ. 80 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ಮಣ್ಣು ಪರೀಕ್ಷೆ ನಡೆಸುವ ಪ್ರಯೋಗಾಲಯಗಳ ಸ್ಥಾಪನೆ ಮತ್ತು ನಿರ್ವಹಣೆಗಾಗಿ ಟೆಂಡರು ಆಹ್ವಾನಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಯೋಜನೆಗೆ ಚಾಲನೆ ನೀಡಲಾ ಗುವುದು. ಕೃಷಿ ಇಲಾಖೆಯ 23 ಮಣ್ಣು ಪರೀಕ್ಷಾ ಕೇಂದ್ರಗಳಿದ್ದು ಅವುಗಳನ್ನೂ ಈ ಅಭಿಯಾನಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
23 ಜಿಲ್ಲೆಗಳಲ್ಲಿ ಕೃಷಿಭಾಗ್ಯ: ರಾಜ್ಯದ 23 ಜಿಲ್ಲೆಗಳಲ್ಲಿ ಕೃಷಿಭಾಗ್ಯ ಯೋಜನೆ ಅನುಷ್ಠಾನ ಪ್ರಗತಿಯಲ್ಲಿದೆ. 1.78 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದು, 44,940 ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ. 27,757 ಅರ್ಜಿದಾರರ ಜಮೀನುಗಳ ಜಂಟಿ ಪರಿಶೀಲನೆ ಪೂರ್ಣಗೊಂಡಿದೆ ಎಂದು ವಿವರ ನೀಡಿದರು. ಮಳೆಯ ನೀರನ್ನು ಪೂರ್ಣವಾಗಿ ಸಂರಕ್ಷಿಸಿ ಬಳಸಿಕೊಳ್ಳಲು ಕೃಷಿ ಹೊಂಡ ನಿರ್ಮಾಣಕ್ಕೆ ನೆರವು ನೀಡಲಾಗುವುದು. ಕೃಷಿ ಹೊಂಡಕ್ಕೆ ಪಾಲಿಥೀನ್ ಹೊದಿಕೆ ಹಾಕಿ ನೀರು ಸಂಗ್ರಹಿಸಲಾಗುವುದು.
1.28 ಕೋಟಿ ಟನ್ ನಿರೀಕ್ಷೆ
ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಸೆಪ್ಟೆಂಬರ್ ಅಂತ್ಯದವರೆಗೆ 69.35 ಲಕ್ಷ ಹೆಕ್ಟೇರ್ನಲ್ಲಿ (ಶೇಕಡ 94) ಬಿತ್ತನೆಯಾಗಿದೆ. 1.35 ಕೋಟಿ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ ಇತ್ತು. ಈಗ 1.28 ಕೋಟಿ ಟನ್ ಉತ್ಪಾದನೆ ನಿರೀಕ್ಷಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಮೆಕ್ಕೆಜೋಳ ಖರೀದಿ
ರಾಜ್ಯ ಸರ್ಕಾರವೇ ಪ್ರತಿ ಕ್ವಿಂಟಲ್ಗೆ ರೂ.1,310ರ ದರದಲ್ಲಿ ಮೆಕ್ಕೆಜೋಳ ಖರೀದಿಸಲಿದೆ. ಈ ತಿಂಗಳ ಎರಡನೆ ವಾರದಲ್ಲಿ ಖರೀದಿ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು. ಆಹಾರ ಧಾನ್ಯಗಳ ನೇರ ಖರೀದಿಗೆ ಮಾತ್ರ ನೆರವು ನೀಡುವುದಾಗಿ ಹೇಳುತ್ತಿರುವ ಕೇಂದ್ರ ಸರ್ಕಾರವು ರೈತರ ಕೃಷಿ ಉತ್ಪನ್ನಗಳ ಖರೀದಿಗೆ ನೀಡುತ್ತಿದ್ದ ಸಹಾಯಧನ ಕಡಿತ ಮಾಡುವ ಹುನ್ನಾರ ನಡೆಸಿದೆ ಎಂದು ದೂರಿದರು.
‘ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 30 ವರ್ಷಗಳಿಂದ ಮೆಕ್ಕೆ ಜೋಳ ಖರೀದಿ ಮಾಡಲಾಗುತ್ತಿತ್ತು. ಆದರೆ, ಮೆಕ್ಕೆ ಜೋಳವನ್ನು ಆಹಾರ ಧಾನ್ಯವಾಗಿ ಬಳಕೆ ಮಾಡದಿರುವ ಕಾರಣದಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬಾರದು ಎಂದು ಕೇಂದ್ರ ಆಹಾರ ಇಲಾಖೆ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಇದರ ಹಿಂದೆ ಸಹಾಯಧನ ಕಡಿತದ ಕುತಂತ್ರ ಅಡಗಿದೆ’ ಎಂದು ಆರೋಪಿಸಿದರು.
