ಕರ್ನಾಟಕ

ವೈದ್ಯಕೀಯ ಪರೀಕ್ಷೆಗೆ ಹೈಕೋರ್ಟ್‌ ಅಸ್ತು: ರಾಘವೇಶ್ವರಶ್ರೀಗೆ ಹಿನ್ನಡೆ

Pinterest LinkedIn Tumblr

pvec18BRY ragveswar-Guru-1

ಬೆಂಗಳೂರು: ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರದ  ಆರೋಪಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ.

ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ಅವರ ಏಕಸದಸ್ಯ ಪೀಠವು ಈ ಸಂಬಂಧ ಕಾಯ್ದಿರಿಸಿದ್ದ ಆದೇಶವನ್ನು ಬುಧವಾರ ಪ್ರಕಟಿಸಿತು. ‘ಅಪರಾಧ ಪ್ರಕ್ರಿಯಾ ಸಂಹಿತೆಯ  53 ಎ ಕಲಂನ ಕಾನೂನು ಬದ್ಧತೆಯನ್ನು  ಪ್ರಶ್ನಿಸಿರುವ ಅರ್ಜಿದಾರರ ಆಕ್ಷೇಪ­ದಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅತ್ಯಾಚಾರ ಮತ್ತು ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದ ಪ್ರಕರಣ­ದಲ್ಲಿ ಸತ್ಯವನ್ನು ಒರೆಗೆ ಹಚ್ಚುವ ವಿಷಯದಲ್ಲಿ ಈ ಕಾಯ್ದೆ ಸಂವಿಧಾನಕ್ಕೆ  ಅನುಗುಣವಾಗಿಯೇ ಇದೆ. ಇಂತಹ ವೈದ್ಯಕೀಯ ಪರೀಕ್ಷೆಯಿಂದ ಯಾವುದೇ ಕ್ರಿಮಿ­ನಲ್ ಆರೋಪಿಯ ಮೂಲಭೂತ ಹಕ್ಕುಗಳಿಗೆ ಭಂಗ ಉಂಟಾ­ಗುವುದಿಲ್ಲ’ ಎಂದು ಪೀಠ  ಅಭಿಪ್ರಾಯ­ಪಟ್ಟಿದೆ.

‘ಆರೋಪಿಯ ಜೀವರಸಗಳನ್ನು ಪಡೆಯುವುದ­ರಿಂದ ಸತ್ಯವನ್ನು ಒರೆಗೆ ಹಚ್ಚಲು ತನಿಖೆಗೆ ಸಹಾಯ­ವಾಗುತ್ತದೆ.  ಈ ಕಾನೂನು ಪೊಲೀಸರಿಂದ ದುರ್ಬಳಕೆ ಆಗುತ್ತದೆ ಎಂಬ ಆರೋಪ ಸಮರ್ಥನೀಯ ಅಲ್ಲ’ ಎಂದು ಅದು ಹೇಳಿದೆ. ಮಧ್ಯಾಹ್ನ 2.30ಕ್ಕೆ ಕಲಾಪ ಆರಂಭವಾಯಿತು. ಇದಾದ ಕೆಲ ಹೊತ್ತಿನಲ್ಲೇ ನ್ಯಾಯಮೂರ್ತಿಗಳು 50 ಪುಟಗಳ ಆದೇಶದ ಆಯ್ದ ಭಾಗಗಳನ್ನು 32 ನಿಮಿಷಗಳಲ್ಲಿ ಓದಿ ಮುಗಿಸಿದರು.

ಶುರುವಾಗಿದ್ದು ಹೇಗೆ?: ವೈದ್ಯಕೀಯ ಪರೀಕ್ಷೆಗೆ ಹಾಜ­ರಾಗು­ವಂತೆ ಸಿಐಡಿ ಪೊಲೀಸರು ಶ್ರೀಗಳಿಗೆ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಶ್ರೀಗಳು ಸಿಐಡಿ ಪೊಲೀಸರಿಗೆ, ‘ನೀವು ವೈದ್ಯಕೀಯ ಪರೀಕ್ಷೆ ಎಂದರೆ ಏನೇನು ತಪಾ­ಸಣೆ ಮಾಡುತ್ತೀರಿ ಎಂಬುದರ ಪಟ್ಟಿ ಕೊಡಿ’ ಎಂದು ಕೇಳಿದ್ದರು.

ಆಗ ಸಿಐಡಿ, ‘ನಮಗೆ ಸಾಕ್ಷ್ಯಕ್ಕಾಗಿ ಏನೇನು ಅವಶ್ಯಕತೆ ಇದೆಯೊ ಅವೆಲ್ಲವನ್ನೂ ಅಂದರೆ ರಕ್ತ, ವೀರ್ಯ, ಬೆವರು ಜೀವರಸ ಇತ್ಯಾದಿಗಳನ್ನು ಪಡೆಯು­ತ್ತೇವೆ’ ಎಂದು ವಿವರಿಸಿತ್ತು. ‘ಇತ್ಯಾದಿಗಳು ಎಂದರೆ ಏನು ಎಂಬುದನ್ನು  ವಿವರಿಸಿ’ ಎಂದು ಶ್ರೀಗಳು ಕೇಳಿ­ದ್ದರು. ಇದಕ್ಕೆ ಸಿಐಡಿ, ‘ತನಿಖೆಗೆ ಏನೇನು ಅಗತ್ಯ­ವಿದೆಯೋ ಅದೆಲ್ಲ’ ಎಂದು ತಿಳಿಸಿತ್ತು.

ಇದು ‘ವ್ಯಕ್ತಿಯ ಹಕ್ಕುಗಳಿಗೆ ಭಂಗ ತರುವಂಥದ್ದು’ ಎಂದು ಸ್ವಾಮೀಜಿ ಕೋರ್ಟ್ ಮೆಟ್ಟಿಲೇರಿದ್ದರು. ‘ಆರೋಪಿಯ ದೇಹದಿಂದ ಯಾವುದಾದರೂ ಜೀವ­ರಸ ಅಥವಾ ಕೂದಲು, ಉಗುರು ಇತ್ಯಾದಿ ಹೊರ­ತೆಗೆ­ಯು­ವಾಗ ಆತನ ಅಥವಾ ಆಕೆಯ ಒಪ್ಪಿಗೆ ಇರಬೇಕು. ಇಲ್ಲದಿದ್ದರೆ ಸಂವಿಧಾನದ 21ನೇ ಅನುಚ್ಛೇದದ ಅಡಿ ವೈಯಕ್ತಿಕ ಹಕ್ಕಿಗೆ ಚ್ಯುತಿ ಉಂಟಾಗುತ್ತದೆ. ಅಲ್ಲದೆ 13, 14 ಮತ್ತು 20 (3) ವಿಧಿಗಳನ್ನೂ ಮೊಟಕು ಮಾಡಿದಂತಾಗುತ್ತದೆ’ ಎಂದು ಪ್ರತಿಪಾದಿಸಿದ್ದರು.

ಸ್ವಾಮೀಜಿಗೆ ನೋಟಿಸ್‌
‘ವೈದ್ಯಕೀಯ ಪರೀಕ್ಷೆಗೆ ಹೈಕೋರ್ಟ್ ಅನುಮತಿ ನೀಡಿರು­ವು­ದ­ರಿಂದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಗೆ ಗುರುವಾರ (ಡಿ.4) ವಿಚಾರಣೆಗೆ ಹಾಜರಾ­ಗುವಂತೆ ನೋಟಿಸ್‌ ಜಾರಿ ಮಾಡ­ಲಾಗಿದೆ. ಅವರೊಂದಿಗೆ ಚರ್ಚಿಸಿ ವೈದ್ಯಕೀಯ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ’ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

Write A Comment