ಕರ್ನಾಟಕ

3 ವರ್ಷದ ವಿದ್ಯಾರ್ಥಿನಿ ಮೇಲೆ ಎರಡು ಬಾರಿ ಅತ್ಯಾಚಾರ : ಬೆಂಗಳೂರು ಖಾಸಗಿ ಶಾಲೆಯಲ್ಲಿ ಮತ್ತೊಂದು ಹೀನ ಕೃತ್ಯ

Pinterest LinkedIn Tumblr

rape1

ಬೆಂಗಳೂರು, ಡಿ.3: ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೋಷಕರು ಆತಂಕದ ಕ್ಷಣಗಳನ್ನು ಎದುರಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಘಟನೆ ನಗರದಲ್ಲಿ ಸಂಭವಿಸಿದೆ. ಬೆಂಗಳೂರಿನ ಖಾಸಗಿ ಶಾಲೆಯ ಮೂರು ವರ್ಷದ ವಿದ್ಯಾರ್ಥಿನಿ ಮೇಲೆ ಗುಮಾಸ್ತನೇ ಎರಡು ಬಾರಿ ಅತ್ಯಾಚಾರ ನಡೆಸಿರುವ ಆತಂಕಕಾರಿ ಘಟನೆ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಖಾಸಗಿ ಶಾಲೆಯ ಗುಮಾಸ್ತ ನಾಗರಾಜ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಅತ್ಯಾಚಾರಕ್ಕೊಳಗಾಗಿರುವ ವಿದ್ಯಾರ್ಥಿನಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ: ಹಳೇ ಮದ್ರಾಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಕಳೆದ ನ.26 ಮತ್ತು 28ರಂದು ಕಾಮುಕ ನಾಗರಾಜ್ ವಿದ್ಯಾರ್ಥಿನಿ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿರುವುದು ವೈದ್ಯಕೀಯ ವರದಿಯಿಂದ ಸಾಬೀತಾಗಿದೆ.

ನ.26ರಂದು ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ಚಾಕೊಲೇಟ್ ಕೊಡುವ ನೆಪದಲ್ಲಿ ಶೌಚಾಲಯಕ್ಕೆ ಕರೆದೊಯ್ದು ನಾಗರಾಜ್ ಅತ್ಯಾಚಾರ ನಡೆಸಿದ್ದ. ಇಷ್ಟಕ್ಕೆ ತನ್ನ ವಿಕೃತ ಕೃತ್ಯವನ್ನು ನಿಲ್ಲಿಸದ ಈ ಕಾಮುಕ ಪುನಃ ನ.28ರಂದು ಎರಡನೇ ಬಾರಿ ಇದೇ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಡೆದಿರುವ ಘಟನೆಯನ್ನು ತಂದೆ-ತಾಯಿ, ಇಲ್ಲವೇ ಶಾಲಾ ಸಿಬ್ಬಂದಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ.

ಎರಡು ಬಾರಿ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ತಾಯಿ ವಿಚಾರಿಸಿದಾಗ ತನಗೆ ಆರೋಗ್ಯ ಸರಿಯಿಲ್ಲ ಎಂದು ಸಬೂಬು ಹೇಳಿದ್ದಳು. ತನಗೆ ತಲೆನೋವು ಮತ್ತು ರಕ್ತಸ್ರಾವವಾಗುತ್ತಿದೆ ಎಂದು ತಾಯಿ ಬಳಿ ವಿದ್ಯಾರ್ಥಿನಿ ಹೇಳಿದ್ದಾಳೆ. ತಕ್ಷಣವೇ ಅನುಮಾನಗೊಂಡ ಪೋಷಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆಗಲೇ ಎರಡು ಬಾರಿ ಅತ್ಯಾಚಾರಕ್ಕೊಳಗಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು.

ತಕ್ಷಣವೇ ವೈದ್ಯರು ತಮ್ಮ ಮಗಳ ಮೇಲೆ ಅತ್ಯಾಚಾರ ನಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು. ಕೂಡಲೇ ನಗರದ ಅಂಬೇಡ್ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಯಿತು. ವಿದ್ಯಾರ್ಥಿನಿ ಮೇಲೆ ಎರಡು ಬಾರಿ ಅತ್ಯಾಚಾರ ನಡೆದಿರುವುದು ವೈದ್ಯರು ಖಚಿತಪಡಿಸಿದರು. ಕೂಡಲೇ ಪೋಷಕರು ಪೂರ್ವ ವಿಭಾಗ ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿನಿ ನೀಡಿದ ಮಾಹಿತಿ ಮೇರೆಗೆ ಶಾಲಾ ಗುಮಾಸ್ತ ನಾಗರಾಜ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ ಶಾಲಾ ಆಡಳಿತ ಮಂಡಳಿಯಿಂದಲೂ ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ವಿದ್ಯಾರ್ಥಿನಿ ಹೇಳಿಕೆ ಆಧರಿಸಿ ಶಾಲಾ ಗುಮಾಸ್ತ ನಾಗರಾಜ್‌ನನ್ನು ಬಂಧಿಸಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ. ನಾವು ಎಲ್ಲಾ ದೃಷ್ಟಿಕೋನದಿಂದಲೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಶಾಲಾ ಆಡಳಿತ ಮಂಡಳಿಯನ್ನು ಸಾಧ್ಯವಾದರೆ ವಿಚಾರಣೆಗೆ ಒಳಪಡಿಸಲಾಗುವುದು.
– ಅಲೋಕ್ ಕುಮಾರ್ , ಹೆಚ್ಚುವರಿ ಪೊಲೀಸ್ ಆಯುಕ್ತ.

Write A Comment